Advertisement

ಯಾವಾಗ ಗುರು ನಮ್‌ ಬಾಸ್‌ ಸಿನ್ಮಾ? ಫ್ಯಾನ್ಸ್‌ ಪ್ರಶ್ನೆಗೆ ಉತ್ತರಿಸೋದೇ ನಿರ್ಮಾಪಕರಿಗೆ ಸವಾಲು

10:10 AM Aug 06, 2021 | Team Udayavani |

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಸಂಪೂರ್ಣವಾಗಿ ಬಂದ್‌ ಆಗಿದ್ದ ಥಿಯೇಟರ್‌ ಗಳಿಗೆ, ಜುಲೈ 19ರಿಂದ ಮತ್ತೆ 50% ರಷ್ಟು ಪ್ರೇಕ್ಷಕರ ಪ್ರವೇಶದೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ 50% ರಷ್ಟು ಪ್ರೇಕ್ಷಕರ ಪ್ರವೇಶ ಅವಕಾಶ ಇಟ್ಟುಕೊಂಡು ಥಿಯೇಟರ್‌ ಮುನ್ನೆಡೆಸುವುದು ಕಷ್ಟವಾಗಿದ್ದರಿಂದ, ಬಹುತೇಕ ಥಿಯೇಟರ್‌ ಮಾಲೀಕರು ಎರಡು-ಮೂರು ವಾರ ಕಾದುನೋಡಲು ಮುಂದಾಗಿದ್ದರು.

Advertisement

ಆರಂಭದಲ್ಲಿ ಆಗಸ್ಟ್‌ ಮೊದಲ ವಾರದಿಂದ ರಾಜ್ಯದಲ್ಲಿ ಥಿಯೇಟರ್‌ಗಳಲ್ಲಿ 100%ರಷ್ಟು ಪ್ರೇಕ್ಷಕರ ಪ್ರವೇಶಾತಿಗೆ ಅವಕಾಶ ಸಿಗಲಿದೆ ಎನ್ನಲಾಗಿತ್ತು. ಹೀಗಾಗಿ ಬಿಡುಗಡೆಗೆ ಸಿದ್ಧವಿರುವ ಬಹುತೇಕ ಸಿನಿಮಾಗಳ ನಿರ್ಮಾಪಕರು ಆಗಸ್ಟ್‌ ಮೊದಲ ವಾರದ ಬಳಿಕ ತಮ್ಮ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುವ ಯೋಚನೆಯಲ್ಲಿದ್ದರು.

ಇದರ ಬೆನ್ನಲ್ಲೇ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ “ಸಲಗ’, “ಭಜರಂಗಿ-2′ ಹೀಗೆ ಒಂದಷ್ಟು ಬಿಗ್‌ ಬಜೆಟ್‌ ಮತ್ತು ಬಿಗ್‌ ಸ್ಟಾರ್‌ ಸಿನಿಮಾಗಳು ತಮ್ಮ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದರಿಂದ, ಚಿತ್ರರಂಗದಲ್ಲಿ ಮತ್ತೆ ಒಂದಷ್ಟು ನಿರೀಕ್ಷೆ, ಬಿಡುಗಡೆ ಚಟುವಟಿಕೆ ಸಣ್ಣಗೆ ಗರಿಗೆದರಿತ್ತು. ಇನ್ನು ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ ಆದರೆ ಮತ್ತೆ ತಮ್ಮ ಸಿನಿಮಾಗಳ ರಿಲೀಸ್‌ಗೆ ಥಿಯೇಟರ್‌ ಕೊರತೆ ಎದುರಾಗಬಹುದು ಎಂಬ ಲೆಕ್ಕಚಾರದಿಂದ ಒಂದಷ್ಟು ಹೊಸಬರ ಸಿನಿಮಾಗಳು ಈ ಗ್ಯಾಪ್‌ ನಲ್ಲಿಯೇ ತೆರೆಗೆ ಬರೋಣ ಎಂದು ಅಂದಾಜಿಸಿದ್ದವು.

ಆದರೆ ಈಗ ಆ ಎಲ್ಲ ಅಂದಾಜು, ಲೆಕ್ಕಾಚಾರ, ಯೋಜನೆಗಳು ಮತ್ತೆ ತಲೆಕೆಳಗಾಗುವಂತೆ ಕಾಣುತ್ತಿದೆ. ಹೌದು, ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ನಿಧಾನವಾಗಿ ಏರಿಕೆಯಾಗುತ್ತಿರುವುದರಿಂದ, ಕೋವಿಡ್‌ ಮೂರನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಹೀಗಾಗಿ, ಸದ್ಯದ ಮಟ್ಟಿಗೆ ಸರ್ಕಾರ ಥಿಯೇಟರ್‌ಗಳಲ್ಲಿ 100%ರಷ್ಟು ಪ್ರೇಕ್ಷಕರ ಪ್ರವೇಶಾವಕಾಶ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನೂ ಕೆಲವು ವಾರ ಈಗಿರುವಂತೆಯೇ 50% ರಷ್ಟು ಪ್ರೇಕ್ಷಕರ ಪ್ರವೇಶ ನಿರ್ಬಂಧಿತ ಮುಂದುವರೆಯಲಿದೆಯಾ? ಅಥವಾ ಮತ್ತೂಮ್ಮೆ ಸರ್ಕಾರ ಥಿಯೇಟರ್‌ ಗಳ ಬಾಗಿಲು ಹಾಕುವಂತೆ ಹೇಳುತ್ತದೆಯಾ? ಎಂಬ ಬಗ್ಗೆಯೂ ಯಾವ ಸ್ಪಷ್ಟತೆಯೂ ಇಲ್ಲ.

Advertisement

ಇದರಿಂದ ಸಿನಿಮಾಗಳ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಅನೇಕ ನಿರ್ಮಾಪಕರು ಮತ್ತೆ ಕೆಲ ದಿನಗಳ ಕಾಲ ಕಾದು ನೋಡುವಂತಾಗಿದೆ. ಇದು ನಿರ್ಮಾಪಕರ ಕಥೆಯಾದರೆ, ಇನ್ನು ಪ್ರದರ್ಶಕರ ಕಥೆ ಬೇರೆಯದ್ದೇ ಆಗಿದೆ. ಇದೇ ಏಪ್ರಿಲ್‌ ತಿಂಗಳಲ್ಲಿ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ, ರಾಜ್ಯದ ಎಲ್ಲ ಥಿಯೇಟರ್‌ಗಳು ಸಂಪೂರ್ಣವಾಗಿ ಬಂದ್‌ ಆಗಿದ್ದವು. ಅದಾದ ಬಳಿಕ ಸುಮಾರು ಮೂರು ತಿಂಗಳ ನಂತರ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದ್ದರೂ, ಕಳೆದ ಎರಡು ವಾರಗಳಿಂದ ಯಾವುದೇ ಸಿನಿಮಾಗಳು ಬಿಡುಗಡೆಗೆ ಆಗದಿದ್ದರಿಂದ, ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ ಒಂದು ರೀತಿಯ ಅಘೋಷಿತ ಲಾಕ್‌ಡೌನ್‌ ಇನ್ನೂ ಮುಂದುವರೆದಂತಿದೆ.

ಸಿನಿಮಾಗಳ ಬಿಡುಗಡೆಯಿಲ್ಲದೆ ರಾಜ್ಯದ ಎಲ್ಲ ಥಿಯೇಟರ್‌ಗಳು ಬಿಕೋ ಎನ್ನುತ್ತಿವೆ. ಸದ್ಯದ ಮಟ್ಟಿಗೆ 100%ರಷ್ಟು ಪ್ರೇಕ್ಷಕರ ಪ್ರವೇಶಾವಕಾಶಕ್ಕೆ ಅನುಮತಿ ಸಿಗುವುದಿರಲಿ, ಈಗಾಗಲೇ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿರುವ ಸಿನಿಮಾಗಳೂ ಅಂದುಕೊಂಡಂತೆ ರಿಲೀಸ್‌ ಆಗಲಿವೆ ಎಂಬ ಬಗ್ಗೆ ಖಾತ್ರಿ ಇಲ್ಲ. ಹೀಗಿರುವಾಗ ಥಿಯೇಟರ್‌ ಬಾಗಿಲು ತೆಗೆದು ಕೂತರೆ, ಬರುವ ಕಲೆಕ್ಷನ್‌ನಿಂದ ನಮಗೆ ಥಿಯೇಟರ್‌ಗಳ ನಿರ್ವಹಣ ವೆಚ್ಚವನ್ನೂ ಭರಿಸಲಾಗುವುದಿಲ್ಲ.

ಈಗಿನ ಪರಿಸ್ಥಿತಿಯಲ್ಲಿ ಥಿಯೇಟರ್‌ ಬಾಗಿಲು ತೆರೆದರೆ, ಲಾಭಕ್ಕಿಂತ ನಷ್ಟವೇ ಜಾಸ್ತಿ. ಸುಮಾರು ಒಂದೂವರೆ ವರ್ಷದಿಂದ ಕೋವಿಡ್‌ ಹೊಡೆತದ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಥಿಯೇಟರ್‌ ಮಾಲೀಕರು, ಮತ್ತೂಮ್ಮೆ ಥಿಯೇಟರ್‌ ತೆರೆದು ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವುದು ರಾಜ್ಯದ ಬಹುತೇಕ ಥಿಯೇಟರ್‌ ಮಾಲೀಕರ ಅಭಿಪ್ರಾಯ. ಇತ್ತ ಕಡೆ ಅಭಿಮಾನಿಗಳು ಕೂಡಾ ತಮ್ಮ ನೆಚ್ಚಿನ ನಟನ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಯಾ ನಿರ್ಮಾಪಕರಿಗೆ “ಯಾವಾಗ್‌ ಗುರು ನಮ್‌ ಬಾಸ್‌ ಸಿನ್ಮಾ’ ಎಂದು ಕೇಳುವ ಜೊತೆಗೆ ಬೇಗನೇ ರಿಲೀಸ್‌ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next