Advertisement

ಮರಳು ಅಭಾವ: ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರ ಧರಣಿ

04:00 PM Oct 03, 2017 | |

ಉಪ್ಪಿನಂಗಡಿ: ಮರಳು ಅಭಾವದಿಂದಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ, ಧರಣಿ – ಪ್ರತಿಭಟನೆ ನಡೆಸಿದ್ದಾರೆ.

Advertisement

ನಾವು ಎಷ್ಟು ಸಭೆ ನಡೆಸಿದರೂ ಮರಳು ಅಭಾವದಿಂದಾಗಿ ಪ್ರಗತಿ, ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಭೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿ, ಸಭಾಧ್ಯಕ್ಷರ ಸ್ಥಾನದ ಮುಂಭಾಗದಲ್ಲೇ ಕುಳಿತು ಸದಸ್ಯರು ಧರಣಿ ಆರಂಭಿಸಿದರು.

ಸದಸ್ಯ ಸುರೇಶ್‌ ಅತ್ರಮಜಲು ಮಾತನಾಡಿ, ಮರಳು ಕೊರತೆಯಿಂದಾಗಿ ಬಸವ ವಸತಿ ಯೋಜನೆಯಲ್ಲಿ ಬಡವರ ಮನೆ ನಿರ್ಮಾಣ ಸ್ಥಗಿತಗೊಂಡಿದೆ, ರಾಜ್ಯ ಸರಕಾರ ದ.ಕ. ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಸಮಸ್ಯೆಗೆ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಜಿಲ್ಲೆಯ ಎಲ್ಲ ಗ್ರಾ.ಪಂ. ಸದಸ್ಯರನ್ನು ಸಂಘಟಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಮರಳಿದ್ದರೂ ಸ್ಥಳೀಯರಿಗಿಲ್ಲ
ಸದಸ್ಯ ಸುನಿಲ್‌ ದಡ್ಡು ಧ್ವನಿಗೂಡಿಸಿ, ಉಪ್ಪಿನಂಗಡಿಯಲ್ಲಿ ಎರಡು ನದಿಗಳು ಹರಿಯುತ್ತಿವೆ, ಮರಳು ಹೇರಳವಾಗಿದೆ. ಆದರೆ, ಉಪಯೋಗಕ್ಕೆ ಲಭಿಸುತ್ತಿಲ್ಲ. ಆದರೆ ಬೆಂಗಳೂರು, ಕೇರಳ ಕಡೆಗೆ ನಿರಂತರ ಸಾಗಾಟವಾಗುತ್ತಿದೆ. ಸ್ಥಳೀಯರು ಒಂದು ಪಿಕ್‌ಅಪ್‌ ಮರಳು ತೆಗೆದರೂ ಪೊಲೀಸರು ವಾಹನ ಜಪ್ತಿ ಮಾಡಿ, ಕೇಸು ಹಾಕುತ್ತಾರೆ. ದೊಡ್ಡವರು ಬೃಹತ್‌ ಲಾರಿಗಳಲ್ಲಿ ಬೆಂಗಾವಲು ಇಟ್ಟುಕೊಂಡು ಬೆಂಗಳೂರಿಗೆ ಮರಳು ಸಾಗಿಸುತ್ತಾರೆ. ದ.ಕ. ಜಿಲ್ಲೆಯ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಪ್ರಾದೇಶಿಕ ಮರಳು ನೀತಿ ಜಾರಿ ಆಗಬೇಕು. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌ ಪ್ರತಿಕ್ರಿಯಿಸಿ, ಮರಳು ಅಭಾವದ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.ಮರಳುಗಾರಿಕೆಗೆ  ಪರವಾನಿಗೆ ಪ್ರಕ್ರಿಯೆ ಆರಂಭಗೊಂಡಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ವಾರದ ಒಳಗಾಗಿ ಸಮಸ್ಯೆ ಬಗೆಹರಿಯುವ ಬಗ್ಗೆ ತಿಳಿಸಿದ್ದಾರೆ. ಸಭೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

Advertisement

ಅಧ್ಯಕ್ಷರಿಂದ ಸ್ಪಷ್ಟನೆ ಬೇಕು.
ಮರಳು ಸಮಸ್ಯೆಯಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿರುವ ಬಗ್ಗೆ ಹಾಗೂ ಪ್ರತ್ಯೇಕ ಪ್ರಾದೇಶಿಕ ಮರಳು ನೀತಿ ಜಾರಿ ಮಾಡುವಂತೆ ನಿರ್ಣಯ ಅಂಗೀಕರಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಅಧ್ಯಕ್ಷರು ಸಮ್ಮತಿಸಿದ ಬಳಿಕ ಸಭೆ ಮುಂದುವರಿಯಿತು.

ಉಪ್ಪಿನಂಗಡಿ ಪಿಎಸ್‌ಐ ಆಗಿ ನಂದಕುಮಾರ್‌ ಎಂಬುವರು ಬಂದಿದ್ದಾರೆ. ಆದರೆ, ಅವರು ಠಾಣೆ ಯಲ್ಲಿ ಸಿಗುತ್ತಿಲ್ಲ. ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ, ಪೇಟೆಯಲ್ಲಿ ಸಂಚಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಪಿಎಸ್‌ಐ ಬಂಟ್ವಾಳ ಠಾಣೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನಿಯೋಜನೆ ರದ್ದುಗೊಳಿಸಿ, ಅವರು ಉಪ್ಪಿನಂಗಡಿಯಲ್ಲೇ ಇರುವಂತೆ ಮಾಡಬೇಕು ಎನ್ನುವ ನಿರ್ಣಯವನ್ನೂ ಅಂಗೀಕರಿಸಲಾಯಿತು.

ರೆಸ್ಟೋರೆಂಟ್‌ಗೆ ಆಕ್ಷೇಪ
ಧನ್ವಂತರಿ ಆಸ್ಪತ್ರೆ ಹಿಂಭಾಗದಲ್ಲಿ ರೆಸ್ಟೋರೆಂಟ್‌ ತೆರೆಯುವುದಕ್ಕೆ ಪರವಾನಿಗೆ ಕೋರಿ ಬಂದ ಅರ್ಜಿಗೆ ಸದಸ್ಯರಾದ ಝರೀನಾ ಹಾಗೂ ಚಂದ್ರಾವತಿ ಆಕ್ಷೇಪ ವ್ಯಕ್ತಪಡಿಸಿ, ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ ಎಂದರು. ಸದಸ್ಯರಾದ ಸುನೀಲ್‌ ದಡ್ಡು ಹಾಗೂ ಚಂದ್ರಶೇಖರ ಮಡಿವಾಳ ಅರ್ಜಿಗೆ ಸಮ್ಮತಿ ಸೂಚಿಸಿದರು. ಪರಿಶೀಲನೆಗೆ ಅವಕಾಶ ನೀಡಿ, ಅಧ್ಯಕ್ಷರು ನಿರ್ಣಯ ಅಂಗೀಕರಿಸಿದರು. ಇದೇ ರೆಸ್ಟೋರೆಂಟ್‌ನಲ್ಲಿ ಬಾರ್‌ ನಡೆಯುವ ಸಾಧ್ಯತೆಯಿದ್ದು, ಜನವಸತಿ ಪ್ರದೇಶವಾದ್ದರಿಂದ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದಾರೆಂದು ಪಿಡಿಒ ತಿಳಿಸಿದರು.

ಸಭೆಯಲ್ಲಿ ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ಗ್ರಾಮ ಪಂಚಾಯತ್‌ ಸದಸ್ಯರಾದ ಯು.ಕೆ. ಇಬ್ರಾಹಿಂ, ಉಮೇಶ್‌ ಗೌಡ, ಸುಂದರಿ, ಚಂದ್ರಾವತಿ, ಯೋಗಿನಿ, ಸುಶೀಲಾ, ಜಮೀಲಾ ಉಪಸ್ಥಿತರಿದ್ದರು. ಪಂ. ಕಾರ್ಯದರ್ಶಿ ಶಾರದಾ ವಂದಿಸಿದರು.

ಪ್ರತ್ಯೇಕ ಆಧಾರ್‌ ಕೇಂದ್ರ ಬೇಕು
ಯೋಜನೆ ಫ‌ಲಾನುಭವಿಗಳು ಆಧಾರ್‌ ಕಾರ್ಡ್‌ ಸಲ್ಲಿಸುವುದು ಕಡ್ಡಾಯ. ಆದರೆ, ಶೇ. 40ರಷ್ಟು ಮಂದಿಗೆ ಆಧಾರ್‌ ನೋಂದಣಿ ಆಗಿಲ್ಲ. ಅದನ್ನು ಮಾಡಿಸಬೇಕಾದರೆ ಪುತ್ತೂರು ಹೋಗಬೇಕು, ಕನಿಷ್ಠ ಮೂರು ದಿನ ಸರತಿ ಸಾಲಿನಲ್ಲಿ ನಿಂತು ಕಾಯಬೇಕು. ಉಪ್ಪಿನಂಗಡಿಯಲ್ಲೇ ಪ್ರತ್ಯೇಕ ಆಧಾರ್‌ ಕೇಂದ್ರ ತೆರೆಯುವಂತೆ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಅಂಗೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next