Advertisement
ಸಿ.ಆರ್.ಝಡ್. ವ್ಯಾಪ್ತಿಯಲ್ಲಿನ ನದಿಗಳಲ್ಲಿ ಮರಳೆತ್ತುವ ಪ್ರದೇಶಗಳ ಅಧ್ಯಯನವನ್ನು ಜಿಯೊಮೆರೈನ್ಸ್ ಸಂಸ್ಥೆ ಕೈಗೊಂಡಿದ್ದು, ಇದರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆ, ಮೀನುಗಾರಿಕಾ ಇಲಾಖೆ ಸಿಬಂದಿ ಭಾಗವಹಿಸಿದ್ದಾರೆ. ಕರಾವಳಿ ನದಿ ಪಾತ್ರದ ಸುಮಾರು 1 ಲಕ್ಷ ಚ. ಮೀಟರ್ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸರ್ವೆ ನಡೆಸಲಾಗಿದೆ. ಇದುವರೆಗೆ ಎನ್.ಐ.ಟಿ.ಕೆ. ನೀಡುವ ಉಪಗ್ರಹ ಆಧಾರಿತ ಅಧ್ಯಯನ ಹಾಗೂ ತಾಂತ್ರಿಕ ವರದಿ ಆಧಾರದಲ್ಲಿ ಸಿಆರ್‌ಝಡ್ ಮರಳು ತೆಗೆಯುವ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ದೋಣಿಯಲ್ಲಿ ತೆರಳಿ ಜಿ.ಪಿ.ಎಸ್. ಇಕೋ ಸೌಂಡರ್ ಮತ್ತಿತರ ಉಪಕರಣಗಳ ಸಹಾಯದಲ್ಲಿ ನದಿಯ ಆಳದಲ್ಲಿರುವ ಮರಳು, ಹೂಳು ಹಾಗೂ ಕಲ್ಲಿನ ಪ್ರಮಾಣವನ್ನು ಸರ್ವೆ ಮಾಡಲಾಗಿದೆ. ಯಾವ ಮರಳು ಯೋಗ್ಯವಾಗಿದೆ ಹಾಗೂ ಯಾವುದು ಅಲ್ಲ ಎಂಬುದನ್ನು ಸರ್ವೆ ಮೂಲಕ ಕಂಡುಕೊಳ್ಳಲಾಗಿದೆ.
ಜಲಸಂಪನ್ಮೂಲಗಳಲ್ಲಿ ನೀರಿನ ತಳದ ನೆಲದ ಸಮೀಕ್ಷೆಯನ್ನು ಬೇಥಮೆಟ್ರಿ ಸರ್ವೆ ಎನ್ನುತ್ತಾರೆ. ಸಾಮಾನ್ಯವಾಗಿ ಸೋನಾರ್ ಉಪಕರಣದ ಮೂಲಕ ಇದನ್ನು ನಡೆಸುತ್ತಾರೆ. ಸೋನಾರ್ ಉಪಕರಣದ ಮೂಲಕ ಧ್ವನಿ ಅಥವಾ ಬೆಳಕನ್ನು ಹಾಯಿಸಿ, ಅದು ತಳದಿಂದ ಪ್ರತಿಫಲಿಸಿ ಹಿಂದಿರುಗಿ ಬರುವ ಸಮಯವನ್ನು ಆಧರಿಸಿ ಆಳ, ಅಲ್ಲಿರುವ ವಸ್ತುಗಳು ಇತ್ಯಾದಿ ಮಾಹಿತಿ ಪಡೆಯಲಾಗುತ್ತದೆ.