Advertisement
ಹಲ್ಲೆ ಮತ್ತು ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದುನಿಯಾ ವಿಜಯ್ ಮತ್ತು ಅವರ ಸ್ನೇಹಿತರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಭಾನುವಾರ ಕೋರ್ಟಿಗೆ ರಜೆಯಿದ್ದ ಕಾರಣ ಕೋರಮಂಗಲ NGVನಲ್ಲಿರುವ ನ್ಯಾಯಮೂರ್ತಿ ಮಹೇಶ್ ಬಾಬು ಅವರ ಎದುರು ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರು ವಿಜಯ್ ಮತ್ತು ಇನ್ನಿತರ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ನೀಡಿದರು.
ಬೆಂಗಳೂರು: ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ರಾತ್ರಿ ನಡೆದ ಜಗಳವೊಂದು ಘರ್ಷಣೆಗೆ ತಿರುಗಿ ಖ್ಯಾತ ನಟ ದುನಿಯಾ ವಿಜಯ್ ಮತ್ತು ಬೆಂಬಲಿಗರ ಬಂಧನಕ್ಕೆ ಕಾರಣವಾಗಿದೆ. ಜಿಮ್ ಟ್ರೈನರ್ ಆಗಿರುವ ಪಾನಿಪುರಿ ಕಿಟ್ಟಿ ಅವರ ತಮ್ಮನ ಮಗ ಮಾರುತಿ ಗೌಡ ಎನ್ನುವ ಯುವಕನನ್ನು ದುನಿಯಾ ವಿಜಿ ಮತ್ತು ಮೂವರು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.
Related Articles
Advertisement
ಎಸಿಪಿ ರವಿಶಂಕರ್ ಅವರು ದುನಿಯಾ ವಿಜಯ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರಸಾದ್ ಎನ್ನುವ ವ್ಯಕ್ತಿ ಜಗಳಕ್ಕೆ ಕಾರಣ ಎಂದು ಪಾನಿಪುರಿ ಕಿಟ್ಟಿ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.
ಗಂಭೀರವಾಗಿ ಹಲ್ಲೆಗೊಳಗಾದ ಮಾರುತಿ ಗೌಡ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತುಟಿಗಳು ಒಡೆದಿದ್ದು, ಕಣ್ಣಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಆಸ್ಪತ್ರೆಗೆ ಸಿಸಿಬಿ ಪೊಲೀಸರು ಆಗಮಿಸಿ ಹೇಳಿಕೆ ಪಡೆದುಕೊಂಡಿದ್ದಾರೆ.
ದುನಿಯಾ ವಿಜಯ್ ಅವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಹಲ್ಲೆ ನಡೆಸಿದ್ದು ನಾನೇ ಎಂದು ವಿಜಯ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ವಿಜಯ್ ಮತ್ತು ಇತರ ಆರೋಪಿಗಳನ್ನು ಜಡ್ಜ್ ನಿವಾಸದಲ್ಲಿ ಜಾಮೀನಿಗಾಗಿ ಹಾಜರುಪಡಿಸುವ ಸಾಧ್ಯತೆಗಳಿವೆ.