Advertisement

ಮರಳು ತುಂಬಿದ ಲಾರಿ ಟಿಪ್ಪರ್‌ ಹಾಯ್ದು ಬಾಲಕ ಸಾವು: ಟಿಪ್ಪರ್‌ಗೆ ಬೆಂಕಿ

10:05 AM Mar 28, 2022 | Team Udayavani |

ಕಲಬುರಗಿ: ಮರಳು ಸಾಗಿಸುತ್ತಿದ್ದ ಟಿಪ್ಪರ್‌ ವೊಂದು ನಗರದ ಬಿದ್ದಾಪುರ ಬಡಾವಣೆಯ ಪ್ಲೈ ಓವರ್‌ ಬಳಿ ಬಾಲಕನ ಮೇಲೆ ಹಾಯ್ದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಘಟನೆಯಿಂದ ರೊಚ್ಚಿಗೆದ್ದ ಜನರು ಟಿಪ್ಪರ್‌ ಗೆ ಬೆಂಕಿ ಇಟ್ಟು, ಕಲ್ಲು ತೂರಾಟ ನಡೆಸಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.

Advertisement

ನಗರದ ಬಿದ್ದಾಪುರ ಬಡಾವಣೆಯ ಪ್ರಕೃತಿ ಕಾಲೋನಿ ನಿವಾಸಿ ಮನೀಷ್‌ ಮಲ್ಲಿಕಾರ್ಜುನ ಹರವಾಳಕರ್‌ (8) ಅಪಘಾತದಲ್ಲಿ ಮೃತಪಟ್ಟ ಬಾಲಕ.

ಈತ ತನ್ನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಟೈಲರ್‌ ಅಂಗಡಿಗೆ ಹೋಗುವ ಸಂದರ್ಭದಲ್ಲಿ ರಸ್ತೆ ದಾಟುವಾಗ ಫ್ಲೈ ಓವರ್‌ ಮೇಲೆ ಹೈಕೋರ್ಟ್‌ ಕಡೆಯಿಂದ ಬಂದ ಮರಳು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಾಲಕನಿಗೆ ಢಿಕ್ಕಿ ಹೊಡೆದಿದೆ.

ಟಿಪ್ಪರ್‌ ಚಕ್ರ ಬಾಲಕನ ಮೇಲೆ ಹರಿದಿದ್ದರಿಂದ ದೇಹ ನಜ್ಜುಗುಜ್ಜಾಗಿದೆ. ಕಣ್ಣೆದುರಿಗೆ ಹೆತ್ತ ಮಗ ಪ್ರಾಣ ಬಿಟ್ಟಿದ್ದನ್ನು ಕಂಡು ಪೋಷಕರು ಆಘಾತಕ್ಕೊಳಗಾದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆ ಸಂಭವಿಸುತ್ತಲೇ ಸುತ್ತಲಿನ ಜನರು ಜಮಾವಣೆಯಾಗಿ ಚಾಲಕನನ್ನು ಹಿಡಿದು ಥಳಿಸಲು ಮುಂದಾದರು. ಈ ವೇಳೆಗೆ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಹೆಚ್ಚಿನ ಜನರು ಜಮಾವಣೆಯಾಗಿ ಪ್ರತಿಭಟನೆ ಆರಂಭಿಸಿದರು. ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಟಿಪ್ಪರ್‌ಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ರೊಚ್ಚಿಗೆದ್ದ ಜನರು ಟಿಪ್ಪರ್‌ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಬೆಳ್ಳಾರೆ ಆಸ್ಪತ್ರೆ ತೆರೆದಿದ್ದರೂ ಕಾಣಿಸದ ವೈದ್ಯರು, ಸಿಬಂದಿ!

ಬಿದ್ದಾಪುರ ಕಾಲೋನಿಯ ಪ್ಲೈ ಓವರ್‌ ಸುತ್ತಮುತ್ತ ಹಲವು ಶಾಲೆಗಳಿಗೆ ನಿತ್ಯ ಮಕ್ಕಳು ಓಡಾಡುತ್ತಿರುತ್ತಾರೆ. ಮನೆಯಿಂದ ಆಚೆ ಹೋಗಬೇಕಾದರೆ ಫ್ಲೈ ಓವರ್‌ ರಸ್ತೆ ದಾಟಿಕೊಂಡು ಹೋಗಬೇಕು. ಈ ವೇಳೆ ಮೇಲಿಂದ ವೇಗವಾಗಿ ವಾಹನಗಳು ಬರುವುದರಿಂದ ಅವಘಡಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಅಲ್ಲದೇ ಪಾದಚಾರಿಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಜನರನ್ನು ಸಮಧಾನಗೊಳಿಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಮ್ಸ್  ಗೆ ಸಾಗಿಸಿದರು. ಡಿಸಿಪಿಗಳಾದ ಅಡ್ಮೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಎಸಿಪಿಗಳಾದ ಸುಧಾ ಆದಿ, ಗಿರೀಶ್‌ ಎಸ್‌.ಬಿ, ಇನ್ಸ್‌ಪೆಕ್ಟರ್‌ಗಳಾದ ಅಮರೇಶ, ಪಂಡಿತ ಸಗರ, ಸಿದ್ದರಾಮೇಶ, ಶಾಂತಿನಾಥ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂಚಾರ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next