Advertisement

ಬಂದಿದೆ ನೋಡಿ ಹೊಸ ಮೊಬೈಲ್ ಸ್ಯಾಮ್ ‍ಸಂಗ್ ಗೆಲಾಕ್ಸಿ ಎಂ 53; ಹಿಡಿಯಲು ಹಗುರ, ಜೇಬಿಗೆ ಭಾರ!

09:37 AM Jun 17, 2022 | Team Udayavani |

ಸ್ಯಾಮ್‍ ಸಂಗ್‍ ಕಂಪೆನಿಯು ಎಂ ಸರಣಿಯಲ್ಲಿ ಮಧ್ಯಮ ದರ್ಜೆಯ ಮೊಬೈಲ್‍ ಫೋನ್‍ ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಈ ಎಂ ಸರಣಿಯ ಫೋನ್‍ ಗಳು ಸಾಮಾನ್ಯವಾಗಿ 12 ಸಾವಿರದಿಂದ 20 ಸಾವಿರ ರೂ. ದರಪಟ್ಟಿಯಲ್ಲಿ ಬರುತ್ತವೆ. ಈ ದರಪಟ್ಟಿಯ ಫೋನುಗಳಲ್ಲಿ ಸಾಮಾನ್ಯವಾಗಿ ಇರಬಹುದಾದ ತಾಂತ್ರಿಕ ಅಂಶಗಳನ್ನು ಒಳಗೊಂಡಿರುತ್ತವೆ. ಆದರೆ ಈ ಬಾರಿ ಸ್ಯಾಮ್‍ ಸಂಗ್‍ ಎಂ ಸರಣಿಯಲ್ಲಿ 20 ಸಾವಿರ ರೂ.ಗೂ ಮೇಲ್ಪಟ್ಟ ಫೋನೊಂದನ್ನು ಹೊರ ತಂದಿದೆ. ಅದುವೇ ಸ್ಯಾಮ್ ಸಂಗ್‍ ಗೆಲಾಕ್ಸಿ ಎಂ 53 5ಜಿ. ಇದು ಎಂ ಸರಣಿಯಲ್ಲಿದ್ದರೂ, ಅದರ ಫೀಚರ್ ಗಳು ಮತ್ತು ದರ ಗೆಲಾಕ್ಸಿಯ ಎ ಸರಣಿಯ ಫೋನ್‍ ಗಳಂತಿದೆ. ಈ ಫೋನಿನ ದರ 6 ಜಿಬಿ ರ್ಯಾಮ್‍ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 26,499 ರೂ. ಹಾಗೂ 8ಜಿಬಿ ರ್ಯಾಮ್‍ ಮತ್ತು 128 ಜಿಬಿ ಸಂಗ್ರಹ ಮಾದರಿಗೆ 28,499 ರೂ.

Advertisement

ವಿನ್ಯಾಸ: ಇದರ ವಿನ್ಯಾಸ ಎಂ ಸರಣಿಯ ಫೋನುಗಳಿಗಿಂತ ವಿಭಿನ್ನವಾಗಿದೆ. ಕೈಗೆತ್ತಿಕೊಂಡೊಡನೆ ತುಂಬಾ ತೆಳುವಾದ ಆಕಾರ ಗಮನಕ್ಕೆ ಬರುತ್ತದೆ. ಕೇವಲ 7.4 ಮಿ.ಮೀ. ಸ್ಲಿಮ್‍ ಆಗಿದೆ. 176 ಗ್ರಾಂ ತೂಕವಿದೆ. ಹಿಂಬದಿ ಪ್ಲಾಸ್ಟಿಕ್‍ ಕೇಸ್‍ ಇದ್ದರೂ, ಮೆಟಲ್‍ ಕೇಸ್‍ ಎನಿಸುವಂತೆ ವಿನ್ಯಾಸ ಮಾಡಲಾಗಿದೆ. ಹಿಂಬದಿಯ ಎಡ ಮೂಲೆಯಲ್ಲಿ ನಾಲ್ಕು ಲೆನ್ಸಿನ ಕ್ಯಾಮರಾ ಬಂಪ್‍ ಅನ್ನು ಚಚ್ಚೌಕವಾಗಿ ವಿನ್ಯಾಸಗೊಳಿಸಲಾಗಿದೆ.  ಬಲ ಬದಿಯ ಆನ್‍ ಅಂಡ್‍ ಆಫ್‍ ಬಟನ್‍ ನಲ್ಲೇ ಫಿಂಗರ್ ಪ್ರಿಂಟ್‍ ಸ್ಕ್ಯಾನರ್ ನೀಡಲಾಗಿದ. ಒಟ್ಟಾರೆ ಮೊಬೈಲ್‍ ನ ಹೊರ ವಿನ್ಯಾಸ ಗಮನ ಸೆಳೆಯುತ್ತದೆ.

ಪರದೆ: ಸ್ವಲ್ಪ ದೊಡ್ಡ ಪರದೆ ಇರುವ ಫೋನ್‍ ಬೇಕೆನ್ನುವರಿಗೆ ಇದು ಸೂಕ್ತವಾಗಿದೆ. 6.7 ಇಂಚಿನ ಡಿಸ್‍ ಪ್ಲೇ ಅನ್ನು ಇದು ಹೊಂದಿದೆ. 120 ಹರ್ಟ್ಜ್ ಸೂಪರ್ ಅಮೋಲೆಡ್‍ ಪರದೆ ಅಳವಡಿಸಲಾಗಿದೆ. ಎಫ್‍ಎಚ್‍ಡಿ ಪ್ಲಸ್‍ ರೆಸ್ಯೂಲೇಶನ್‍ ಹೊಂದಿದೆ.  ಪರದೆ ಸುಲಭಕ್ಕೆ ಗೀರುಗಳಾಗದಂತೆ ರಕ್ಷಿಸಲು  ಗೊರಿಲ್ಲಾ ಗ್ಲಾಸ್‍ 5 ಸಹ ನೀಡಲಾಗಿದೆ.  ಪರದೆಯ ಮೇಲ್ತುದಿಯ ಮಧ್ಯದಲ್ಲಿ ಮುಂಬದಿ ಕ್ಯಾಮರಾ ಪಂಚ್‍ ಹೋಲ್‍ ನೀಡಲಾಗಿದೆ. ಎಸ್‍ ಅಮೋಲೆಡ್‍ ಪರದೆಯ ವೀಕ್ಷಣೆ ಚೆನ್ನಾಗಿದೆ. ಚಿತ್ರ ಮತ್ತು ವಿಡಿಯೋಗಳು, ಇಂಟರ್ ಫೇಸ್‍ ತುಂಬಾ ಬ್ರೈಟ್‍ ಆಗಿ, ರಿಚ್‍ ಆಗಿ ಕಾಣುತ್ತವೆ.

ಪ್ರೊಸೆಸರ್, ಯೂಐ: ಇದರಲ್ಲಿ ಮಿಡಿಯಾಟೆಕ್‍ ಡೈಮೆನ್ಸಿಟಿ 900 (6 ಎನ್‍ಎಂ) ಪ್ರೊಸೆಸರ್ ಹಾಕಲಾಗಿದೆ. ಇದೊಂದು ಮೇಲ್ಮಧ್ಯಮ ದರ್ಜೆಯ 5ಜಿ ಪ್ರೊಸೆಸರ್. 12 ಬ್ಯಾಂಡ್‍ ಗಳ 5ಜಿ ನೆಟ್‍ ವರ್ಕ್ ಲಭ್ಯವಾಗುತ್ತದೆ. ಭಾರತದಲ್ಲಿ ಮುಂದಿನ ತಿಂಗಳು 5ಜಿ ತರಂಗಾಂತರ ಹರಾಜು ಎಂದು ಘೋಷಿಸಲಾಗಿದೆ. ಆದರೆ 5ಜಿ ಸೌಲಭ್ಯ ದೊಡ್ಡ ನಗರಗಳನ್ನು ದಾಟಿ, ಎಲ್ಲೆಡೆ ಸಂಪೂರ್ಣ ಅನುಷ್ಠಾನಕ್ಕೆ ಬರಲು ಕನಿಷ್ಟ 2 ವರ್ಷಗಳು ಬೇಕು. ಹಾಗಾಗಿ ಸದ್ಯಕ್ಕೆ 5ಜಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಫೋನಿನಿಲ್ಲಿ ಆಂಡ್ರಾಯ್ಡ್ 12 ಆವೃತ್ತಿ ಇದೆ. ಇದಕ್ಕೆ ಸ್ಯಾಮ್‍ ಸಂಗ್‍ನ ತವರಿನ ಒನ್‍ ಯೂಐ 4 ಇಂಟರ್ ಫೇಸ್‍ ಜೊತೆ ಇರುತ್ತದೆ. ಈ ಫೋನಿಗೆ 2 ವರ್ಷಗಳ ಸಾಫ್ಟ್ ವೇರ್ ಅಪ್‍ ಡೇಟ್ ಹಾಗೂ 4 ವರ್ಷಗಳ ಸೆಕ್ಯುರಿಟಿ ಅಪ್‍ ಡೇಟ್‍ ನೀಡುವುದಾಗಿ ಕಂಪೆನಿ ತಿಳಿಸಿದೆ.  ಫೋನಿನ ಕಾರ್ಯಾಚರಣೆ ವೇಗವಾಗಿದೆ. ಯಾವುದೇ ಅಡೆತಡೆ ತೋರಿಬರಲಿಲ್ಲ. ಫೋನು ಬಿಸಿಯಾಗದಂತೆ ವೇಪರ್ ಕೂಲಿಂಗ್‍ ಚೇಂಬರ್ ಸೌಲಭ್ಯ ಕಲ್ಪಿಸಲಾಗಿದೆ. ನಿಮಗೆ ಹೆಚ್ಚು ರ್ಯಾಮ್‍ ಬೇಕೆನಿಸಿದರೆ ಆಂತರಿಕ ಸಂಗ್ರಹದಿಂದ 16 ಜಿಬಿಯವರೆಗೂ ರ್ಯಾಮ್ ಅನ್ನು ಹೆಚ್ಚಿಸಿಕೊಳ್ಳಬಹುದು.

Advertisement

ಕ್ಯಾಮರಾ: ಇದರಲ್ಲಿ 108 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ಚೀನಾ ಕಂಪೆನಿಗಳ ಹೆಚ್ಚು ಮೆಗಾಪಿಕ್ಸಲ್‍ ಹಾಕಿ ಗ್ರಾಹಕರನ್ನು ಸೆಳೆಯುವ ತಂತ್ರಕ್ಕೆ ಸ್ಯಾಮ್‍ ಸಂಗ್‍ ಸಹ ಮೊರೆ ಹೋಗಿದೆ. ಹೆಚ್ಚು ಬೆಲೆಯ, ಫ್ಲಾಗ್‍ ಶಿಪ್‍ ಫೋನುಗಳಲ್ಲಿ ಕಡಿಮೆ ಮೆಗಾಪಿಕ್ಸಲ್‍ ಉಳ್ಳ ಕ್ಯಾಮರಾಗಳಿದ್ದರೆ, ಮಧ್ಯಮ ದರ್ಜೆಯ ಫೋನುಗಳಲ್ಲಿ ಹೆಚ್ಚು ಮೆಗಾಪಿಕ್ಸಲ್‍ ಫೋನುಗಳಿರುತ್ತವೆ! ಕ್ಯಾಮರಾದ ಲೆನ್ಸ್ ಗುಣಮಟ್ಟ ಫೋಟೋಗಳ ಗುಣಮಟ್ಟಕ್ಕೆ ಕಾರಣವಾಗುತ್ತದೆ ಎಂಬ ಅರಿವು ಸಾಮಾನ್ಯ ಗ್ರಾಹಕರಿಗಿಲ್ಲವಾದ್ದರಿಂದ ಹೆಚ್ಚು ನಂಬರಿನ ಮೆಗಾಪಿಕ್ಸಲ್‍ ಗಳನ್ನು ಹಾಕುವ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತದೆ. ಒಟ್ಟು ನಾಲ್ಕು ಲೆನ್ಸ್ ಗಳಿದ್ದು, 8 ಮೆಪಿ ಅಲ್ಟ್ರಾವೈಡ್‍, 2ಮೆಪಿ ಡೆಪ್ತ್, 2 ಮೆ.ಪಿ. ಮ್ಯಾಕ್ರೋ ಸೆನ್ಸರ್‍ ಒಳಗೊಂಡಿದೆ. ಮುಂಬದಿ ಕ್ಯಾಮರಾ 32 ಮೆ.ಪಿ. ಹೊಂದಿದೆ.

ಮೊದಲೇ ಹೇಳಿದಂತೆ ಮೆಗಾಪಿಕ್ಸಲ್‍ ಫೋಟೋದ ಗುಣಮಟ್ಟದ ನಿರ್ಣಾಯಕ ಅಲ್ಲ. ಇಷ್ಟು ಮೆ.ಪಿ ಇದ್ದರೂ ಫೋಟೋ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲ. 26 ಸಾವಿರ ರೂ.ಗೂ ಹೆಚ್ಚು ಬೆಲೆಯ ಒಂದು ಫೋನಿನಲ್ಲಿ ಬಯಸುವಷ್ಟು ಉತ್ತಮ ಕ್ಯಾಮರಾ ಇದರಲ್ಲಿಲ್ಲ. ತುಂಬಾ ಸ್ಪಷ್ಟ ಗುಣಮಟ್ಟದ ಫೊಟೋ ನಿರೀಕ್ಷಿಸುವಂತಿಲ್ಲ. ವೈಡ್‍ ಆಂಗಲ್‍ ಚಿತ್ರಗಳ ಗುಣಮಟ್ಟ ಅಷ್ಟೊಂದು ಚನ್ನಾಗಿ ಬರಲಿಲ್ಲ. 32 ಮೆ.ಪಿ. ಉಳ್ಳ ಸೆಲ್ಫೀ ಕ್ಯಾಮರಾ ಗುಣಮಟ್ಟ ಪರವಾಗಿಲ್ಲ. ಫೋಟೋ ತೆಗೆದ ಮೇಲೆ ಫೋಟೋದಲ್ಲಿರುವ ಬೇಡದ ಅಂಶಗಳನ್ನು ಅಳಿಸಿ ಹಾಕುವ ಸವಲತ್ತನ್ನು (ಆಬ್ಜೆಕ್ಟ್ ಎರೇಸರ್) ನೀಡಲಾಗಿದೆ. ವಿಡಿಯೋ ಕಾಲ್ ಮಾಡುವಾಗ ಹಿನ್ನೆಲೆ ಮಸುಕುಗೊಳಿಸುವ (ಬ್ಯಾಕ್‍ ಗ್ರೌಂಡ್‍ ಬ್ಲರ್) ಅಂಶವನ್ನೂ ನೀಡಲಾಗಿದೆ.

ಬ್ಯಾಟರಿ: 5000 ಎಂಎಎಚ್‍ ಬ್ಯಾಟರಿ ನೀಡಲಾಗಿದೆ. 25 ವ್ಯಾಟ್ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಬ್ಯಾಟರಿ ಸಾಧಾರಣ ಬಳಕೆಗೆ ಒಂದರಿಂದ ಒಂದೂವರೆ ದಿನ ಬರುತ್ತದೆ. ಸ್ಯಾಮ್ ‍ಸಂಗ್ ಈಗ ತನ್ನ ಮೊಬೈಲ್‍ ಗಳ ಜೊತೆ ಚಾರ್ಜರ್ ನೀಡುತ್ತಿಲ್ಲ ಎಂಬುದು ನೆನಪಿರಲಿ. ಡಾಟಾ ಕೇಬಲ್‍ ನೀಡಲಾಗುತ್ತದೆ. ಚಾರ್ಜರ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕು. ಏನಿಲ್ಲವೆಂದರೂ 25 ವ್ಯಾಟ್‍ ಚಾರ್ಜರ್ ಗೆ 700 ರೂ. ಗಳಿಂದ 1000 ರೂ.ಗಳವರೆಗೂ ಹೆಚ್ಚುವರಿ ಹೊರೆ ಗ್ರಾಹಕನ ಮೇಲೆ.

ಇದನ್ನೂ ಓದಿ:ಈ ಬಾರಿ ಭಕ್ತರು ಅಮರನಾಥ ಯಾತ್ರೆಯನ್ನು ಒಂದೇ ದಿನದಲ್ಲಿ ಮುಗಿಸಬಹುದು : ಹೇಗೆ ಗೊತ್ತೇ?

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ53 5ಜಿ ನೋಡಲು ಸುಂದರವಾದ, ಸ್ಲಿಮ್‍ ಆದ, ಉತ್ತಮ ಪರದೆ, ಬ್ಯಾಟರಿ ಉಳ್ಳ ಫೋನು. ಇದರ ದರ 20 ಸಾವಿರದೊಳಗೆ ಇದ್ದರೆ ಆ ಹಣಕ್ಕೆ ಇದು ವ್ಯಾಲ್ಯೂ ಫಾರ್ ಮನಿ ಫೋನು. ಆದರೆ 26500 ರೂ. ಬೆಲೆಗೆ ಇದರಲ್ಲಿರುವ ವಿಶೇಷಣಗಳು ಕಡಿಮೆ ಎಂದೇ ಹೇಳಬೇಕು. ಜೊತೆಗೆ ಚಾರ್ಜರ್ ಗೆ ಪ್ರತ್ಯೇಕ ಹಣ ನೀಡಬೇಕು.

ಹೆಚ್ಚು ವೇಗದ ಬ್ಯಾಟರಿ ಚಾರ್ಜರ್ ಇಲ್ಲ. ಈಗ ಹಲವು ಕಂಪೆನಿಗಳು 25 ಸಾವಿರದಿಂದ 30 ಸಾವಿರದ ರೇಂಜಿನಲ್ಲಿ ಅತ್ಯಂತ ವೇಗದ ಚಾರ್ಜರ್ ಗಳನ್ನು ನೀಡುತ್ತಿವೆ. 33 ವ್ಯಾಟ್ಸ್, 45 ವ್ಯಾಟ್ಸ್ ಚಾರ್ಜರ್‍ ಇವೆ. ಜೊತೆಗೆ ಚಾರ್ಜರ್ ಸಹ ನೀಡುತ್ತಿವೆ. ಸ್ಯಾಮ್‍ ಸಂಗ್ ‍ಇದನ್ನು ಮನಗಾಣಬೇಕಿದೆ.

-ಕೆ.ಎಸ್‍. ಬನಶಂಕರ ಆರಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next