ಸಾಗರ: ಜೈನ ಧರ್ಮದಲ್ಲಿ ಜನ್ಮ ತಾಳುವುದರಿಂದ ಜೀವನ ಪಾವನವಾಗುವುದಿಲ್ಲ. ಧರ್ಮದ ಆಚರಣೆಯಿಂದ ಮಾತ್ರ ಜೈನರಾಗಿ ಜನ್ಮ ತಾಳಿರುವುದಕ್ಕೆ ಸಾರ್ಥಕವಾಗುತ್ತದೆ. ಅಂತಹ ಮೋಕ್ಷಮಾರ್ಗದಲ್ಲಿ ಮುನ್ನಡೆಯುವುದರಿಂದ ಕರ್ಮಗಳು ಕಳೆಯುತ್ತವೆ ಎಂದು ಸಮ್ಯಕ್ ಸಾಗರ ಮುನಿಮಹಾರಾಜರು ನುಡಿದರು.
ತಾಲೂಕಿನ ಬಾರಂಗಿ ಹೋಬಳಿ ಅರಲಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳಬಳ್ಳಿ ಭಗವಾನ್ ನೇಮಿನಾಥ ತೀರ್ಥಂಕರರ ದಿಗಂಬರ ಜಿನ ಮಂದಿರದ ವೇದಿ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ, ಜೈನರು ಆಚಾರ ವಿಚಾರದಿಂದ ಗುರುತಿಸಿಕೊಳ್ಳಬೇಕು. ಕಂದಮೂಲಗಳ ತ್ಯಾಗಮಾಡಬೇಕು. ನಿತ್ಯ ಪೂಜೆ ವಿಧಿವಿಧಾನಗಳನ್ನು ನಿರ್ವಹಿಸುವ ಮೂಲಕ ಧರ್ಮ ಜಾಗೃತಿಗಾಗಿ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ದಿನೇದಿನೆ ಅಧರ್ಮ ಹೆಚ್ಚಾಗುತ್ತಿದೆ. ಧರ್ಮ ಜಾಗೃತಿಯಿರುವವರೆಗೆ ಧರ್ಮಮಾರ್ಗದಲ್ಲಿ ನಡೆಯಬೇಕು. ಮುಂದೊಂದು ದಿನ ಧರ್ಮ ಅವನತಿ ಹೊಂದುವ ದಿನ ಬರುವ ಸಾಧ್ಯತೆಯಿದೆ. ಅಂತಹ ದಿನಗಳಲ್ಲಿ ಜನಜೀವನ ನಿಯಂತ್ರಣ ತಪ್ಪಿದಂತಾಗುತ್ತದೆ. ಆದ್ದರಿಂದ ಧರ್ಮ ಉಳಿಯುವಂತೆ ಪ್ರತಿಯೊಬ್ಬರೂ ಧರ್ಮಜಾಗೃತಿಗಾಗಿ ತುಡಿಯುವ ಮೂಲಕ ಅನುಸರಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಕೆನಡಾದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಸಾವು
ಶಿವಮೊಗ್ಗದ ವಿಜಯ ಕುಮಾರ್ ಜೆ. ದಿನಕರ್ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಧರ್ಮಜಾಗೃತಿ ಕ್ಷೀಣಿಸುತ್ತಿದೆ. ದೇಶದಲ್ಲಿ ಜೈನರು 35 ಕೋಟಿ ಜನಸಂಖ್ಯೆಯಿತ್ತು. ಆದರೆ ಪ್ರಸ್ತುತ 1 ಕೋಟಿ ಜನಸಂಖ್ಯೆಗೆ ಕುಸಿಯಲು ಕಾರಣವೇನು ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಜೈನ ಮಂದಿರಗಳ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ. ಪ್ರತಿಯೊಬ್ಬ ಶ್ರಾವಕರು ಮಂದಿರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುವ ಸಂಕಲ್ಪ ಮಾಡಬೇಕಿದೆ. ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಬಿತ್ತುವ ಧಾರ್ಮಿಕ ಶಿಬಿರಗಳಿಗೆ ಸೇರಿಸಬೇಕು. ಜೈನ ಯುವಕ-ಯುವತಿಯರು ಧರ್ಮದ ಚೌಕಟ್ಟು ಮೀರದಂತೆ ಸುಸಂಸ್ಕೃತ ಸಂಸ್ಕಾರವಂತರನ್ನಾಗಿ ಮಾರ್ಪಡಿಸಬೇಕು ಎಂದು ಕರೆ ನೀಡಿದರು.
ಬಿದರೂರು ಜೈನ ಬಸದಿ ಅಧ್ಯಕ್ಷೆ ಬಬಿತಾ ಪ್ರೇಮ್‌ಕುಮಾರ್ ಮಾತನಾಡಿದರು. ವೇದಿ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ವೀರರಾಜ ಜೈನ್ ಮರುಬಿಡಿ ಅಧ್ಯಕ್ಷತೆ ವಹಿಸಿದ್ದರು. ಸಾಗರ ಜೈನ ಬಸದಿ ಅಧ್ಯಕ್ಷರಾದ ಹೊಯ್ಸಳ ಜೈನ್, ಇಡುವಾಣಿ ಬಸದಿ ಅಧ್ಯಕ್ಷ ನೇಮಯ್ಯ ಜೈನ್, ಹಲಕಂಟ ಜೈನ ಬಸದಿ ಅಧ್ಯಕ್ಷರಾದ ಸಂತೋಷ್‌ಕುಮಾರ್ ಜೈನ್, ನೆಲೆನೆಲೆ ಜಿನಮಂದಿರದ ಅಧ್ಯಕ್ಷರಾದ ಪಾರ್ಶ್ವನಾಥ ಜೈನ್ ಉಪಸ್ಥಿತರಿದ್ದರು.