ಸೇಡಂ: ಪತ್ರಕರ್ತರಿಗೆ ಸೂರಿನ ಅವಶ್ಯಕತೆಯ ಬಗ್ಗೆ ಸಂಘದ ಪದಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿ ಸಂಘದ ಭವನಕ್ಕಾಗಿ ಸೂಕ್ತವಾದ ಕಟ್ಟಡದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಭರವಸೆ ನೀಡಿದರು.
ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಬದ್ಧನಾಗಿದ್ದೇನೆ. ತಾಲೂಕಿನ ಪ್ರತಿಯೊಬ್ಬ ಪತ್ರಕರ್ತನಿಗೆ ವೈಯಕ್ತಿಕವಾಗಿ 2ಲಕ್ಷ ಮೊತ್ತದ ವಿಮೆ ಮಾಡಿಸಲು ನಿರ್ಧರಿಸಿದ್ದು, ಸಂಘದ ಅಧ್ಯಕ್ಷರು ಪಟ್ಟಿ ನೀಡಬೇಕು. ಪಟ್ಟಣದಲ್ಲಿ ವಾಸಿಸಲು ಸೂರಿಲ್ಲದ ಪತ್ರಕರ್ತರಿಗೆ ಮನೆ ನೀಡುವ ಭರವಸೆ ನೀಡಿದರು.
ಕೆಕೆಆರ್‌ಟಿಸಿಯಿಂದ ರಾಜ್ಯಕ್ಕೆ ಮಾದರಿಯಾಗುವಂತೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ್ ಬಸ್ ಪಾಸ್ ಒದಗಿಸಲು ಸಂಘದ ಜಿಲ್ಲಾಧ್ಯಕ್ಷರು ಕೋರಿದ್ದಾರೆ. ಈಗಾಗಲೇ ಈ ವಿಷಯವನ್ನು ಸಂಸ್ಥೆಯ ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸಲು ಅಜೆಂಡಾದಲ್ಲಿ ಸೇರಿಸಲಾಗಿದೆ. ಅಲ್ಲಿ ನಡೆಯುವ ಚರ್ಚೆಗಳನ್ನು ಆಧಾರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
Related Articles
ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಪತ್ರಕರ್ತರು ನೈಜ್ಯ ಮತ್ತು ನಿಖರ ಅಂಶಗಳ ಸುದ್ದಿಗಳನ್ನು ಬಿತ್ತರಿಸಬೇಕು. ಸತ್ಯ ಶೋಧನೆ ಮತ್ತು ವಾಸ್ತವ ಸತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ನೊಂದವರ ಧ್ವನಿಯಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕು ಎಂದರು.
ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸಮುಖ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿದರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರನ್ನು ಸತ್ಕರಿಸಲಾಯಿತು. ರಾಜ್ಯ ಕಾರ್ಯಕಾರಣಿ ಸದಸ್ಯ ಡಾ| ಶಿವರಂಜನ್ ಸತ್ಯಂಪೇಟೆ, ಜಿಲ್ಲಾ ಉಪಾಧ್ಯಕ್ಷ ದೇವೀಂದ್ರಪ್ಪ ಅವಂಟಿ, ನಿಕಟಪೂರ್ವ ಅಧ್ಯಕ್ಷ ಶಿವಕುಮಾರ ನಿಡಗುಂದಾ, ನೂತನ ಅಧ್ಯಕ್ಷ ಶರಣು ಮಹಾಗಾಂವ, ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಹಾಲಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಅಧ್ಯಕ್ಷೆ ಶೋಭಾ ಹೂಗಾರ, ಮುಖ್ಯಾಧಿಕಾರಿ ಸತೀಶ ಗುಡ್ಡೆ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಗೋಪಾಲ ಕುಲಕರ್ಣಿ ಇದ್ದರು. ಅನುಷಾ ಬೋರಂಚಿ ಪ್ರಾರ್ಥಿಸಿದರು. ಸಂಘದ ಗೌರವಧ್ಯಕ್ಷ ರಮೇಶ ಇಂಜಳ್ಳಿಕರ್ ಸ್ವಾಗತಿಸಿದರು. ಉಪಾಧ್ಯಕ್ಷ ಜಗನ್ನಾಥ ತರನಳ್ಳಿ ಪ್ರಾಸ್ತವಿಕ ಮಾತನಾಡಿದರು. ಕಾರ್ಯದರ್ಶಿ ಅವಿನಾಶ ಬೋರಂಚಿ ನಿರೂಪಿಸಿದರು. ಸಿದ್ದಲಿಂಗಯ್ಯಸ್ವಾಮಿ ಮಲಕೂಡ ವಂದಿಸಿದರು.