ಮೊಬೈಲ್ ಫೋನ್ ಮಾನವನ ದೈನಂದಿನ ಜೀವನದ ಭಾಗವಾಗಿಬಿಟ್ಟಿದೆ. ಮೊಬೈಲ್ ಇಲ್ಲದೆ ದಿನ ಆರಂಭವಾಗುವುದೂ ಇಲ್ಲ, ಮುಗಿಯುವುದೂ ಇಲ್ಲ ಎಂಬ ಸ್ಥಿತಿಗೆ ನಾವು ತಲುಪಿದ್ದೇವೆ. ಅಂಗೈ ಅಗಲದ ವಸ್ತುವಿನಲ್ಲಿ ನಮ್ಮ “ಜೀವನವೇ’ ಸೇರಿಕೊಂಡಿರುತ್ತದೆ. ಇಷ್ಟೊಂದು ಹಚ್ಚಿಕೊಂಡಿರುವ ಮೊಬೈಲ್ ಫೋನ್ ಒಂದು ವೇಳೆ ಕಳೆದುಕೊಂಡರೆ ಅಥವಾ ಕಳ್ಳತನವಾದರೆ ಇನ್ನಿಲ್ಲದ ಚಿಂತೆ ಕಾಡುತ್ತದೆ. ಈ ಚಿಂತೆಗೆ ಪರಿಹಾರವಾಗಿ ಕೇಂದ್ರ ಸರಕಾರದ ಸಿಇಐಆರ್ ಸಂಸ್ಥೆ ಮೊಬೈಲ್ ಫೋನ್‌ಗಳ ಟ್ರ್ಯಾಕಿಂಗ್‌ಗೆ “ಸಂಚಾರ್ ಸಾಥಿ’ ಪೋರ್ಟಲ್ ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಮೊಬೈಲ್ ಫೋನ್‌ಗಳು ಕಳೆದುಹೋದರೆ ನಮ್ಮ ಮೊಬೈಲ್‌ನ್ನು ಅತೀ ಸುಲಭವಾಗಿ ಮತ್ತು ಕ್ಷಿಪ್ರಗತಿಯಲ್ಲಿ ಬ್ಲಾಕ್ ಮತ್ತು ಟ್ರ್ಯಾಕ್ ಮಾಡಬಹುದು. ಇದು ಏನು, ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಸಂಚಾರ್ ಸಾಥಿ ಪೋರ್ಟಲ್
ಕೇಂದ್ರದ ದೂರ ಸಂಪರ್ಕ ಇಲಾಖೆಯಿಂದ ಮೊಬೈಲ್ ಬಳಕೆ ದಾರರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸರಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತೆರೆಯಲಾಗಿದೆ.
ಸಿಇಐಆರ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಮೊಬೈಲ್ ತಯಾರಕ ಕಂಪೆನಿಗಳು ಪ್ರತಿಯೊಂದು ಮೊಬೈಲ್ ಸೆಟ್‌ನಲ್ಲೂ ಐಎಂಇಐ ನಂಬರ್ ಮುದ್ರಿಸುವುದನ್ನು ಕೇಂದ್ರ ಸರಕಾರ ಈಗಾಗಲೇ ಕಡ್ಡಾಯಗೊಳಿಸಿದೆ. ಈ ಸಂಖ್ಯೆಯನ್ನು ಹೊಂದಿರುವ ಮೊಬೈಲ್‌ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಮೊಬೈಲ್ ಫೋನ್‌ಗಳ 15 ಅಂಕಿಯ ಐಎಂಇಐ (IMEI) ವಿಶೇಷ ಗುರು ತಿನ ನಂಬರ್‌ನ ಮೂಲಕ ಇಡೀ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ. ಕಳವಾದ ಅಥವಾ ಕಳೆದುಕೊಂಡ ಮೊಬೈಲ್‌ಗಳ ಐಎಂಇಐ (IMEI)ನಂಬರ್ ಹಾಗೂ ಮೊಬೈಲ್ ನಂಬರ್‌ಗಳು ಒಂದಕ್ಕೊಂದು ಜೋಡಣೆಯಾಗಿದ್ದು, ಇದನ್ನು ಅನುಸರಿಸಿಕೊಂಡು ಸಿಇಐಆರ್ ವಿಭಾಗವು ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ವಿವಿಧ ಡಾಟಾಬೇಸ್‌ಗಳ ಸಹಾಯದಿಂದ ಕಳೆದುಹೋದ ಮೊಬೈಲ್‌ಗಳನ್ನು ಸಿಇಐಆರ್ ಬ್ಲಾಕ್ ಮಾಡುತ್ತದೆ. ಮೊಬೈಲ್ ಕಳ್ಳತನದ ದಂಧೆಯಲ್ಲಿ ತೊಡಗಿಸಿಕೊಂಡವರು ಮೊಬೈಲ್ ಅನ್ನು ಕಳವು ಮಾಡುತ್ತಿದ್ದಂತೆಯೇ ಅದರ ಐಎಂಇಐ ಅನ್ನು ಅಳಿಸಿ ಹಾಕುತ್ತಿದ್ದರು. ಇದರಿಂದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೊಸ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲದಿರುವುದರಿಂದ ಇಂತಹ ಮೊಬೈಲ್ ಫೋನ್‌ಗಳನ್ನು ಸುಲಭದಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ.
ಸಿಇಐಆರ್
ಕೇಂದ್ರದ ದೂರಸಂಪರ್ಕ ಇಲಾಖೆಯ ಸೆಂಟರ್ ಫಾರ್ ಡಿಪಾರ್ಟ್‌ಮೆಂಟ್ ಆಫ್ ಟೆಲಿಮಾಟಿಕ್ಸ್ (ಸಿಡಿಒಟಿ), ಸಿಇಐ ಆರ್ (ಸೆಂಟರ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್) ಯೋಜನೆಯನ್ನು ಪ್ರಾಯೋಗಿಕವಾಗಿ ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಈಶಾನ್ಯ ಭಾಗದ ಕೆಲವೊಂದು ಟೆಲಿಕಾಂ ವಲಯಗಳಲ್ಲಿ ಅನುಷ್ಠಾನಗೊಳಿಸಿದ ಬಳಿಕ ಇದನ್ನೀಗ ದೇಶಾದ್ಯಂತ ಜಾರಿಗೆ ತಂದಿದೆ.
Related Articles
ಉದ್ದೇಶ?
ಈ ಯೋಜನೆಯಿಂದ ದೇಶಾದ್ಯಂತ ಕಳೆದು ಹೋದ ಮೊಬೈಲ್‌ಗಳ ವರದಿ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಹಾಗೂ ಮೊಬೈಲ್ ಬಳಕೆ ಯನ್ನು ಬ್ಲಾಕ್ ಮಾಡುವುದು ಸಿಇಐಆರ್‌ನ ಮೂಲ ಉದ್ದೇಶ. ಜತೆಗೆ ಮೊಬೈಲ್ ಕಳ್ಳತನವನ್ನು ಕಡಿಮೆಗೊಳಿಸಬಹುದು. ಇದರೊಂದಿಗೆ ಕಳೆದು ಹೋದ ಮೊಬೈಲ್‌ಗಳನ್ನು ಆದಷ್ಟು ಬೇಗ ಟ್ರ್ಯಾಕ್
ಮಾಡುವಲ್ಲಿ ಪೊಲೀಸ್ ಇಲಾಖೆಗೆ ಸಹಕಾರಿ ಯಾಗಲಿದೆ. ಈ ವ್ಯವಸ್ಥೆಯು ಇನ್‌ಬಿಲ್ಟ್ ಮೆಕಾನಿಸಂ ವಿಧಾನವನ್ನು ಹೊಂದಿದ್ದು, ಮೊಬೈಲ್ ಸ್ಮಗ್ಲಿಂಗ್‌ಗಳ ಮೇಲೂ ಕಣ್ಣು ಇಡಲು ಸಹಕಾರಿ ಯಾಗಲಿದೆ. ಆ್ಯಪಲ್ ಫೋನ್‌ಗಳು ಈಗಾಗಲೇ ತಮ್ಮದೇ ಆ್ಯಪಲ್ ಐಡಿಗಳನ್ನು ಹೊಂದಿದೆ. ಈ ವ್ಯವಸ್ಥೆ ಆ್ಯಂಡ್ರ್ಯಾಯ್ಡ ಫೋನ್‌ಗಳ ಬಳಕೆ ದಾರರಿಗೆ ಪರಿಣಾಮಕಾರಿಯಾಗಬಹುದು ಎನ್ನಲಾಗಿದೆ.
https://sancharsaathi.gov.in/.
ಸ್ವಯಂ ದೂರು ದಾಖಲಿಸಬಹುದು
ಮೊಬೈಲ್ ಕಳವಾದ ಅಥವಾ ಕಳೆದುಕೊಂಡ ಕೂಡಲೇ ಸಂಚಾರ್ ಸಾಥಿ (https://sancharsaathi.gov.in/.)ವೆಬ್ ಗೆ ಭೇಟಿ ನೀಡಿ ಅಲ್ಲಿರುವ ಸೂಚನೆಗಳನ್ನು ಪಾಲಿಸಿಕೊಂಡು ದೂರು ದಾಖಲಿಸಿ ಸಿಮ್ ಬ್ಲಾಕ್ ಮಾಡಬಹುದು. ದೂರುದಾರರು ಐಎಂಇಐ ಸಂಖ್ಯೆಯನ್ನು ಮಾತ್ರ ಕಡ್ಡಾಯವಾಗಿ ತಿಳಿದಿರಬೇಕು (ನಿಮ್ಮ ಮೊಬೈಲ್‌ನಲ್ಲಿ *#06# ಎಂದು ಟೈಪ್ ಮಾಡಿ ಡಯಲ್ ಮಾಡಿದಾಗ ನಿಮ್ಮ ಐಎಂಇಐ ಸಂಖ್ಯೆ ಡಿಸ್‌ಪ್ಲೆ ಆಗುತ್ತದೆ. ಇದನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ. ಮೊಬೈಲ್‌ನ ಬಾಕ್ಸ್, ಮೊಬೈಲ್ ಸೆಟ್ಟಿಂಗ್‌ನಲ್ಲಿಯೂ ನೋಡಬಹುದು). ಇಲ್ಲಿ ದೂರು ದಾಖಲಿಸಿದ ಬಳಿಕ ಮೊಬೈಲ್ ಬ್ಲಾಕ್ ಆಗುತ್ತದೆ. ದೂರಿನೊಂದಿಗೆ ಬದಲಿ ಮೊಬೈಲ್ ಸಂಖ್ಯೆ (ಎರಡನೇ ಮೊಬೈಲ್ ಇಲ್ಲದ ಸಂದರ್ಭ ಸಂಬಂಧಿಕರ ಮೊಬೈಲ್ ಸಂಖ್ಯೆ) ನೀಡಬೇಕಾಗುತ್ತದೆ. ಈ ಬದಲಿ ಸಂಖ್ಯೆಗೆ ಬರುವ ಒಟಿಪಿ ನಮೂದಿಸುವ ಮೂಲಕ ದೂರನ್ನು ದೃಢೀಕರಿಸಬೇಕಾಗುತ್ತದೆ.
ಕಳವಾದ ಅಥವಾ ಕಳೆದುಕೊಂಡ ಮೊಬೈಲ್‌ಗೆ ಬೇರೆ ಯಾರಾದರೂ ಸಿಮ್ ಹಾಕಿದ ಕೂಡಲೇ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಅವರು ಆ ಮಾಹಿತಿಯ ಆಧಾರದಲ್ಲಿ ಮೊಬೈಲ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಈ ರೀತಿ ಬ್ಲಾಕ್ ಆದ ಮೊಬೈಲ್ ದೇಶದ ಯಾವುದೇ ಮೂಲೆಯಲ್ಲಿ ಕೂಡ ಕಾರ್ಯನಿರ್ವಹಿಸದಂತೆ ಮಾಡಲಾಗುತ್ತದೆ. ಫೋನ್ ಪತ್ತೆಯಾದ ಅನಂತರ ಪೊಲೀಸರ ಸಮ್ಮುಖದಲ್ಲಿ ವಾರಸು ದಾರರಿಗೆ ಹಿಂದಿರುಗಿಸಲಾಗುವುದು. ಇದೇ ವೇಳೆ ಈ ಪೋರ್ಟಲ್ ಮೂಲಕವೇ ಅನ್‌ಬ್ಲಾಕ್ ಮಾಡಲು ಅವಕಾಶವಿರುತ್ತದೆ.