“ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ನಾಯಕಿಯಾಗಿ ಅಭಿನಯಿಸಿರುವ ಮಹಿಳಾ ಪ್ರಧಾನ ಕಥಾಹಂದರದ “ಕ್ರೀಂ’ ಸಿನಿಮಾ ತೆರೆಗೆ ಬರೋದಕ್ಕೆ ತಯಾರಾಗಿದೆ. ಇದೇ ಮಾ. 1 ರಂದು “ಕ್ರೀಂ’ ಸಿನಿಮಾ ತೆರೆಗೆ ಬರುತ್ತಿದ್ದು, ಸದ್ಯ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ “ಕ್ರೀಂ’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಡಿ. ಕೆ. ದೇವೇಂದ್ರ ಬಂಡವಾಳ ಹೂಡಿ ನಿರ್ಮಿಸಿರುವ “ಕ್ರೀಂ’ ಸಿನಿಮಾವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ “ಕ್ರೀಂ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುವ ಮತ್ತು ಸಿನಿಮಾದ ಪಾತ್ರ ವೊಂದರಲ್ಲೂ ಕಾಣಿಸಿಕೊಂಡಿರುವ ಲೇಖಕ ಅಗ್ನಿ ಶ್ರೀಧರ್ ಸಿನಿಮಾದ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ಅಗ್ನಿ ಶ್ರೀಧರ್, “ನನಗೆ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ. ನಟನೆಯಲ್ಲಿ ನನಗೆ ಆಸಕ್ತಿ ಇರಲಿಲ್ಲ. ನಿರ್ಮಾಪಕ ದೇವೇಂದ್ರ ಈ ಪಾತ್ರ ಮಾಡಲು ನನ್ನನ್ನು ಒತ್ತಾಯಿಸಿದರು. ಈ ಚಿತ್ರದ ಕಥೆ ಹಣ ಹಾಗೂ ಅಧಿಕಾರಕ್ಕಾಗಿ ನಡೆಯುವ ಹೆಣ್ಣುಮಕ್ಕಳ ಬಲಿಯನ್ನು ಕುರಿತಾದ ಕಥಾಹಂದರ ಹೊಂದಿದೆ. ಈಗಲೂ ಕೂಡ ನಮ್ಮ ಊರು, ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಈ ಕೃತ್ಯ ನಡೆಯುತ್ತಲೇ ಇದೆ. ಇಂತಹ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ’ ಎಂದು ಸಿನಿಮಾದ ಕಥೆಯ ಎಳೆಯನ್ನು ಬಿಚ್ಚಿಟ್ಟರು.
“ಸುಮಾರು 5 ವರ್ಷಗಳ ನಂತರ ನಾನು ಅಭಿನಯಿಸಿರುವ ಕನ್ನಡ ಸಿನಿಮಾ ಇದು. ಇಲ್ಲಿಯವರೆಗೂ ಮಾಡಿರದಂಥ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದೇನೆ. ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಮಾಡಿದ್ದೇನೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು ನಾಯಕಿ ಸಂಯುಕ್ತ ಹೆಗಡೆ.
ನಿರ್ದೇಶಕ ಅಭಿಷೇಕ್ ಬಸಂತ್ ಮಾತನಾಡಿ, “ನನ್ನ ಮೊದಲ ಸಿನಿಮಾದಲ್ಲಿ ವಿಭಿನ್ನ ಕಥಾಹಂದರವನ್ನು ತೆರೆಗೆ ತರಬೇಕು ಎಂಬ ಆಸೆಯಿತ್ತು. ಅಗ್ನಿ ಶ್ರೀಧರ್ ಅವರ ಈ ಕಥೆ ಬಹಳ ಇಷ್ಟವಾಯಿತು. ಕೊನೆಗೆ ಅದನ್ನೇ ಆಯ್ಕೆ ಮಾಡಿಕೊಂಡು ಈ ಸಿನಿಮಾ ನಿರ್ದೇಶಿಸಿದ್ದೇನೆ. ಎಲ್ಲರಿಗೂ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ಮಾಪಕ ದೇವೇಂದ್ರ ಮಾತನಾಡಿದರು