Advertisement

ಹುಮನಾಬಾದ್: ಹೆಚ್ಚಿದ ಅಕ್ರಮ ಮರಳು ದಂಧೆ…ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲ

04:35 PM Dec 30, 2022 | Team Udayavani |

ಹುಮನಾಬಾದ್: ತಾಲ್ಲೂಕಿನ ವಿವಿಧಡೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲಗೊಂಡಿದೆ.

Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹುಮಾನಾಬಾದ ಪಟ್ಟಣದ ಮೂಲಕ ವಿವಿಧಡೆ ಮರಳು ವಾಹನಗಳು ಪ್ರತಿನಿತ್ಯ ಸಾಗುತ್ತಿವೆ. ಕೆಲ ವಾಹನಗಳು ಪರವಾನಗಿ ಸಹಿತ ಸಂಚಾರ ನಡೆಸಿದರೆ, ಇನ್ನೂ ಬಹುತೇಕ ಟಿಪ್ಪರ್ ವಾಹನಗಳು ಪರವಾನಗಿ ರಹಿತ, ಅವಧಿ ಮುಗಿದಿರುವ ಪರವಾನಗಿ, ಒಂದೇ ಪರವಾನಗಿ ಎರೆಡು ವಾಹನಕ್ಕೆ ಬಳಸಿಕೊಂಡು ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ಸಾಗಾಟಮಾಡುತ್ತಿರುವುದು ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ನಿಯಂತ್ರಣ ಮಾಡಬೇಕಿರುವ ಅಧಿಕಾರಿಗಳಿಗೆ ಎಲ್ಲವೂ ತಿಳಿದಿದ್ದು, ಎಲ್ಲರೂ ಮೌನಕ್ಕೆ ಶರಣಾಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶ, ಜಲಸಂಗಿ ಕ್ರಾಸ್, ಧುಮ್ಮನಸೂರ್, ಲಾಲಧರಿ, ಚಿಟಗುಪ್ಪ, ನಿರ್ಣಾ, ಮನ್ನಾಎಖೇಳ್ಳಿ, ಹುಡಗಿ ಹತ್ತಿರ ಸೇರಿದಂತೆ ತಾಲೂಕಿನ ವಿವಿಧಡೆ ಮರಳು ಮಾಫಿಯಾ ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಕೇಳಿಬರುತ್ತಿವೆ. ಈ ಹಿಂದೆ ಕೂಡ ಭಾಲ್ಕಿ ಡಿವೈಎಸ್‌ಪಿ ಅವರು ಪಟ್ಟಣದ ಹೊರಪ್ರದೇಶದಲ್ಲಿ ದಾಳಿ ನಡೆಸಿ 18 ಮರಳು ವಾಹನಗಳು ಜಪ್ತಿಮಾಡಿದ ಪ್ರಸಂಗಕೂಡ ನಡೆದಿತ್ತು. ಅಲ್ಲದೆ, ಇಲ್ಲಿನ ತಹಶೀಲ್ದಾರ ಕರ್ತವ್ಯದ ಆರಂಭದಲ್ಲಿ ಮರಳು ವಾಹನಗಳ ಮೇಲೆ ದಾಳಿನಡೆಸುವ ಮೂಲಕ ಅಕ್ರಮಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ವಾಸ್ತವದಲ್ಲಿ ಆಗುತ್ತಿರುವುದೆ ಬೇರೆ ಎಂದು ಇಲ್ಲಿನ ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಜಪ್ತಿ ಗೊಂದಲ: ಡಿ.28ರಂದು ಇಲ್ಲಿನ ತಹಶೀಲ್ದಾರ ಪ್ರದೀಪಕುಮಾರ ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಿಯಮ ಮೀರಿ ಮರಳು ಸಾಗಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿ 12 ಮರಳು ಟಿಪ್ಪರ್ ಗಳನ್ನು ಜಪ್ತಿ ಮಾಡಿರುವ ಬಗ್ಗೆ ಮಧ್ಯಮಗಳಿಗೆ ಮಾಹಿತಿ ನೀಡಿದರು. ಟಿಪ್ಪರ್ ವಾಹನಗಳು ಪೊಲೀಸ್ ಇಲಾಖೆಗೆ ಒಪ್ಪಿಸಿರುವ ಬಗ್ಗೆ ಕೂಡ ತಿಳಿಸಿದರು. ಆದರೆ, ಪೊಲೀಸ್ ಠಾಣೆಗೆ ಬಂದಿರುವುದು ಕೇವಲ 6 ವಾಹನಗಳು ಎಂಬುವುದು ತಿಳಿದು ಬಂದಿದ್ದು, ತಹಶೀಲ್ದಾರ ಸೂಚನೆ ಮೇರೆಗೆ ಪತ್ತೆಯಾದ ವಾಹನಗಳ ಠಾಣಾ ಆವರಣದಲ್ಲಿ ಇರೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ತಹಶೀಲ್ದಾರ ಅವರು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗೆ ಬರೆದ ಪತ್ರದಲ್ಲಿ 7 ವಾಹನಗಳ ಸಂಖ್ಯೆ ಸಹಿತ ನಮೋದಿಸಿರುವುದು ಕೂಡ ಅನೇಕ ಅನುಮಾನಕ್ಕೆ ಕಾರಣವಾಗಿದೆ.

ಅಕ್ರಮ ಮರಳು ಸಾಗಾಟವೆ?: ಬುಧವಾರ ಜಪ್ತಿ ಮಾಡಿರುವ ಮರಳು ಟಿಪ್ಪರ್‌ಗಳು ಅಕ್ರಮ ಸಾಗಾಟವೇ ಅಥವಾ ಪರವಾನಗಿ ಇದ್ದು, ಹೆಚ್ಚಿನ ಪ್ರಮಾಣದ ಮರಳು ಸಾಗಿಸಲಾಗುತ್ತಿತ್ತಾ ಎಂಬ ಪ್ರಶ್ನೆ ಉಂಟಾಗಿದೆ. ಗಣಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿರುವ ತಹಶೀಲ್ದಾರ 7 ವಾಹನಗಳ ಸಂಖ್ಯೆ ಸಹಿತ ಅಕ್ರಮ ಮರಳು ಸಾಗಾಣಿಕೆ ಎಂದು ಬರೆಯಲಾಗಿದೆ. ಆರದೆ, ಹೆಸರು ಹೇಳದ ಟಿಪ್ಪರ ವಾಹನಗಳ ಮಾಲೀಕರು ಪರವಾನಗಿ ಸಹೀತ ಮರಳು ಸಾಗಾಟ ನಡೆಸಿದ್ದು, ಅಲ್ಪಪ್ರಮಾಣದ ಹೆಚ್ಚಿನ ಮರಳು ವಾಹನದಲ್ಲಿ ಬರುತ್ತದೆ. ಅಧಿಕಾರಿಗಳು ಉದ್ದೇಶ ಪೂರ್ವಕ ಬೇರೆ ಜಿಲ್ಲೆಯವರಿಗೆ ಗುರಿಮಾಡುತ್ತಿದ್ದಾರೆ. ಇನ್ನೂ ದಾಳಿ ಸಂದರ್ಭದಲ್ಲಿ ಕೆಲ ವಾಹನಗಳು ಮಾತ್ರ ಗುರುತಿಸಿ ಪ್ರಕರಣ ದಾಖಲು ಅಥವ ದಂಡವಿಧಿಸುತ್ತಾರೆ. ಉಳಿದಂತೆ ಇತರೆ ವಾಹನಗಳಿಗೆ ಅನ್ವಯ ಆಗದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಅನೇಕ ಆರೋಪಗಳು ಮಾಡುತ್ತಿದ್ದಾರೆ. ಗಣಿ ಇಲಾಖೆಯ ಅಧಿಕಾರಿ ವಿಶ್ವನಾಥ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಎಲ್ಲಾ ವಾಹನಗಳಿಗೆ ಪರವಾನಗಿ ಪಡೆದುಕೊಂಡು ಮರಳು ಸಾಗಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

ಬೀದರ ಜಿಲ್ಲೆಯಲ್ಲಿ ಕಟ್ಟಡಕ್ಕೆ ಬಳಸುವ ಮರಳು ಲಭ್ಯ ಇಲ್ಲ. ಕಾರಣ ರಾಯಚೂರು, ಕಲಬುರಗಿ ಸೇರಿದಂತೆ ವಿವಿಧಡೆಯಿಂದ ಮರಳು ಇಲ್ಲಿಗೆ ಬರುತ್ತದೆ. ಪರವಾನಗಿ ರಹಿತ ವಾಹನಗಳು ಇಲ್ಲಿಗೆ ಬರುವುದು ಕಷ್ಟ. ಆದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ಸಾಗಾಟ ಮಾಡುತ್ತಿರುವ ವಾಹನಗಳಿಗೆ ದಂಡ ವಿಧಿಸುವ ಕೆಲಸ ನಡೆಯುತ್ತಿದೆ. ಈ ವರ್ಷದಲ್ಲಿ ಸುಮಾರು 65 ಲಕ್ಷಕ್ಕೂ ಅಧಿಕ ದಂಡ ವಿಧಿಸಲಾಗಿದೆ. ಬುಧವಾರ ಪತ್ತೆಯಾದ ವಾಹನಗಳಿಗೆ ಪರವಾನಗಿ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಮರಳು ಇರುವ ಕಾರಣಕ್ಕೆ ದಂಢ ವಿಧಿಸಲಾಗುತ್ತಿದೆ.

– ವಿಶ್ವನಾಥ ಗಣಿ ಇಲಾಖೆ ಅಧಿಕಾರಿ ಬೀದರ.

ಅಕ್ರಮ ಮರಳು ಸಾಗಾಟ ಕುರಿತು ತಾಲೂಕು ತಹಶೀಲ್ದಾರ, ಗಣಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ನಿಗದಿತ ಪ್ರಮಾಣಕ್ಕಿತ ಹೆಚ್ಚಿನ ಸಾಗಾಟ ನಡೆಸಿದರೆ ಆರ್‌ಟಿಓ ಅಧಿಕಾರಿಗಳು ದಂಡ ವಿಧಿಸುವ ಅಧಿಕಾರ ಇದೆ. ಪೊಲೀಸ್ ಇಲಾಖೆಯಿಂದ ದಾಳಿ ನಡೆಸುವುದಿಲ್ಲ. ಪೊಲೀಸ್ ಇಲಾಖೆಯಿಂದ ಅಧಿಕಾರಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಲಾಗುತ್ತದೆ.

– ಶಿವಾಂಶು ರಜಪುತ ಎಎಸ್‌ಪಿ ಹುಮನಾಬಾದ

– ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next