ಅನೇಕ ಭಾರತೀಯರ ಮೆಚ್ಚಿನ ಮೊಬೈಲ್ ಫೋನ್ ಬ್ರಾಂಡ್ ಸ್ಯಾಮ್ ಸಂಗ್. ಹೊಸದೊಂದು ಫೋನ್ ಕೊಳ್ಳಬೇಕೆಂದು ಕೊಂಡಾಗ ಅನೇಕರು ಸ್ಯಾಮ್ ಸಂಗ್ ಅನ್ನು ಪರಿಗಣಿಸುತ್ತಾರೆ. ಕೊರಿಯಾ ಮೂಲದ ಸ್ಯಾಮ್ ಸಂಗ್ ಭಾರತದ ಬ್ರಾಂಡೇನೋ ಎಂಬಷ್ಟು ಜನರಿಗೆ ಚಿರಪರಿಚಿತವಾಗಿದೆ.
ಚೀನಾ ಮೂಲದ ಶಿಯೋಮಿ, ವಿವೋ, ಒಪ್ಪೋ, ರಿಯಲ್‍ಮಿ, ಐಕೂ ಇತ್ಯಾದಿ ಬ್ರಾಂಡ್‍ಗಳು ಆನ್‍ಲೈನ್ ಮಾರಾಟದ ಮೂಲಕ ಮಿತವ್ಯಯದ ದರಕ್ಕೆ ಉತ್ತಮ ತಾಂತ್ರಿಕ ಅಂಶಗಳನ್ನೊಳಗೊಂಡ ಫೋನ್‍ಗಳನ್ನು ಕೊಡಲು ಆರಂಭಿಸಿದವು. ಅದುವರೆಗೂ ಕೊಂಚ ಹೆಚ್ಚಿನ ದರವನ್ನೇ ಇಡುತ್ತಿದ್ದ ಸ್ಯಾಮ್‍ಸಂಗ್ ಈಗ ಪೈಪೋಟಿ ಜಾಸ್ತಿಯಾದ ಪರಿಣಾಮ, ಆನ್‍ಲೈನ್ ಮಾರಾಟವನ್ನೇ ಗುರಿಯಾಗಿಸಿಕೊಂಡು ಹಲವು ಫೋನ್‍ಗಳನ್ನು ಹೊರತರಲಾರಂಭಿಸಿದೆ.
ಇನ್ನು ಕೆಲವು ತಿಂಗಳಲ್ಲಿ ಭಾರತದಲ್ಲಿ 5ಜಿ ನೆಟ್ ವರ್ಕ್ ಸೌಲಭ್ಯ ಬರಲಿರುವುದರಿಂದ 5ಜಿ ಸೌಲಭ್ಯ ಇರುವ ಫೋನ್‍ಗಳಿಗೆ ಕಂಪೆನಿಗಳು ಆದ್ಯತೆ ನೀಡುತ್ತಿವೆ. ಸ್ಯಾಮ್ ಸಂಗ್‍ನ ಎಂ ಸರಣಿಯ, ( ಮಧ್ಯಮ ದರ್ಜೆಯ) ಫೋನ್‍ಗಳಲ್ಲಿ 5ಜಿ ಇರುವ ಮೊದಲ ಫೋನ್ ಇದು. ಅದುವೇ ಸ್ಯಾಮ್ ಸಂಗ್ ಗೆಲಾಕ್ಸಿ ಎಂ42 5ಜಿ.
ಈ ಫೋನು ಎರಡು ಆವೃತ್ತಿಗಳಲ್ಲಿ ಲಭ್ಯ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 22,000 ರೂ., 8 ಜಿಬಿ+128 ಜಿಬಿ ಆವೃತ್ತಿಗೆ 24000 ರೂ. ಇದೆ.
ಪೈಪೋಟಿ ಹೆಚ್ಚಿರುವುದರಿಂದ ತನ್ನ ಮಧ್ಯಮ ದರ್ಜೆಯ ಫೋನ್ ಗಳನ್ನು ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಮಾಡುವಲ್ಲಿ ಸ್ಯಾಮ್ ಸಂಗ್ ಆಸಕ್ತಿ ವಹಿಸುತ್ತಿರುವುದು ಒಳ್ಳೆಯದು. ಗೆಲಾಕ್ಸಿ ಎಂ. 42ರ ಹಾರ್ಡ್ ವೇರ್ ವಿನ್ಯಾಸ ಹೆಚ್ಚಿನ ದರದ ಫೋನ್‍ಗಳನ್ನು ಹೋಲುತ್ತದೆ. ಹಿಂಬದಿ ಮತ್ತು ಫೋನಿನ ಫ್ರೇಮ್ ಪಾಲಿಕಾರ್ಬೊನೇಟ್ ಆಗಿದ್ದರೂ, ಗ್ಲಾಸ್ ಫಿನಿಶಿಂಗ್ ಬರುವಂತೆ ರೂಪಿಸಲಾಗಿದೆ. ಅಲ್ಲದೇ ಫೋನಿನ ಹಿಂಬದಿ ವಿನ್ಯಾಸವೇ ವಿಶಿಷ್ಟವಾಗಿದೆ. ನಾಲ್ಕು ಬಣ್ಣದ ಶೇಡ್‍ಗಳನ್ನು ಹಂತ ಹಂತವಾಗಿ ನೀಡಲಾಗಿದೆ.
6.6 ಇಂಚಿನ ಸೂಪರ್ ಅಮೋಲೆಡ್ ಪರದೆ ನೀಡಲಾಗಿದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಸೆಲ್ಫಿ ಕ್ಯಾಮರಾಕ್ಕೆ ನೀರಿನ ಹನಿಯ ವಿನ್ಯಾಸ ನೀಡಲಾಗಿದೆ. ಎಲ್ಲ ಸರಿ ಆದರೆ, ಪರದೆಗೆ ಫುಲ್ ಎಚ್‍ಡಿ ಪ್ಲಸ್ ಡಿಸ್‍ಪ್ಲೇ ನೀಡಿಲ್ಲದಿರುವುದು ಕೊರತೆಯಾಗಿದೆ. ಎಚ್.ಡಿ. ಪ್ಲಸ್ (720*1600) ರೆಸ್ಯೂಲೇಷನ್ ಇದೆ. (265 ಪಿಪಿಐ) ಇನ್ನೆಲ್ಲ ಅಂಶಗಳನ್ನೂ ತೃಪ್ತಿಕರವಾಗಿ ನೀಡಿ, ಪರದೆಯನ್ನು ಫುಲ್ ಎಚ್‍ಡಿ ಪ್ಲಸ್ ನೀಡಲು ಚೌಕಾಸಿ ತೋರಿದ್ದೇಕೆಂದು ಅನಿಸದಿರದು. ಆದರೂ ಅಮೋಲೆಡ್ ಪರದೆ ಆ ಕೊರತೆಯನ್ನು ನೀಗಿಸುತ್ತದೆ. ಪರದೆಯ ಮೇಲೆಯೇ ಸೆಕ್ಯುರಿಟಿಗಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.
ಕ್ವಾಲ್‍ಕಾಂ ಸ್ನಾಪ್‍ಡ್ರಾಗನ್ 750 ಜಿ ಪ್ರೊಸೆಸರ್ ನೀಡಿರುವುದು ತೃಪ್ತಿಕರ ವಿಷಯ. ಸಾಮಾನ್ಯವಾಗಿ ಸ್ಯಾಮ್ ಸಂಗ್ ತನ್ನ ಆರಂಭಿಕ ಮತ್ತು ಮಧ್ಯಮ ದರ್ಜೆಯ ಫೋನ್‍ಗಳಲ್ಲಿ ಸ್ನಾಪ್ ಡ್ರಾಗನ್ ಪ್ರೊಸೆಸರ್ ನೀಡುವುದು ಅಪರೂಪ. ಇದರಲ್ಲಿ ಸ್ನಾಪ್‍ಡ್ರಾಗನ್ 750 ಪ್ರೊಸೆಸರ್ ನೀಡಿ ಉದಾರತೆ ತೋರಿದೆ! ಈ ಪ್ರೊಸೆಸರ್ ಮಧ್ಯಮ ದರ್ಜೆಯಲ್ಲಿ ಹೆಚ್ಚಿನ ಸಾಮರ್ಥ್ಯದ್ದು. 30-35 ಸಾವಿರ ಬೆಲೆಯ ಫೋನ್‍ಗಳಲ್ಲೂ ಇದನ್ನು ಬಳಸಲಾಗುತ್ತದೆ. ಹಾಗಾಗಿ ಫೋನಿನ ವೇಗ ಚೆನ್ನಾಗಿದೆ.
ಇದು ಅಂಡ್ರಾಯ್ಡ್ 11 ಆವೃತ್ತಿ ಹೊಂದಿದ್ದು, ಇದಕ್ಕೆ ಸ್ಯಾಮ್ ಸಂಗ್‍ನ ಸ್ವಂತದ ಒನ್ ಯುಐ 3.1 ಅನ್ನು ಹೊಂದಾಣಿಕೆ ಮಾಡಲಾಗಿದೆ. ಸ್ಯಾಮ್ ಸಂಗ್ ಫೋನ್‍ಗಳ ಬಳಕೆದಾರರಿಗೆ ಚಿರಪರಿಚಿತವಾಗಿರುವ ಯೂಸರ್ ಇಂಟರ್ ಫೇಸ್ ಇದರಲ್ಲೂ ಇದೆ. ಆದರೆ ಥೀಮ್ ಗಳು, ವಾಲ್‍ಪೇಪರ್ ಗಳು ಹೊಸದಾಗಿವೆ. ಹಾಗಾಗಿ ಫೋನ್ ಯುಐ ಫ್ರೆಶ್ ಆಗಿ ಕಾಣುತ್ತದೆ. ಐಕಾನ್‍ಗಳ ಪ್ಯಾಕ್ ಗಳ ಡಿಸೈನ್ ಇನ್ನೊಂದಿಷ್ಟು ಇದ್ದರೆ ಒಳ್ಳೆಯದು.
ಇದರಲ್ಲಿ 48 ಮೆ.ಪಿ., 8 ಮೆ.ಪಿ. 5 ಮೆ.ಪಿ. ಮತ್ತು 5 ಮೆ.ಪಿ. ಲೆನ್ಸ್ ಗಳಿರುವ ನಾಲ್ಕು ಕ್ಯಾಮರಾಗಳು ಹಿಂಬದಿಯಲ್ಲಿವೆ. ಮುಂಬದಿಗೆ 20 ಮೆಗಾ ಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ಈ ರೇಂಜಿನಲ್ಲಿ ಸ್ಯಾಮ್‍ಸಂಗ್ ಕ್ಯಾಮರಾಗಳು ನಿರಾಸೆ ಮೂಡಿಸುವುದಿಲ್ಲ. 64 ಮೆ.ಪಿ. ಕೊಟ್ಟಿದ್ದರೆ ಇನ್ನೂ ಉತ್ತಮವಾಗುತ್ತಿತ್ತು.
5000 ಎಂಎಎಚ್ ನ ದೊಡ್ಡ ಬ್ಯಾಟರಿ ಇದೆ. ಟೈಪ್ ಸಿ ಪೋರ್ಟ್ ನೀಡಲಾಗಿದೆ. ಇಷ್ಟು ದೊಡ್ಡ ಬ್ಯಾಟರಿ ಚಾರ್ಜ್ ಮಾಡಲು 15 ವ್ಯಾಟ್ಸ್ ಚಾರ್ಜರ್ ಕೊಡಲಾಗಿದೆ. ಇದರಿಂದ ಚಾರ್ಜಿಂಗ್ ನಿಧಾನ ಗತಿಯಲ್ಲಾಗುತ್ತದೆ. ಶೂನ್ಯದಿಂದ 15 ನಿಮಿಷಕ್ಕೆ ಶೇ. 12ರಷ್ಟು ಚಾರ್ಜ್ ಆಗುತ್ತದೆ. ಅರ್ಧಗಂಟೆಗೆ ಶೇ. 25ರಷ್ಟು ಚಾರ್ಜ್ ಆದರೆ. 1 ಗಂಟೆಗೆ ಶೇ. 50ರಷ್ಟು ಚಾರ್ಜ್ ಆಗುತ್ತದೆ. ಸಂಪೂರ್ಣ ಚಾರ್ಜ್ ಆಗಲು 2 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತದೆ. ಇನ್ನೂ ವೇಗವಾಗಿ ಚಾರ್ಜ್ ಆಗಬೇಕೆಂದರೆ ಪ್ರತ್ಯೇಕವಾಗಿ 33 ವ್ಯಾಟ್ಸ್ ಚಾರ್ಜರನ್ನು ಗ್ರಾಹಕ ಖರೀದಿಸಬೇಕು.
ಪ್ರತಿಸ್ಪರ್ಧಿ ಕಂಪೆನಿಗಳು ಈ ಕೆಟಗರಿಯಲ್ಲಿ 33 ವ್ಯಾಟ್ಸ್ ಫಾಸ್ಟ್ ಚಾರ್ಜರ್ ಅನ್ನು ಫೋನ್ ನೊಂದಿಗೆ ನೀಡುತ್ತವೆ. 20 ಸಾವಿರ ಮೇಲ್ಪಟ್ಟ ಫೋನ್‍ಗಳಲ್ಲಾದರೂ ಸ್ಯಾಮ್ ಸಂಗ್ 33 ವ್ಯಾಟ್ಸ್ ವೇಗದ ಚಾರ್ಜರನ್ನು ಬಾಕ್ಸ್ ನೊಂದಿಗೆ ನೀಡುವ ಮನಸ್ಸು ಮಾಡಬೇಕು.
8 ಜಿಬಿ ರ್ಯಾಮ್ ಮಾದರಿಗೆ 2 ಸಾವಿರ ರೂ. ಜಾಸ್ತಿ ಇರುವುದರಿಂದ, 6 ಜಿಬಿ ರ್ಯಾಮ್ ಸಾಕಷ್ಟಾದ್ದರಿಂದ ಆ ಮಾದರಿ ಕೊಳ್ಳುವುದು ಮಿತವ್ಯಯಕರ.
-ಕೆ.ಎಸ್. ಬನಶಂಕರ ಆರಾಧ್ಯ