ನಟ ಸಂಚಾರಿ ವಿಜಯ್ ನಿಧನದ ಬಳಿಕ ಅವರು ಅಭಿನಯಿಸಿದ್ದ ಒಂದೊಂದೇ ಸಿನಿಮಾಗಳು ತೆರೆ ಕಾಣುತ್ತಿವೆ. ಈ ವರ್ಷ ಕೂಡ ಸಂಚಾರಿ ವಿಜಯ್ ಅಭಿನಯದ ಕೆಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಅಂಥದ್ದೇ ಒಂದು ಸಿನಿಮಾ “ಅಂತ್ಯವಲ್ಲ ಆರಂಭ’.
ಸುಮಾರು ನಾಲ್ಕು ವರ್ಷಗಳ ಹಿಂದೆ ಸಂಚಾರಿ ವಿಜಯ್ ಅಭಿನಯಿಸಿದ್ದ ಈ ಸಿನಿಮಾ ಇದೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ಇತ್ತೀಚೆಗೆ “ಅಂತ್ಯವಲ್ಲ ಆರಂಭ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಹೊರಬಂದಿದೆ. “ಅಂತ್ಯವಲ್ಲ ಆರಂಭ’ ಚಿತ್ರದಲ್ಲಿ ಸಂಚಾರಿ ವಿಜಯ್ ಅವರಿಗೆ ಶ್ರುತಿ ಹರಿಹರನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶಿಶಿರ್, ಹರ್ಷ ಆರಾಧ್ಯ, ನಚಿಕೇತ್ ಆರಾಧ್ಯ, ವೆಂಕಟರಾಜು ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಅಂತ್ಯವಲ್ಲ ಆರಂಭ’ ಚಿತ್ರಕ್ಕೆ ಟಿ. ಕೆ ಜಯರಾಮ್ ಕಥೆ, ವಸುಮತಿ ಉಡುಪ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಬಿ.ಆರ್ ಮಲ್ಲಿಕಾರ್ಜುನ್, ನಾಗೇಶ್ ವಿ ಆಚಾರ್ಯ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಬಿ.ಎಸ್ ಸುಹಾಸ್ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್, ಚೇತನ್ ನಾಯಕ್, ಶ್ರೀರಕ್ಷಾ ಆಚಾರ್, ಸಂಜನಾ ರಾವ್ ಮೊದಲಾದವರು ಧ್ವನಿಯಾಗಿದ್ದಾರೆ.
ನಡಹಳ್ಳಿ ಶ್ರೀಪಾದ ರಾವ್ ಮತ್ತು ಡಾ. ಎನ್. ಬಿ ಜಯಪ್ರಕಾಶ್ (ಜೆ.ಪಿ) ಜಂಟಿಯಾಗಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಶೀಘ್ರದಲ್ಲಿಯೇ “ಅಂತ್ಯವಲ್ಲ ಆರಂಭ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.