Advertisement

ಸ್ಯಾಮ್‌ ಸಂಗ್‌ ಗೆಲಾಕ್ಸಿ ಝಡ್‌ ಫೋಲ್ಡ್‌ 4: ಇದರ ವಿಶೇಷಗಳನ್ನು ನೋಡಿದರೆ ಬೆರಗಾಗುತ್ತೀರಿ..!

12:29 PM Sep 15, 2022 | Team Udayavani |

ಸ್ಯಾಮ್‌ ಸಂಗ್‌ ಕಂಪೆನಿ ಪ್ರತಿ ವರ್ಷ ಅತ್ಯುನ್ನತ ತಾಂತ್ರಿಕತೆಗಳನ್ನುಳ್ಳ (ಫ್ಲಾಗ್‌ ಶಿಪ್‌) ಮೊಬೈಲ್ ಫೋನ್‌ ಗಳನ್ನು ಹೊರತರುತ್ತದೆ. ಈ ವರ್ಷ ಅದರ ಫ್ಲಾಗ್‌ ಶಿಪ್‌ ಫೋನ್‌ ಸ್ಯಾಮ್‌ ಸಂಗ್‌ ಗೆಲಾಕ್ಸಿ ಫೋಲ್ಡ್‌.

Advertisement

ಮಡಚಬಹುದಾದ ಪರದೆಯುಳ್ಳ ಫೋನ್‌ ಗಳಲ್ಲಿ ಸ್ಯಾಮ್‌ ಸಂಗ್‌ ಗೆ ಅಗ್ರಸ್ಥಾನವಿದೆ. ಆ್ಯಪಲ್‌ ಕಂಪೆನಿ ಅಂಡ್ರಾಯ್ಡ್‌ ಫೋನುಗಳಿಗಿಂತಲೂ ಪರದೆ ಹೆಚ್ಚು ದೊಡ್ಡದಲ್ಲದ ಫೋನ್‌ ಗಳ ತಯಾರಿಕೆಗೆ ಆದ್ಯತೆ ನೀಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಯಾಮ್‌ ಸಂಗ್‌ ಮಾಮೂಲಿ ಅಂಡ್ರಾಯ್ಡ್‌ ಫೋನ್‌ಗಳ 6.7 ಇಂಚಿನ ಪರದೆಗಿಂತಲೂ ಮುಂದೆ ಹೋಗಿ ಮಡಚಬಹುದಾದ ಪರದೆಯ ವಿಶೇಷಣವುಳ್ಳ ದುಬಾರಿ ಬೆಲೆಯ ಫೋನ್‌ ಗಳನ್ನು ಹೊರತರುತ್ತಿದೆ. ಈ ಸರಣಿಯ ಹೊಸ ಫೋನ್‌ ಗೆಲಾಕ್ಸಿ ಝಡ್‌ 4. ಕಳೆದ ವರ್ಷ ಗೆಲಾಕ್ಸಿ ಝಡ್‌ ಫೋಲ್ಡ್‌ 3 ಹೊರ ತಂದು ಅದರ ಯಶಸ್ಸಿನಿಂದ ಉತ್ತೇಜಿತವಾಗಿ ಝಡ್‌ 4 ಅನ್ನು ಸ್ಯಾಮ್‌ ಸಂಗ್‌ ಹೊರತಂದಿದೆ.  ಇದರ ದರ 12 ಜಿಬಿ ರ್ಯಾಮ್‌ ಹಾಗೂ 256 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 1,54,999 ರೂ. ಹಾಗೂ 12 ಜಿಬಿ ರ್ಯಾಮ್‌, 512 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 1,64,999 ರೂ.

ವಿನ್ಯಾಸ: ಈ ಫೋನಿನ ವಿನ್ಯಾಸ ನಮ್ಮ ಮಾಮೂಲಿ ಫೋನುಗಳಂತಲ್ಲ! ಸಣ್ಣ ಪ್ಯಾಕೆಟ್‌ ಡೈರಿಯಂತಹದ್ದು. ನೀವು ಮಡಚಿದರೆ ಸಾಮಾನ್ಯ ಫೋನು, ತೆರೆದರೆ ಟ್ಯಾಬ್ಲೆಟ್ಟು! ಮುಚ್ಚಿದಾಗ ಎರಡು ಸ್ಲಿಮ್‌ ಫೋನುಗಳನ್ನು ಒಂದರ ಮೇಲೊಂದರಂತೆ ಇಟ್ಟಂತೆ ಕಾಣುತ್ತದೆ. ಇದರ ತೂಕ 263 ಗ್ರಾಂ. ಇದೆ. ಫೋನಿನ ಕೆಳಗೆ ಎಡಬದಿಯಲ್ಲಿ ಸ್ಪೀಕರ್‌ ಗ್ರಿಲ್‌ ಇದೆ. ಬಲಗಡೆ ಟೈಪಿ ಸಿ ಚಾರ್ಜರ್‌ ಪೋರ್ಟ್‌ ಇದೆ. ಮೇಲಿನ ಎಡಗಡೆ ಇನ್ನೊಂದು ಸ್ಪೀಕರ್‌ ಗ್ರಿಲ್‌ ಇದೆ. ಫೋನಿನ ಬಲ ಬದಿಯಲ್ಲಿ ಬೆರಳಚ್ಚು ಸ್ಕ್ಯಾನರ್‌, ವ್ಯಾಲ್ಯೂಮ್‌ ಹೆಚ್ಚು ಕಡಿಮೆ ಮಾಡುವ ಬಟನ್‌ ಇದೆ.  ಫೋನಿನ ಫ್ರೇಂ ಲೋಹದ್ದಾಗಿದೆ.  ಫೋನಿನ ತಳಭಾಗದಲ್ಲಿ ಒಂದು ಭಾಗ ಇನ್ನೊಂದು ಸಣ್ಣ ಪರದೆ ಬರುತ್ತದೆ. ಇನ್ನೊಂದು ಬದಿ ಲೋಹದ್ದಾಗಿದೆ. ಅದರಲ್ಲಿ ಮೂರು ಕ್ಯಾಮರಾ ಲೆನ್ಸ್‌ ಗಳಿವೆ. ಕ್ಯಾಮರಾ ಮೇಲಕ್ಕೆ ಉಬ್ಬಿದೆ. ಐಪಿಎಕ್ಸ್‌ 8 ರೇಟಿಂಗ್‌ ನೀರು ನಿರೋಧಕವಾಗಿದೆ. ವಿಶ್ವದ ಮೊದಲ ನೀರು ನಿರೋಧಕ ಫೋಲ್ಡೆಬಲ್‌ ಫೋನ್‌ ಎಂದು ಕಂಪೆನಿ ಹೇಳಿಕೊಂಡಿದೆ. ಒಟ್ಟಾರೆ ಫೋನು ಬಹಳ ಗಟ್ಟಿಮುಟ್ಟಾಗಿದೆ.

ವಿಶೇಷ ಪರದೆ: ಈ ಫೋಲ್ಡಿಂಗ್‌ ಫೋನು ಎರಡು ರೀತಿಯ ವಿಭಿನ್ನ ಪರದೆಗಳನ್ನು ಹೊಂದಿದೆ. ಪುಸ್ತಕದ ರೀತಿ ಇರುವ ಫೋನನ್ನು ತೆರೆದಾಗ ಎರಡೂ ಬದಿ ಸೇರಿ ಟ್ಯಾಬ್‌ ರೀತಿಯ ದೊಡ್ಡ ಪರದೆಯಾಗಿ ರೂಪುಗೊಳ್ಳುತ್ತದೆ. ಇದು 7.6 ಇಂಚು ಇದೆ. ಸಾಧಾರಣ ಟ್ಯಾಬ್ಲೆಟ್‌ ಗಳ ಅಳತೆಯನ್ನು ಹೋಲುತ್ತದೆ. ಈ ಪರದೆಯನ್ನು ಪುಸ್ತಕದ ರೀತಿ ಮುಚ್ಚಿದಾಗ ಬರುವ ಕವರ್‌ ನಲ್ಲಿ ಇನ್ನೊಂದು ಪರದೆ ಇದೆ. ಈ ಪರದೆ 6.2 ಇಂಚು ಇದೆ.

7.6 ಇಂಚಿನ ಪರದೆ ಮೊಬೈಲ್‌ ಪರದೆಗಳಿಗೆ ಹೋಲಿಸಿದಾಗ ಅತ್ಯಂತ ದೊಡ್ಡದಾಗಿದ್ದು, 21761812 ಪಿಕ್ಸಲ್‌ ಗಳನ್ನು ಹೊಂದಿದೆ. ಎರಡನೇ 6.20 ಇಂಚಿನ ಪರದೆ 9042316 ಪಿಕ್ಸಲ್‌ ಗಳನ್ನೊಳಗೊಂಡಿದೆ. ಪರದೆಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ವಿಕ್ಟಸ್‌ ಪ್ಲಸ್‌ ರಕ್ಷಣಾ ಕವಚವಿದೆ. ಪರದೆಯ ರಿಫ್ರೆಶ್‌ ರೇಟ್‌ 120 ಹರ್ಟ್ಜ್‌ ಇದೆ.  ಪರದೆಯ ರಿಚ್‌ನೆಸ್‌ ತುಂಬಾ ಚೆನ್ನಾಗಿದ್ದು, ಲೀಲಾಜಾಲವಾಗಿ ಪರದೆಯನ್ನು ಚಲಿಸುತ್ತದೆ.

Advertisement

ಈ ಫೋನಿನ ಬಗ್ಗೆ ಹೇಳುವಾಗ ಪರದೆಯೇ ಇದರ ಬಹು ಮುಖ್ಯ ವಿಶೇಷ. ದೊಡ್ಡ ಪರದೆ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಇಡೀ ಪರದೆಯಲ್ಲಿ ಕ್ಯಾಮರಾದ ಪಂಚ್‌ ಹೋಲ್‌ ಸಹ ಕಾಣದಂತೆ ವಿನ್ಯಾಸಗೊಳಿಸಲಾಗಿದೆ. ಮಾಮೂಲಿ 6.5 ಇಂಚಿನ ಪರದೆಯ ಫೋನ್‌ ನೋಡಿ, ಇದನ್ನು ನೋಡಿದಾಗ ಪ್ರತಿಯೊಂದು ಅಂಶವೂ ಹೊಸದಾಗಿ ಕಾಣುತ್ತದೆ. ಪರದೆಯ ಮೇಲಿನ ಆಪ್‌ಗಳನ್ನು ತೆರೆದಾಗ ಸಿಗುವ ಅನುಭವ ಹೊಸತು. ಉದಾಹರಣೆಗೆ, ವಾಟ್ಸಪ್‌, ಫೇಸ್‌ ಬುಕ್‌ ಅನ್ನೇ ತೆಗೆದುಕೊಂಡರೆ, ಅವುಗಳನ್ನು ತೆರೆದಾಗ ಲ್ಯಾಪ್‌ ಟಾಪ್‌ ಪರದೆಯಲ್ಲಿ ತೆರೆದುಕೊಂಡಂತೆ ಕಾಣುತ್ತದೆ. ಗ್ಯಾಲರಿಯನ್ನು ತೆರೆದಾಗ ಫೋಟೋಗಳು ದೊಡ್ಡದಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ. ಅಮೋಲೆಡ್‌ ಪರದೆ ಬಣ್ಣಗಳಿಗೆ ಹೆಚ್ಚಿನ ಶ್ರೀಮಂತಿಕೆ ನೀಡುತ್ತದೆ.

ಪರದೆಯನ್ನು ಓಪನ್‌ ಮಾಡಿ ಯಾವುದೇ ಆಪ್‌ ಓಪನ್‌ ಮಾಡಿದ್ದರೂ, ಪರದೆಯ ಕೆಳಭಾಗದ ಟಾಸ್ಕ್‌ ಬಾರ್‌ನಲ್ಲಿ ಬಹುಮುಖ್ಯ ಆಪ್‌ ಗಳ ಐಕಾನ್‌ ಗಳು  ಇರುತ್ತವೆ. ಮಾಮೂಲಿ ಫೋನಿನಂತೆ ಹಿಂದಕ್ಕೆ ಹೋಗಿ ಇನ್ನೊಂದು ಆಪ್‌ ಓಪನ್‌ ಮಾಡಬೇಕಾದ ಅಗತ್ಯವಿಲ್ಲ. ಅಲ್ಲೇ ಕೆಳಗೆ ಒತ್ತಿ ಇನ್ನೊಂದು ಆಪ್‌ ಓಪನ್‌ ಮಾಡಬಹುದು. ಇಷ್ಟೇ ಅಲ್ಲದೇ, ಫೋನಿನ ಬಲ ಬದಿಯಲ್ಲಿ ಒಂದು ಪಟ್ಟಿ ಇದ್ದು, ಅದನ್ನು ತೆರೆದುಕೊಂಡು ಅಲ್ಲಿಯೂ ಬಹು ಮುಖ್ಯ ಆಪ್‌ ಗಳಿಗೆ ಪ್ರವೇಶ ಪಡೆಯಬಹುದು.

ಈ ದೊಡ್ಡ ಪರದೆಯಲ್ಲಿ ಇಪೇಪರ್‌ ಗಳನ್ನು ಲೀಲಾಜಾಲವಾಗಿ ಓದಬಹುದು, ಯೂಟ್ಯೂಬ್‌ ವಿಡಿಯೋಗಳನ್ನು ದೊಡ್ಡದಾಗಿ ವೀಕ್ಷಿಸಬಹುದು. ಕ್ರೋಮ್‌ ನಲ್ಲಿ ನಿಮಗಿಷ್ಟವಾದ ವೆಬ್‌ ಸೈಟ್‌ಗಳನ್ನು ಕಣ್ಣು ಕಿರಿದಾಗಿಸದೇ ನೋಡಬಹುದು.

ಪ್ರೊಸೆಸರ್‌ ಮತ್ತು ಕಾರ್ಯಾಚರಣೆ: ಇದರಲ್ಲಿ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ ೮ಪ್ಲಸ್‌ ಜನರೇಷನ್‌ 1 ಪ್ರೊಸೆಸರ್‌ ಅಳವಡಿಸಲಾಗಿದೆ. ಈ ಪ್ರೊಸೆಸರ್‌ ಸದ್ಯ ಫೋನುಗಳಲ್ಲಿ ಅತ್ಯಂತ ಪ್ರಬಲ ಪ್ರೊಸೆಸರಾಗಿದೆ.  ಆಂಡ್ರಾಯ್ಡ್‌ 12 ಆವೃತ್ತಿ ಇದೆ. ಸ್ಯಾಮ್‌ ಸಂಗ್‌ನ ಒನ್‌ ಯೂಸರ್‌ ಇಂಟರ್‌ಫೇಸ್‌ 4.1.1 ಆವೃತ್ತಿ ಹೊಂದಿದೆ. ಇದು ದೊಡ್ಡದಾದ ಪರದೆಯನ್ನು ಹೊಂದಿರುವುದರಿಂದ ಇಂಟರ್‌ ಫೇಸ್‌ ನಲ್ಲಿ ಬದಲಾವಣೆ ಇದೆ. ಲ್ಯಾಪ್‌ ಟಾಪ್‌ ಮಾದರಿಯಲ್ಲಿ ಇಂಟರ್‌ಫೇಸ್‌ ಇದೆ. ಫೋನಿನ ಕಾರ್ಯಾಚರಣೆ ಅತ್ಯಂತ ವೇಗವಾಗಿ ನಡೆಯುತ್ತದೆ. ಮಲ್ಟಿ ಟಾಸ್ಕಿಂಗ್‌ ಒಂದಿನಿತೂ ಅಡೆತಡೆಯಿಲ್ಲದೇ ಚಲಾವಣೆಯಾಗುತ್ತದೆ. ಬ್ಯುಸಿನೆಸ್‌ ಬಳಕೆದಾರರಿಗೆ, ಸಾಮಾನ್ಯ ಲ್ಯಾಪ್‌ ಟಾಪ್‌ ಬಳಸಿಯೇ ಕೆಲಸ ಮಾಡಬೇಕೆನ್ನುವವರಿಗೆ ಇದರಲ್ಲಿ ಲೀಲಾಜಾಲವಾಗಿ ಮೇಲ್‌ ಕಳಿಸಲು ಸೂಕ್ತವಾಗಿದೆ. ನೋಟ್‌ ಗಳನ್ನು ಎರಡೂ ಕೈ ಬೆರಳುಗಳನ್ನು ಬಳಸಿ ಆರಾಮಾಗಿ ಟೈಪ್‌ ಮಾಡಬಹುದಾಗಿದೆ. ಇದೊಂಥರ ಪುಟ್ಟ ಲ್ಯಾಪ್‌ ಟಾಪ್‌ ಜೇಬಿನಲ್ಲಿದ್ದಂತೆಯೇ ಸೈ.

ಅತ್ಯುತ್ತಮ ಕ್ಯಾಮರಾ: ಅತ್ಯುತ್ತಮ ಟ್ರಿಪಲ್‌ ಲೆನ್ಸ್‌ ಕ್ಯಾಮರಾವನ್ನು ಈ ಫೋನ್‌ ಹೊಂದಿದೆ. 12 ಮೆ.ಪಿ. ಅಲ್ಟ್ರಾ ವೈಡ್‌ ಆಂಗಲ್‌ ಕ್ಯಾಮರಾ, 50 ಮೆ.ಪಿ. ವೈಡ್‌ ಆಂಗಲ್‌ ಕ್ಯಾಮರಾ ಹಾಗೂ 10 ಮೆ.ಪಿ. ಆಪ್ಟಿಕಲ್‌ ಜೂಮ್‌ ಟೆಲೆಫೋಟೋ ಕ್ಯಾಮರಾಗಳಿವೆ. ಸೆಲ್ಫಿಗಾಗಿ ಪರದೆಯ ಅಡಿಯಲ್ಲಿ 4 ಮೆ.ಪಿ. ಲೆನ್ಸ್‌ ಇದೆ. ಇದಲ್ಲದೇ ಕವರ್‌ ಪರದೆಯಲ್ಲಿ 10 ಮೆ.ಪಿ. ಸೆಲ್ಫಿ ಕ್ಯಾಮರಾ ಇದೆ. ಕವರ್‌ ಪರದೆಯ ಮೇಲಿರುವ 10 ಮೆ.ಪಿ. ಸೆಲ್ಫಿ ಕ್ಯಾಮರಾ ಚೆನ್ನಾಗಿದೆ. ಆದರೆ, ವಿಶೇಷವೆಂದರೆ ಈ ಎರಡೂ ಸೆಲ್ಫಿ ಕ್ಯಾಮರಾಗಳ ಅಗತ್ಯ ಬೀಳುವುದೇ ಇಲ್ಲ!.

ಹಿಂದಿನ ಮುಖ್ಯ ಕ್ಯಾಮರಾದಲ್ಲೇ ಉತ್ತಮ ಗುಣಮಟ್ಟದ ರೆಸ್ಯೂಲೇಷನ್‌ ಇರುವ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಇದರಲ್ಲಿದೆ! ಇದಕ್ಕಾಗಿ ಮಾಡಬೇಕಾದ್ದಿಷ್ಟು.  ಮಡಚಿರುವ ಫೋನಿನ ಕವರ್‌ ಪರದೆಯ ಮೇಲಿರುವ ಕ್ಯಾಮರಾವನ್ನು ಆನ್‌ ಮಾಡಿಕೊಳ್ಳಬೇಕು. ಬಳಿಕ ಅದರ ಟಾಪ್‌ ನಲ್ಲಿ ಸೆಲ್ಫೀ ಎಂದು ಬರೆಯಲಾಗಿರುವ ಆಯ್ಕೆ ಇದೆ ಅದನ್ನು ಒತ್ತಬೇಕು. ಆಗ ಟೇಕ್‌ ಸೆಲ್ಫೀಸ್‌ ವಿತ್‌ ದಿ ರಿಯರ್‌ ಕ್ಯಾಮರಾ ಎಂಬ ಸೂಚನೆ ಮೂಡುತ್ತದೆ. ಆಗ ಫೋನನ್ನು ಅನ್‌ ಫೋಲ್ಡ್‌ ಮಾಡಬೇಕು. ಆಗ ಮುಖ್ಯ ಕ್ಯಾಮರಾ ನಮ್ಮ ಕಡೆಗೆ ಇರುತ್ತದೆ. ಆಗ ಪರದೆ ನೋಡಿಕೊಂಡು ನಮಗೆ ಬೇಕಾದ ಕೋನದಲ್ಲಿ ಸೆಲ್ಫೀ ತೆಗೆದುಕೊಳ್ಳಬಹುದು. ಮುಖ್ಯ ಕ್ಯಾಮರಾ ಗುಣಮಟ್ಟದಲ್ಲೇ ಸೆಲ್ಫೀ ಕ್ಯಾಮರಾ ಚಿತ್ರಗಳ ಗುಣಮಟ್ಟ ಮೂಡಿಬರುವ ಅಪರೂಪದ ಫೋನ್‌ ಇದಾಗಿದೆ.

ಮುಖ್ಯ ಕ್ಯಾಮರಾ ಗುಣಮಟ್ಟ ಬಹಳ ಚೆನ್ನಾಗಿದೆ. ಒಂದು ಕ್ಯಾಮರಾದಲ್ಲಿ ತೆಗೆದಷ್ಟು ಉತ್ಕೃಷ್ಟ ಗುಣಮಟ್ಟದ ಫೋಟೋಗಳು ಬರುತ್ತವೆ. ವಿಡಿಯೋ ರೆಕಾರ್ಡಿಂಗ್‌ ಕೂಡ ಪ್ರೊಫೆಷನಲ್‌ ಗ್ರೇಡ್‌ನಲ್ಲಿದೆ.

ಬ್ಯಾಟರಿ: ಇದರಲ್ಲಿ 4400 ಎಂಎಎಚ್‌ ಬ್ಯಾಟರಿ ಇದೆ. ಚಾರ್ಜರ್‌ ನೀಡಿಲ್ಲ. 25 ವ್ಯಾಟ್ಸ್‌ ಚಾರ್ಜರ್‌ ಅನ್ನು ಪ್ರತ್ಯೇಕವಾಗಿ ಕೊಳ್ಳಬೇಕು. ಈಗಿನ ಬಹುತೇಕ ಕಂಪೆನಿಗಳು 80 ವ್ಯಾಟ್ಸ್‌, 120 ವ್ಯಾಟ್ಸ್‌ ನ ಸೂಪರ್‌ ಫಾಸ್ಟ್‌ ವೇಗದ ಚಾರ್ಜರ್‌ ಅನ್ನು ಬೆಂಬಲಿಸುವ ಮೊಬೈಲ್‌ ಗಳನ್ನು ಹೊರತರುತ್ತಿವೆ. 20 ನಿಮಿಷಗಳಲ್ಲಿ ಸೊನ್ನೆಯಿಂದ 100 ಪರ್ಸೆಂಟ್‌ವರೆಗೆ ಚಾರ್ಜ್‌ ಆಗುವ ಮೊಬೈಲ್‌ ಗಳು 50 ಸಾವಿರ ರೂ. ದರದಲ್ಲಿ ದೊರಕುತ್ತವೆ. ಈ ಮೊಬೈಲ್‌ ಶೂನ್ಯದಿಂದ ಶೇ. 100ರಷ್ಟು ಚಾರ್ಜ್‌ ಆಗಲು ಒಂದು ಗಂಟೆಗಳಿಗೂ ಅಧಿಕ ಕಾಲ ತೆಗೆದುಕೊಳ್ಳುತ್ತದೆ. 30 ನಿಮಿಷಗಳಲ್ಲಿ ಶೇ. 50ರಷ್ಟು ಚಾರ್ಜ್‌ ಆಗುತ್ತದೆ. ಇನ್ನುಳಿದ ಶೇ. 50ರಷ್ಟು ಚಾರ್ಜ್‌ ಆಗಲು 45  ನಿಮಿಷ ಬೇಕಾಗುತ್ತದೆ. ಸಮಾಧಾನದ ಸಂಗತಿ ಎಂದರೆ ಈ ಮೊಬೈಲ್‌ ನಲ್ಲಿ ಬ್ಯಾಟರಿ ಬಹುಬೇಗ ಖಾಲಿಯಾಗುವುದಿಲ್ಲ. ಶೇ. 100ರಷ್ಟು ಚಾರ್ಜ್‌ ಮಾಡಿದರೆ ಬೆಳಗ್ಗೆಯಿಂದ ಸಂಜೆಯವರೆಗೂ ಬಳಸಬಹುದು. ಇದು ವೈರ್‌ ಲೆಸ್‌ ಚಾರ್ಜರನ್ನು ಬೆಂಬಲಿಸುತ್ತದೆ. ಇದರಲ್ಲಿ ನೀವು ಸ್ಯಾಮ್‌ ಸಂಗ್‌ ನ 25 ವ್ಯಾಟ್ಸ್‌ ಚಾರ್ಜರ್‌ ಬಳಸಿದರೆ ಇಲ್ಲಿ ಹೇಳಿದ ವೇಗದಲ್ಲಿ ಚಾರ್ಜ್‌ ಆಗುತ್ತದೆ. ನನ್ನ ಬಳಿ 80 ವ್ಯಾಟ್ಸ್‌ ಚಾರ್ಜರ್‌ ಇದೆ ಎಂದು ಹಾಕಿದರೆ, 25 ವ್ಯಾಟ್ಸ್‌ ಚಾರ್ಜರಿಗಿಂತಲೂ ಕಡಿಮೆ ವೇಗದಲ್ಲಿ ಚಾರ್ಜ್‌ ಆಗುತ್ತದೆ!

ಒಟ್ಟಾರೆ ಫೋನಿನಲ್ಲಿ ಅನೇಕ ಅನುಕೂಲಕಾರಿ ಅಂಶಗಳಿವೆ. ಬೆಲೆ ದುಬಾರಿ ಅಷ್ಟೇ.!

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next