Advertisement
ಕರ್ನಾಟಕ ಮರಳು ನೀತಿ ಅನುಷ್ಠಾನ ಕಷ್ಟ, ಮರಳು ಲಭ್ಯವಾಗುತ್ತಿಲ್ಲ ಎಂದು ಹೇಳುತ್ತ ಸಾರ್ವಜನಿಕರನ್ನು ಮರುಳು ಮಾಡುತ್ತ ಅಧಿಕಾರದಲ್ಲಿರುವವರು ಮರಳು ಲೂಟಿಯಲ್ಲಿ ತೊಡಗಿದ್ದಾರೆ. ಜಿಲ್ಲೆಗಷ್ಟೇ ಅಲ್ಲ, ಹೊರ ಜಿಲ್ಲೆಗಳಿಗೂ ಸಾಲುವಷ್ಟು ಮರಳು ನಿಕ್ಷೇಪ ಇಲ್ಲಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ಮರಳು ಸಿಗದಂತಾಗಿರುವುದು ವಿಪರ್ಯಾಸ.
Related Articles
Advertisement
ಜಾಣ ಕುರುಡು: ಇಂಥ ಅಕ್ರಮ ಮರಳು ದಂಧೆಯಲ್ಲಿ ಯಾರಿದ್ದಾರೆ, ಯಾರಿಲ್ಲ ಎಂದು ಹೇಳುವುದೇ ಕಷ್ಟವಾಗಿದೆ. ಅಧಿಕಾರದಲ್ಲಿದ್ದವರು, ಅಧಿಕಾರದಲ್ಲಿರುವವರ ಬೆಂಬಲಿಗರು, ಅಧಿಕಾರ ಇಲ್ಲದಿದ್ದರೂ ತಮ್ಮದೇ ಸ್ವ ಪ್ರಭಾವ ಇರುವವರು ಹೀಗೆ ಅನೇಕರು ಈ ಜಾಲದಲ್ಲಿರುವುದು ಬಹಿರಂಗಗುಟ್ಟು. ಯಾವುದೋ ಗುತ್ತಿಗೆದಾರನ ಹೆಸರಿನಲ್ಲಿ ಇನ್ನಾರೋ ಮರಳು ಸಂಗ್ರಹಿಸುತ್ತಾರೆ.
ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಣೆಯಾಗುತ್ತಿರುವುದು ಕಂದಾಯ, ಪೊಲೀಸ್, ಪಿಡಬ್ಲುಡಿ ಸೇರಿದಂತೆ ಸಂಬಂಧಪಟ್ಟವರಿಗೆಲ್ಲರಿಗೂ ಗೊತ್ತಿದೆ. ಕೆಲ ಜನಪ್ರತಿನಿಧಿಗಳು, ಪ್ರಭಾವಿಗಳೇ ಈ ಅಕ್ರಮಗಳಿಗೆಲ್ಲ ಅಧಿಪತಿಗಳಾಗಿರುವುದರಿಂದ ಅಧಿಕಾರಿಗಳು ಸಹ ಏನೂ ಮಾಡದಂತಾಗಿದ್ದಾರೆ. ಕೆಲ ಅಧಿಕಾರಿಗಳು ನೋಡಿಯೂ ಸುಮ್ಮನಿದ್ದರೆ, ಇನ್ನು ಕೆಲವರು ಸಿಕ್ಕಿದ್ದೇ ಚಾನ್ಸು ಎಂಬಂತೆ ತಾವೂ ಅಕ್ರಮಗಳಿಗೆ ಕೈಜೋಡಿಸಿದ್ದಾರೆ.
ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಇಲ್ಲಿ ಎಲ್ಲವೂ ಕಾನೂನುಬದ್ಧವಾಗಿ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಪಾಲಿಸಲಾಗುತ್ತಿದೆ ಎಂಬಂತೆ ಬಿಂಬಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯವೂ ನಡೆದಿದೆ. ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು ಕಪ್ಪ ವಸೂಲಿಗೆ ಕೈ ಮುಂದೆ ಮಾಡಿ ನಿಂತಿರುವ ಪರಿಣಾಮ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ತಡೆಗೆ ಕೈ ಜೋಡಿ ಸುವವರೇ ಇಲ್ಲದಂತಾಗಿದೆ. ಪಾಲು ಸಿಗದವರು ಮಾತ್ರ ಅಕ್ರಮಗಳ ಬಗ್ಗೆ ಮಾತನಾಡುವಂತಾಗಿರುವುದು ದುರದೃಷ್ಟಕರ ಸಂಗತಿ.
ದೂರು ದಾಖಲಾಗುತ್ತಿಲ್ಲ: ಅಕ್ರಮ ಮರಳು ದಂಧೆ ನಡೆಯುತ್ತಿರುವ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲು ಹೋದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿ ಎಂದು ಹೇಳುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲು ಹೋದರೆ ಲೋಕೋಪಯೋಗಿ ಇಲಾಖೆಗೆ ಹೋಗಿ ದೂರು ದಾಖಲಿಸಲು ಸೂಚಿಸುತ್ತಾರೆ. ಲೋಕೋಪಯೋಗಿ ಇಲಾಖೆಗೆ ದೂರು ನೀಡಲು ಹೋದರೆ ತಹಶೀಲ್ದಾರರಿಗೆ ದೂರು ನೀಡಲು ನಿರ್ದೇಶಿಸುತ್ತಾರೆ. ಅಧಿಕಾರಿಗಳ ಈ ಬೇಜವಾಬ್ದಾರಿ ವರ್ತನೆಯಿಂದ ಆಕ್ರೋಶಗೊಂಡಿರುವ ಕೆಲವರು ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ಆದರೆ, ಪ್ರತಿಫಲ ಮಾತ್ರ ಶೂನ್ಯವಾಗಿರುವುದು ದುರಂತ.
•ಎಚ್.ಕೆ. ನಟರಾಜ