Advertisement

ಸೆಂಟಿಮೆಂಟ್‌ ರುಕ್ಕು ಮೂರು ವರ್ಷಗಳ ನಂತರ…

06:00 AM Nov 17, 2017 | Harsha Rao |

ಮೂರು ವರ್ಷಗಳ ಹಿಂದೆ “ರುಕ್ಕು’ ಎಂಬ ಸಿನಿಮಾ ಆರಂಭವಾಗಿರೋದು ನಿಮಗೆ ನೆನಪಿರಬಹುದು. ಆ ಚಿತ್ರ ಏನಾಯಿತು ಎಂದು ನೀವು ಕೇಳುವ ಮುನ್ನವೇ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಹೌದು, ಚಿತ್ರತಂಡವೆಲ್ಲಾ ಸೇರಿಕೊಂಡು ಚಿತ್ರದ ಆಡಿಯೋ ಬಿಡುಗಡೆ ಮಾಡಿತು. ಬಸವರಾಜು ಬಳ್ಳಾರಿ ಈ ಚಿತ್ರದ ನಿರ್ದೆಶಕರು. “ರುಕ್ಕು’ ಚಿತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ ನಿರ್ದೇಶಕರು ಎಂದು ನೀವು ಕೇಳಬಹುದು. “ಇದೊಂದು ಹಳ್ಳಿಕಥೆ. ಇಡೀ ಸಿನಿಮಾ ಹಳ್ಳಿಯ ಹಿನ್ನೆಲೆಯಲ್ಲೇ ನಡೆಯುತ್ತದೆ’ ಎನ್ನುವುದು ನಿರ್ದೇಶಕರ ಮಾತು. ನಿರ್ದೇಶಕ ಬಸವರಾಜ ಬಳ್ಳಾರಿಯವರು ಈ ಸಿನಿಮಾ ಮಾಡಲು ಕಾರಣ ನಾಯಕ ಶ್ರೇಯಸ್‌ ಅಂತೆ. ಅದೊಂದು ದಿನ ನಾಯಕ ಶ್ರೇಯಸ್‌ ಒಂದು ಕಥೆಯೊಂದಿಗೆ ಬಂದರಂತೆ. ಕಥೆ ಕೇಳಿದ ಬಸವರಾಜು ಅವರಿಗೆ ಈ ಸಿನಿಮಾದಲ್ಲಿ ಒಳ್ಳೆಯ ಅಂಶಗಳಿವೆ ಎಂದೆನಿಸಿ, ಸುಮಾರು ಮೂರು ತಿಂಗಳುಗಳ ಕಾಲ ಕೂತು ಸ್ಕ್ರಿಪ್ಟ್ ಸಿದ್ಧಪಡಿಸಿದರಂತೆ. ಅಂತಿಮವಾಗಿ ಸಿನಿಮಾ ಮುಗಿದಿದೆ. “ಚಿತ್ರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಹೇಳಿದ್ದೇವೆ. ಮುಖ್ಯವಾಗಿ ಇಲ್ಲಿ ಸೆಂಟಿಮೆಂಟ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಸಿನಿಮಾ ನೋಡಿ ಹೊರಬರುವಾಗ ಖಂಡಿತ ಕಣ್ಣೀರು ಬರುತ್ತದೆ’ ಎಂದು ಸಿನಿಮಾ ಬಗ್ಗೆ ವಿಶ್ವಾಸದಿಂದ ಮಾತನಾಡುತ್ತಾರೆ. ಸುಮಾರು 30 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಸಿನಿಮಾ ನೈಜವಾಗಿ ಮೂಡಿಬಂದಿದೆ ಎನ್ನಲು ಅವರು ಮರೆಯಲಿಲ್ಲ. 

Advertisement

ಚಿತ್ರದ ನಾಯಕ ಶ್ರೇಯಸ್‌ ಹೆಚ್ಚು ಮಾತನಾಡಲಿಲ್ಲ. ಅವರಿಲ್ಲಿ ತ್ಯಾಗ ಮಾಡುವ ತ್ಯಾಗಮಯಿಯಾಗಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿ ಗಟ್ಟಿತನವಿರುವುದರಿಂದ ಜನ ಇಷ್ಟಪಡುವ ವಿಶ್ವಾಸ ಕೂಡಾ ಅವರಿಗಿದೆ. ನಾಯಕಿ ವೇಗ ರಮ್ಯಾ ಮೈಕ್‌ ಎತ್ತಿಕೊಂಡು “ನೀವೇನಾದರೂ ಕೇಳಿ’ ಎಂದು ಪತ್ರಕರ್ತರಿಗೆ ಹೇಳಿದರೇ ಹೊರತು ಅವರಾಗಿ ಏನನ್ನೂ ಹೇಳುವ ಗೋಜಿಗೆ ಹೋಗಲಿಲ್ಲ. ಚಿತ್ರಕ್ಕೆ ಎ.ಟಿ.ರವೀಶ್‌ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಸನ್ನಿವೇಶಕ್ಕನುಗುಣವಾಗಿ ಇದ್ದು, ಸೊಗಸಾದ ಹಾಡುಗಳನ್ನು ಕೊಟ್ಟಿದ್ದಾರಂತೆ. ಚಿತ್ರದಲ್ಲಿ ಆರು ಹಾಡುಗಳಿವೆ ಎಂದು ವಿವರ ನೀಡಿದರು ರವೀಶ್‌. 

ಚಿತ್ರಕ್ಕೆ ಸತೀಶ್‌ ಬಾಬು ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರ ನೋಡುವಾಗಲೇ ಅವರಿಗೆ ಈ ಸಿನಿಮಾದಲ್ಲಿ ಹೊಸತನವಿದೆ ಎಂದು ಗೊತ್ತಾಯಿತಂತೆ. ಹಾಗಾಗಿ, ಸನ್ನಿವೇಶಕ್ಕನುಗುಣವಾಗಿ ಹಿನ್ನೆಲೆ ಸಂಗೀತ ನೀಡಿದ್ದಾಗಿ ಹೇಳಿಕೊಂಡರು. ಚಿತ್ರದಲ್ಲಿ ನಾಗೇಂದ್ರ ಅರಸ್‌ ಸಂಕಲನದ ಜೊತೆಗೆ ಒಂದು ಪಾತ್ರ ಕೂಡಾ ಮಾಡಿದ್ದಾರೆ. ಉಳಿದಂತೆ ಸಾಧು ಕೋಕಿಲ, ತಿಲಕ್‌, ಸತ್ಯಜಿತ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next