Advertisement

ಉಡುಪಿ : ಅ. 5ರಿಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮರಳು ಲಭ್ಯ…ಪಡೆಯುವುದು ಹೇಗೆ?

11:34 AM Sep 20, 2022 | Team Udayavani |

ಮಣಿಪಾಲ : ಹೊಸ ಮರಳು ನೀತಿಯಲ್ಲಿ ಸೂಚಿಸಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹಳ್ಳ ಮತ್ತು ಕೆರೆಗಳಲ್ಲಿ ಈಗಾಗಲೇ ಗುರುತಿಸಿರುವ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳನ್ನು ಅ. 5ರಿಂದ ತೆಗೆಯಲು ಸಂಬಂಧಪಟ್ಟ ಗ್ರಾ.ಪಂ.ಗಳಲ್ಲಿ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿ.ಪಂ. ಸಿಇಒ ಪ್ರಸನ್ನ ಎಚ್‌. ಹೇಳಿದರು.

Advertisement

ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡುವ ತಂತ್ರಾಂಶ ಬಳಕೆ ಬಗ್ಗೆ ಪಂ.ಗಳ ಅಧ್ಯಕ್ಷರು, ತಾ.ಪಂ. ಇಒ ಮತ್ತು ಪಿಡಿಒಗಳಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹೊಸ ಮರಳು ನೀತಿ 2020-21ರಂತೆ ಮೊದಲನೇ, ಎರಡನೇ, ಮೂರನೇ ಶ್ರೇಣಿಯ ಹಳ್ಳ ಮತ್ತು ತೊರೆಗಳಲ್ಲಿರುವ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳು ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಕಾರ್ಕಳ, ಹೆಬ್ರಿ, ಕಾಪು, ಕುಂದಾಪುರ, ಬೈಂದೂರು ತಾ.ಪಂ. ವ್ಯಾಪ್ತಿಯ 35 ಮರಳು ನಿಕ್ಷೇಪಗಳಲ್ಲಿ ಒಟ್ಟು 49,903 ಮೆ.ಟನ್‌ ಪ್ರಮಾಣದ ಮರಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಪಡೆಯುವುದು ಹೇಗೆ?
ಮರಳು ನಿಕ್ಷೇಪಗಳನ್ನು ತೆರವುಗೊಳಿಸಲು ಈಗಾಗಲೇ ಗ್ರಾಮ ಪಂಚಾಯತ್‌ಗಳಿಗೆ ಆಶಯ ಪತ್ರ ನೀಡಲಾಗಿದ್ದು, ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗ್ರಾಹಕರು, ಸರಕಾರಿ ಸ್ಥಳೀಯ ಕಾಮಗಾರಿಗಳ ಗುತ್ತಿಗೆದಾರರು, ಸರಕಾರದಿಂದ ನಿಗದಿಪಡಿಸಿದ ಗರಿಷ್ಠ ಮಾರಾಟ ದರವನ್ನು ಗ್ರಾ.ಪಂ.ಗಳಿಗೆ ಪಾವತಿಸಿ, ರವಾನೆ ಪರವಾನಿಗೆ ಪಡೆದು, ಕಡಿಮೆ ಭಾರ ಸಾಮರ್ಥ್ಯದ ವಾಹನಗಳಲ್ಲಿ ಸ್ವಂತ ಖರ್ಚಿನಲ್ಲಿ ತುಂಬಿಸಿ ಸಾಗಾಟ ಮಾಡಬಹುದು ಎಂದರು.

ಗ್ರಾ.ಪಂ.ಗಳು ಗ್ರಾಹಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಜಧನ ಹಾಗೂ ಅನ್ವಯವಾಗುವ ಇತರ ಶುಲ್ಕಗಳನ್ನು ಸ್ವೀಕರಿಸಿ, ವಿಶೇಷ ರಕ್ಷಣಾತ್ಮಕವುಳ್ಳ ಸಾಗಾಣಿಕೆ ಪರವಾನಿಗೆಯನ್ನು ಗ್ರಾಹಕರಿಗೆ ನೀಡಬೇಕು. ಈ ಬಗ್ಗೆ ಅಗತ್ಯವಿರುವ ಎಲ್ಲ ರೀತಿಯ ತಾಂತ್ರಿಕ ತರಬೇತಿ, ನೆರವ‌ನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಡೆಯುವಂತೆ ತಿಳಿಸಿದರು.

Advertisement

ಇದನ್ನೂ ಓದಿ : ಬೇಡಿಕೆಗೆ ಸಿಗದ ಸ್ಪಂದನೆ; ಆತ್ಮಹತ್ಯೆಗೈದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ

ಮುನ್ನೆಚ್ಚರಿಕೆ ಅಗತ್ಯ
ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ನಿಕ್ಷೇಪಗಳಲ್ಲಿ ನಿರೀಕ್ಷಿತ ಪ್ರಮಾಣದ ಮರಳು ಇಲ್ಲದೆ ಇರುವ ಬಗ್ಗೆ ಅಥವಾ ಆ ಪ್ರದೇಶದಲ್ಲಿ ಮರಳು ತೆಗೆಯಲು ಅಡೆತಡೆಗಳಿದ್ದಲ್ಲಿ, ಹೊಸ ಪ್ರದೇಶದಲ್ಲಿ ಮರಳು ಲಭ್ಯವಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ, ಅಗತ್ಯ ಸ್ಥಳ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ಮರಳು ತೆಗೆಯುವಿಕೆ ಮತ್ತು ಸಾಗಾಣಿಕೆ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮರಳು ತೆಗೆಯುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಯಂತ್ರೋಪಕರಣ ಬಳಕೆ ಮಾಡಬಾರದು. ಪರವಾನಿಗೆ ಪಡೆದ ಪ್ರಮಾಣಕ್ಕೆ ಅನುಗುಣವಾಗಿ ಮಾತ್ರ ಮರಳು ತೆಗೆದು, ಸಾಗಾಟ ಮಾಡುವ ಬಗ್ಗೆ ಸ್ಥಳದಲ್ಲಿ ಹಾಜರಿದ್ದು ಪರಿಶೀಲಿಸಬೇಕು. ಸ್ಥಳೀಯ ನಿರ್ಮಾಣ ಚಟುವಟಿಕೆಗಳಿಗೆ ಮರಳಿನ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.
ಮರಳು ತೆಗೆಯಲು ನಿಗದಿತ ಶುಲ್ಕ ಸಂಗ್ರಹ, ಸಾಗಾಟ ಪರವಾನಿಗೆ ನೀಡುವ ಕುರಿತ ತಂತ್ರಾಂಶ ಬಳಕೆ ಮಾಡುವ ಬಗ್ಗೆ ತರಬೇತಿ ನೀಡಲಾಯಿತು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್‌, ಗ್ರಾ.ಪಂ.ಗಳ ಅಧ್ಯಕ್ಷರು, ಪಿಡಿಒ, ತಾ.ಪಂ. ಇಒ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next