ಸುಮಾರು ಐದು ವರ್ಷಗಳಿಂದ ಕನ್ನಡದಲ್ಲಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರದ “ಕಿರಿಕ್ ಪಾರ್ಟಿ’ ಚೆಲುವೆ ಸಂಯುಕ್ತಾ ಹೆಗಡೆ, ಈ ಬಾರಿ “ಕ್ರೀಂ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ “ಕ್ರೀಂ’ ಸಿನಿಮಾದಲ್ಲಿ ಸಂಯುಕ್ತಾ ಹೆಗಡೆ ನಾಯಕಿಯಾಗಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಇದೀಗ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲೇಖಕ ಅಗ್ನಿ ಶ್ರೀಧರ್ “ಕ್ರೀಂ’ ಟ್ರೇಲರ್ ಬಿಡುಗಡೆ ಮಾಡಿದರು. ಟ್ರೇಲರ್ ಬಿಡುಗಡೆ ವೇಳೆ ನಿರ್ಮಾಪಕರಾದ ಕೆ. ಮಂಜು, ಸಂಜಯ್ ಗೌಡ, ನವರಸನ್ ಹಾಗೂ ನಿರ್ದೇಶಕ ಜಡೇಶ್ ಕೆ. ಹಂಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಅಭಿಷೇಕ್ ಬಸಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಕ್ರೀಂ’ ಸಿನಿಮಾವನ್ನು ಡಿ. ಕೆ. ದೇವೇಂದ್ರ ನಿರ್ಮಿಸಿದ್ದು, ಸಿನಿಮಾಕ್ಕೆ ಅಗ್ನಿ ಶ್ರೀಧರ್ ಸಂಭಾಷಣೆ ಬರೆದಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಲೇಖಕ ಅಗ್ನಿ ಶ್ರೀಧರ್, “ಈ ಸಿನಿಮಾದ ಬಗ್ಗೆ ತುಂಬಾ ಭರವಸೆಯಿದೆ. ಬೆಂಗಳೂರಿನ ಕಾಣದ ಗರ್ಭದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇಂಥದ್ದೊಂದು ಕಥೆಯನ್ನು ಸಿನಿಮಾ ಮಾಡುವುದಕ್ಕೆ ತುಂಬಾ ಧೈರ್ಯ ಬೇಕು. ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಕಣ್ಮರೆಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಈ ಸಿನಿಮಾದಲ್ಲಿದೆ’ ಎಂದು “ಕ್ರೀಂ’ ಕಥಾಹಂದರದ ಎಳೆಯನ್ನು ಬಿಚ್ಚಿಟ್ಟರು.
ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟಿ ಸಂಯುಕ್ತಾ ಹೆಗಡೆ, “ಇಲ್ಲಿಯವರೆಗೂ ನಾನು ಮಾಡಿರದಂಥ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಮಾಡಿದ್ದೇನೆ. ಆ್ಯಕ್ಷನ್ ಮಾಡುವಾಗ ಕಾಲು ಕೂಡ ಮುರಿದಿತ್ತು. ಐದು ವರ್ಷಗಳ ಒಂದೊಳ್ಳೆ ಸಿನಿಮಾದ ಮೂಲಕ ಮತ್ತೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಎಲ್ಲರ ಪರಿಶ್ರಮದಿಂದ “ಕ್ರೀಂ’ ಸಿನಿಮಾ ಚೆನ್ನಾಗಿ ಬಂದಿದೆ. ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ’ ಎಂದರು.
“ಚಿತ್ರತಂಡದ ಸಹಕಾರದಿಂದ 28 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಈಗ ಟ್ರೇಲರ್ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದೆ’ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.
ನಿರ್ಮಾಪಕ ಡಿ. ಕೆ. ದೇವೇಂದ್ರ, ಸಂಗೀತ ನಿರ್ದೇಶಕ ರೋಹಿತ್, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಸಿನಿಮಾದಲ್ಲಿ ಅಭಿನಯಿಸಿರುವ ರೋಷನ್, ಬಚ್ಚನ್, ಇಫ್ರಾನ್ ಮತ್ತಿತರರು “ಕ್ರೀಂ’ ಸಿನಿಮಾದ ಕುರಿತು ಮಾತನಾಡಿದರು.