Advertisement
ಜಿಲ್ಲಾ ಮತ್ತು ತಾಲೂಕು ಆಡಳಿತಾಧಿಕಾರಿಗಳು ವಿಧಾನಸಭಾ ಚುನಾವಣೆಯಲ್ಲಿ ತಮ್ಮದೆಯಾದ ಕಾರ್ಯ ಒತ್ತಡದಲ್ಲಿ ಇರುವುದನ್ನು ಮನಗಂಡು ಸ್ಥಳೀಯರು, ಶಿಂಷಾನದಿ ಪಾತ್ರದಲ್ಲಿ ಮರಳು ತೆಗೆಯುವುದಲ್ಲಿ ನಿರತರಾಗಿದ್ದಾರೆ. ಮರಳು ತೆಗೆಯದಂತೆ 144 ಸೆಕ್ಷನ್ ಜಾರಿ ಮಾಡಿದ್ದರೂ, ಶಿಂಷಾನದಿ ಪ್ರದೇಶದಲ್ಲಿ ಹೆಗ್ಗಿಲ್ಲದೆ ಮರಳು ದಂಧೆ ಸಾಗುತ್ತಿದೆ. ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಸಮೀಪದ ಇಗ್ಗಲೂರು, ಕೊಕ್ಕರೆಬೆಳ್ಳೂರು ಬಳಿಯ ಶಿಂಷಾ ನದಿಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಹಲವು ತೊಂದರೆಗಳು ಕಾದಿವೆ.
Related Articles
Advertisement
ಕೊಕ್ಕರೆಬೆಳ್ಳೂರು- ತೊರೆಚಾಕನಹಳ್ಳಿಯಲ್ಲಿ ಮರಳು ಸಾಗಾಟ ನಡೆಯುತ್ತಿದ್ದರೂ, ಪೊಲೀಸ್ ಅಧಿಕಾರಿಗಳು ಕ್ರಮವಹಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಮರಳು ದಂಧೆ ಕಡಿವಾಣಕ್ಕೆ ಮದ್ದೂರು ತಹಶೀಲ್ದಾರ್, ಉಪವಿಭಾಗಾಧಿಕಾರಿ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಳು ದಂಧೆ ಸಾಮಗ್ರಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದರು. ಆದರೂ, ಅದನ್ನು ಲೆಕ್ಕಿಸದೆ ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ ನಡೆಯುತ್ತಿದೆ.
ರಸ್ತೆ ಅವ್ಯವಸ್ಥೆ: ಭಾರತೀನಗರ, ಕ್ಯಾತಘಟ್ಟ, ಅಜ್ಜಹಳ್ಳಿ, ಮಠದದೊಡ್ಡಿ, ನಗರಕೆರೆ, ಬನ್ನಳ್ಳಿ ಹೀಗೆ ಅನೇಕ ಗ್ರಾಮೀಣದಲ್ಲಿ ಹಾಕಿರುವ ಡಾಂಬರೀಕರಣ ರಸ್ತೆಗಳು ಮರಳು ದಂಧೆಯಿಂದ ಕಿತ್ತುಹೋಗುತ್ತಿವೆ. ಏತನೀರಾವರಿಗೆ ಧಕ್ಕೆ: ಶಿಂಷಾನದಿಯ ವ್ಯಾಪ್ತಿಯಲ್ಲಿ 22 ಏತನೀರಾವರಿಗಳಿದ್ದು, ಪಂಪ್‌ಸೆಟ್‌ಗಳ ಮೂಲಕ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡಿಕೊಳ್ಳುವ ಮೂಲಕ ಉತ್ತಮ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಮರಳು ದಂಧೆಯಿಂದ ಏತನೀರಾವರಿಗೂ ದುರಂತ ಬಂದಿದೆ.
ಇಗ್ಗಲೂರು ಡ್ಯಾಂಗೆ ಅಪಾಯ: ದೇವೇಗೌಡರವರು ಇಗ್ಗಲೂರು ಬಳಿ ಡ್ಯಾಮ್ ನಿರ್ಮಿಸಿ ನೀರಾವರಿ ಯೋಜನೆ ಕಲ್ಪಿಸಿದ್ದರು. ಈಗ ಮರಳು ದಂಧೆಯಿಂದ ಡ್ಯಾಂಗೆ ಅಪಾಯ ಬಂದಿದೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನಮುರಿದು ಹೋರಾಟ ನಡೆಸದಿದ್ದರೆ ಅಪಾಯ ಬರುವುದು ಸತ್ಯ. ಪಕ್ಷಿಗಳ ಸಂಖ್ಯೆ ಇಳಿಮುಖ: ಆಹಾರಕ್ಕಾಗಿ ಶಿಂಷಾನದಿ ಪಾತ್ರದಲ್ಲಿರುವ ಕೊಕ್ಕರೆಬೆಳ್ಳೂರಿಗೆ ವಿದೇಶದ ವಿವಿಧ ರೀತಿಯ ಕೊಕ್ಕರೆಗಳು ವಂಶಾಭಿವೃದ್ದಿಗಾಗಿ ವಲಸೆ ಬಂದು ಪಕ್ಷಿಧಾಮದಂತಾಗಿ, ಈ ವಿಶಿಷ್ಟ ಕೊಕ್ಕರೆಗಳು ಅಕ್ರಮ ಮರಳು ಸಾಗಾಣಿಕೆಯಿಂದ ಇಳಿಮುಖ ಗೊಳ್ಳುವಂತಾಗಿದೆ. ಅಲ್ಲದೆ, ನದಿ ದಂಡೆಯಲ್ಲಿ ಮರಳು ತುಂಬುವವರ ಸಂಖ್ಯೆ ಹೆಚ್ಚಿರುವುದರಿಂದ ಈ ಪಕ್ಷಿಗಳು ಆಹಾರಕ್ಕೆ ನದಿಗಿಳಿಯಲು ಹೆದರುತ್ತಿವೆ.
ದಂಧೆಯ ಲಾಭದಲ್ಲಿ ಒಂದು ಭಾಗವನ್ನು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೇರಿದಂತೆ ಬಹುತೇಕ ಪ್ರಭಾವಿ ವ್ಯಕ್ತಿಗಳಿಗೆ ಹಂಚಲಾಗುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು. ● ಮರೀಗೌಡ, ಬನ್ನಹಳ್ಳಿ
ಮದ್ದೂರು ತಾಲೂಕಿನಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನು ಈಗಾಗಲೇ ಕಡಿವಾಣ ಹಾಕಿ, ಒಂದು ಹಂತಕ್ಕೆ ತರಲಾಗದೆ. ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ ನಡೆಯುತ್ತಿರುವಾಗ ನಮ್ಮ ಗಮನಕ್ಕೆ ಸಾರ್ವಜನಿಕರು ತಂದರೆ ಕೂಡಲೇ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳುತ್ತೇವೆ. ● ಟಿ.ಎನ್.ನರಸಿಂಹಮೂರ್ತಿ, ತಹಶೀಲ್ದಾರ್ ಮದ್ದೂರು
ಮರಳು ದಂಧೆ ಸ್ಥಳಕ್ಕೆ ದಾಳಿ ಮಾಡಿ, ದಂಧೆಗೆ ಉಪಯೋಗಿ ಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸುತ್ತಿದ್ದೇವೆ. ● ಆನಂದ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಂ.ದೊಡ್ಡಿ
– ಅಣ್ಣೂರು ಸತೀಶ್