“ಕಡಲ ತೀರದ ಭಾರ್ಗವ’ ಎನ್ನುವ ಹೆಸರಿನಲ್ಲಿ ಸಿನಿಮಾವೊಂದು ತಯಾರಾಗುತ್ತಿರುವುದು ಗೊತ್ತಿರಬಹುದು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಈಗಾಗಲೇ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಕಡಲ ತೀರದ ಭಾರ್ಗವ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇನ್ನು “ಕಡಲ ತೀರದ ಭಾರ್ಗವ’ ಎಂದ ಕೂಡಲೇ ಮೊದಲು ನೆನಪಾಗುವುದು ಹಿರಿಯ ಸಾಹಿತಿ ಶಿವರಾಮ ಕಾರಂತರ ಹೆಸರು.
ಆದರೆ ಈ ಸಿನಿಮಾಕ್ಕೂ ಶಿವರಾಮ ಕಾರಂತರ ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಚಿತ್ರತಂಡದ ಸ್ಪಷ್ಟನೆ. ಇನ್ನು ಈ ಸಿನಿಮಾದಲ್ಲಿ ನಾಯಕ ಹೆಸರು ಭಾರ್ಗವ ಎಂಬುದಾಗಿದ್ದು, ಆತ ಕಡಲ ತೀರದವನಾಗಿರುತ್ತಾನೆ. ಇನ್ನೊಂದು ರೀತಿಯಲ್ಲಿ ವಿಷ್ಣುವಿನ ಆರನೇ ಅವತಾರ ಪರಶುರಾಮ. ಆತನನ್ನು ಭಾರ್ಗವ ರಾಮ ಎಂತಲೂ ಕರೆಯುತ್ತಾರೆ.
ಇದನ್ನೂ ಓದಿ;- ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ : ಮುತಾಲಿಕ್
ಭಾರ್ಗವ ರಾಮ ಸಾವಿಲ್ಲದವನಾಗಿದ್ದು, ದುಷ್ಟ ಕ್ಷತ್ರಿಯರನ್ನು ದ್ವಂಸ ಮಾಡುತ್ತಾನೆ. ನಾಯಕನ ಪಾತ್ರದಲ್ಲೂ ಇಂಥ ಗುಣಗಳಿರುವುದರಿಂದ ಚಿತ್ರದ ಕಥಾಹಂದಕ್ಕೆ ಸೂಕ್ತ ಎಂಬ ಕಾರಣಕ್ಕೆ “ಕಡಲ ತೀರದ ಭಾರ್ಗವ’ ಎಂಬ ಟೈಟಲ್ ಇಟ್ಟಿದ್ದೇವೆ ಎಂಬುದು ಚಿತ್ರತಂಡ ವಿವರಣೆ. ನವ ಪ್ರತಿಭೆ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ “ಕಡಲ ತೀರದ ಭಾರ್ಗವ’ ಚಿತ್ರದಲ್ಲಿ ಶೃತಿ ಪ್ರಕಾಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪನ್ನಗ ಸೋಮಶೇಖರ್ ನಿರ್ದೇಶನವಿದೆ.