Advertisement

ಹೈಕೋರ್ಟ್‌ ಆದೇಶ ಅನುಷ್ಠಾನಕ್ಕೆ ನಿರ್ಧಾರ: ಸಿಆರ್‌ಝಡ್‌ನ‌ಲ್ಲಿ ಶೀಘ್ರ ಮರಳುಗಾರಿಕೆ ಆರಂಭ

10:34 AM Nov 15, 2022 | Team Udayavani |

ಮಂಗಳೂರು : ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌ )ದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡುವ ಕುರಿತು ರಾಜ್ಯ ಹೈಕೋರ್ಟ್‌ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಸೋಮವಾರ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಧರಿಸ ಲಾಗಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಸಿಆರ್‌ಝಡ್‌ ವಲಯದಲ್ಲಿ ಸ್ಥಗಿತಗೊಂಡಿದ್ದ ಮರಳುಗಾರಿಕೆ ಮತ್ತೆ ಆರಂಭಗೊಳ್ಳುವ ಸಾಧ್ಯತೆಗಳಿವೆ.

Advertisement

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆಗೆ ಅನುಮತಿ ನೀಡುವಂತೆ 57 ಮಂದಿ ಸಾಂಪ್ರದಾಯಿಕ ಮರಳು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಹೈಕೋರ್ಟ್‌ನ ಆದೇಶವನ್ನು ಪರಿಶೀಲಿಸಿ ಅನುಷ್ಠಾನಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಸಾಂಪ್ರದಾಯಿಕ ಮರಳು ಗುತ್ತಿಗೆದಾರರಿಗೆ ಪರವಾನಿಗೆ ಕುರಿತು ಮುಂದಿನ ಪ್ರಕ್ರಿಯೆಗಳು ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಮನವಿ ಪುರಸ್ಕರಿಸಿದ ಹೈಕೋರ್ಟ್‌
ದ.ಕ. ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧವನ್ನು ಪ್ರಶ್ನಿಸಿ 57 ಮಂದಿ ತಾತ್ಕಾಲಿಕ ಪರವಾನಿಗೆದಾರರು ಸಲ್ಲಿಸಿದ್ದ 2 ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ಸಿಆರ್‌ಝಡ್‌ನ‌ಲ್ಲಿ ಯಂತ್ರೋಪಕರಣಬಳಸದೆ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವ ಬಗ್ಗೆ ಸೆ. 3 ಹಾಗೂ ಅ. 10ರಂದು ಆದೇಶ ನೀಡಿತ್ತು.

ಈ ಬಾರಿ ಬೇಥಮೆಟ್ರಿ ಸರ್ವೇಯಂತೆ ಸಿಆರ್‌ಝಡ್‌ ವಲಯದ ನೇತ್ರಾವತಿ ನದಿಯಲ್ಲಿ 9 ಬ್ಲಾಕ್‌ಗಳು ಹಾಗೂ ಫಲ್ಗುಣಿ ನದಿಯಲ್ಲಿ 5 ಬ್ಲಾಕ್‌ಗಳು ಸೇರಿದಂತೆ ಒಟ್ಟು 14 ಬ್ಲಾಕ್‌ಗಳಲ್ಲಿ (ದಿಬ್ಬ) ಮರಳು ತೆರವಿಗೆ ಕೆಸಿಝಡ್‌ಎಂ ಪರಿಸರ ವಿಮೋಚನಾ ಪತ್ರ (ಇಸಿ ಕ್ಲಿಯರೆನ್ಸ್‌ ) ನೀಡಿತ್ತು. ಕಳೆದ ಬಾರಿ ಒಟ್ಟು 105 ಮಂದಿಗೆ ಮರಳುಗಾರಿಕೆಗೆ ಪರವಾನಿಗೆ ನೀಡಲಾಗಿತ್ತು.

ಪರವಾನಿಗೆ ಹೊಂದಿದ್ದ ಇತರರಿಗೂ ಅವಕಾಶ ?
ಸಿಆರ್‌ಝಡ್‌ನ‌ಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಹೈಕೋರ್ಟ್‌ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ 57 ಮಂದಿಯಲ್ಲದೆ ಪರವಾನಿಗೆ ಹೊಂದಿದ್ದ ಇತರರಿಗೂ ಮರಳುಗಾರಿಕೆ ನಡೆಸಲು ಅವಕಾಶ ಲಭಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement

ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ಕುರಿತಂತೆ ಹೈಕೋರ್ಟ್‌ ಆದೇಶವನ್ನು ಎಲ್ಲ ಅಂಶಗಳನ್ನು ಒಳಗೊಂಡಂತೆ ಅನುಷ್ಠಾನ ಗೊಳಿಸಲು ಸೋಮವಾರ ಜರಗಿದ ಮರಳು ಉಸ್ತುವಾರಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರೊಸೀಡಿಂಗ್‌ನಲ್ಲಿ ಎಲ್ಲ ಅಂಶಗಳನ್ನು ನಮೂದು ಮಾಡಿ ಜಾರಿಗೊಳಿಸಲಾಗುವುದು.
– ರವಿ ಕುಮಾರ್‌ ಎಂ.ಆರ್‌. ಜಿಲ್ಲಾಧಿಕಾರಿ, ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷ, ದ. ಕ.

ಇದನ್ನೂ ಓದಿ : ನದಿಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 5 ಮಂದಿ ನೀರುಪಾಲು

Advertisement

Udayavani is now on Telegram. Click here to join our channel and stay updated with the latest news.

Next