Advertisement

ಹೊಸ ಸ್ಯಾಮ್‍ ಸಂಗ್‍ ಗೆಲಾಕ್ಸಿ ಎ73 ಮೊಬೈಲ್: ಏನೇನಿದೆ ಇದರಲ್ಲಿ?

05:13 PM Apr 29, 2022 | Team Udayavani |

ಸ್ಯಾಮ್‍ ಸಂಗ್‍ ಕಂಪೆನಿ ಇತ್ತೀಚಿಗೆ ಒಂದಾದ ಮೇಲೊಂದರಂತೆ ಮೊಬೈಲ್‍ ಫೋನ್‍ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚಿಗೆ ಅದು ಎ ಸರಣಿಯಲ್ಲಿ ಒಟ್ಟಿಗೆ ಐದು ಮೊಬೈಲ್‍ ಫೋನ್‍ ಗಳನ್ನು ಬಿಡುಗಡೆ ಮಾಡಿತ್ತು. ಈ ಐದು ಮೊಬೈಲ್‍ಗಳಲ್ಲಿ ಹಿರಿದಾದದ್ದು ಸ್ಯಾಮ್‍ ಸಂಗ್‍ ಗೆಲಾಕ್ಸಿ ಎ73. ಎ ಸರಣಿ ಎಂದರೆ ಮಧ್ಯಮ ವರ್ಗದ ಮೊಬೈಲ್‍ ಗಿಂತ ಮೇಲಿನ ಹಂತದ, ಪ್ರೀಮಿಯಂ ಆಗಿರುವ ಸರಣಿ.

Advertisement

ಈ ಸ್ಯಾಮ್‍ ಸಂಗ್‍ ಗೆಲಾಕ್ಸಿ ಎ73 ಮೊಬೈಲ್‍ನ ವಿಶೇಷಗಳೇನು? ಇದರಲ್ಲಿರುವ ಪ್ರೊಸೆಸರ್‍ ಯಾವುದು? ಇದರ ಕಾರ್ಯಾಚರಣೆ ಹೇಗಿದೆ? ಕ್ಯಾಮರಾದ ತಾಂತ್ರಿಕ ಅಂಶಗಳೇನು? ಇತ್ಯಾದಿಗಳ ವಿವರಣೆ ಇಲ್ಲಿದೆ.

ಈ ಮೊಬೈಲ್‍ ಬೆಲೆ 256 ಜಿಬಿ ಆಂತರಿಕ ಸಂಗ್ರಹ ಹಾಗೂ 8 ಜಿಬಿ ರ್ಯಾಮ್‍ ಗೆ 44,999 ರೂ. ಹಾಗೂ 128 ಜಿಬಿ ಆಂತರಿಕ ಸಂಗ್ರಹ ಮತ್ತು 8 ಜಿಬಿ ರ್ಯಾಮ್‍ ಗೆ 41,999 ರೂ. ಇದೆ.

ವಿನ್ಯಾಸ: ಇದರ ವಿನ್ಯಾಸ ಪ್ರೀಮಿಯಂ ಫೋನ್‍ ಗಳ ಮಾದರಿಯಲ್ಲಿದೆ. ಲೋಹದ ಕಟ್ಟು ಹೊಂದಿದ್ದು, ಹಿಂಬದಿಯ ಕವಚ ಪ್ಲಾಸ್ಟಿಕ್‍ ಆಗಿದೆ. ಪರದೆ ಮಧ್ಯದಲ್ಲಿ ಪಂಚ್‍ ಹೋಲ್‍ ಕ್ಯಾಮರಾ ಇದ್ದು, ಪರದೆ ಹೆಚ್ಚು ಆವರಿಸಿ, ಸಣ್ಣ ಗೆರೆ ಎಳೆದಂತೆ ಪರದೆಯ ಅಂಚು (ಬೆಜೆಲ್ಸ್) ಗಳಿವೆ. ಐಪಿ 67 ರೇಟಿಂಗ್‍ ಇದ್ದು, ಇದು ನೀರು ಮತ್ತು ಧೂಳು ನಿರೋಧಕವಾಗಿದೆ. ಒಂದು ಮೀಟರ್ ಆಳದ ನೀರಿನಲ್ಲಿ 30 ನಿಮಿಷ ಬಿದ್ದರೂ ನೀರು ಒಳ ಸೇರುವುದಿಲ್ಲ ಎಂದು ಕಂಪೆನಿ ಭರವಸೆ ನೀಡಿದೆ. ಪರದೆಯ ರಕ್ಷಣೆಗೆ ಗೊರಿಲ್ಲಾ ಗಾಜು 5 ರ ರಕ್ಷಣೆ ಇದೆ.

Advertisement

ಈ ಮೊಬೈಲ್‍ ಅನ್ನು ಕೈಯಲ್ಲಿ ಹಿಡಿದಾಗ ಬಹಳ ಹಗುರ ಎನಿಸುತ್ತದೆ. 181 ಗ್ರಾಂ ತೂಕವಿದೆ. 7.6 ಮಿಲಿಮೀಟರ್ ನಷ್ಟು ಮಂದವಿದೆ. ಮೊಬೈಲಿನ ಮೂಲೆಗಳು ಹೆಚ್ಚು ಕರ್ವ್ ಆಗಿಲ್ಲ. ಹಾಗಾಗಿ ನೋಡಲು ಆಕರ್ಷಕ ಎನಿಸುತ್ತದೆ. ಮೊಬೈಲಿನ ಹಿಂಬದಿಯ ಎಡಮೂಲೆಯಲ್ಲಿ ನಾಲ್ಕು ಲೆನ್ಸಿನ ಕ್ಯಾಮರಾವನ್ನು ಅಳವಡಿಸಲಾಗಿದೆ. ಇದರಲ್ಲಿ ಮೂರು ಲೆನ್ಸ್ ಗಳನ್ನು ದೊಡ್ಡದಾಗಿ, ಇನ್ನೊಂದು  ಮ್ಯಾಕ್ರೋ ಲೆನ್ಸ್ ಮತ್ತು ಫ್ಲಾಷ್‍ ಅನ್ನು ಪಕ್ಕದಲ್ಲಿ ಸಣ್ಣದಾಗಿ ವಿನ್ಯಾಸ ಮಾಡಲಾಗಿದೆ. ಕ್ಯಾಮರಾ ಹೆಚ್ಚು ಉಬ್ಬು ಬರದಂತೆ ಡಿಸೈನ್‍ ಮಾಡಲಾಗಿದೆ.  ಬಲಭಾಗದಲ್ಲಿ ಯಾವುದೇ ಬಟನ್‍ ಇಲ್ಲ. ಎಡಭಾಗದಲ್ಲಿ ಧ್ವನಿ ಹೆಚ್ಚಳ ಕಡಿಮೆ ಮಾಡುವ ಬಟನ್‍ ಹಾಗೂ ಆನ್‍ ಆಫ್‍ ಬಟನ್‍ ಇದೆ. ಕೆಳಭಾಗದಲ್ಲಿ  ಬ್ಯಾಟರಿ ಚಾರ್ಜ್‍ ಮಾಡುವ ಯುಎಸ್‍ಬಿ ಟೈಪ್‍ ಸಿ ಪೋರ್ಟ್‍ ಇದೆ.

ಇದನ್ನೂ ಓದಿ:ಭಾರತ ಸದೃಢ ಆರ್ಥಿಕ ಬೆಳವಣಿಗೆಯತ್ತ ಸಾಗುತ್ತಿದೆ: ಸೆಮಿಕಾನ್ ಇಂಡಿಯಾ ಮೇಳದಲ್ಲಿ ಪ್ರಧಾನಿ ಮೋದಿ

ಪರದೆ: ಗೆಲಾಕ್ಸಿ ಎ 73 ಮೊಬೈಲು,  6.7 ಇಂಚಿನ ಎಫ್‍ಎಚ್‍ಡಿ ಪ್ಲಸ್‍ ಅಮೋಲೆಡ್‍  ಪ್ಲಸ್‍ ಪರದೆ  ಹೊಂದಿದೆ. ಪರದೆಯು 120 ರಿಫ್ರೆಶ್‍ ರೇಟ್‍ ಹೊಂದಿದೆ. ಪರದೆಯ ಗುಣಮಟ್ಟ ಚೆನ್ನಾಗಿದ್ದು, ಚಿತ್ರಗಳು ವಿಡಿಯೋಗಳು ರಿಚ್‍ ಆಗಿ ಕಾಣುತ್ತವೆ. 120 ರಿಫ್ರೆಶ್‍ರೇಟ್‍ ಕಾರಣದಿಂದ ಪರದೆಯನ್ನು ಸ್ಕ್ರೋಲ್‍ ಮಾಡಿದಾಗ, ಅಡೆತಡೆಯಿಲ್ಲದೇ ಸುರಳೀತವಾಗಿ ಚಲಿಸುತ್ತದೆ. ಸ್ಯಾಮ್‍ ಸಂಗ್‍ನ ಅಮೋಲೆಡ್‍ ಪರದೆಯ ಗುಣಮಟ್ಟದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ.

ಉತ್ತಮ ಕ್ಯಾಮರಾ: ಈ ಮೊಬೈಲು 108 ಮೆ.ಪಿ. ಹಿಂಬದಿ ಕ್ಯಾಮರಾ ಹಾಗೂ 32 ಮೆ.ಪಿ. ಮುಂಬದಿ ಕ್ಯಾಮರಾ ಹೊಂದಿದೆ. ಹಿಂಬದಿ ಕ್ಯಾಮರಾ ಒಟ್ಟು ನಾಲ್ಕು ಲೆನ್ಸ್ ಒಳಗೊಂಡಿದೆ. 108 ಮೆ.ಪಿ. ಮುಖ್ಯ ಕ್ಯಾಮರಾ, 12 ಮೆಪಿ ಅಲ್ಟ್ರಾ ವೈಡ್‍, 5 ಮೆ.ಪಿ. ಡೆಪ್ತ್, 5 ಮೆ.ಪಿ. ಮ್ಯಾಕ್ರೋ ಕ್ಯಾಮರಾ ಇದೆ.  ಮುಂಬದಿ ಕ್ಯಾಮರಾ 32 ಮೆ.ಪಿ.ಇದೆ.

ಕೆಲವು ಕಂಪೆನಿಗಳು 108 ಮೆಗಾಪಿಕ್ಸಲ್‍ ಕ್ಯಾಮರಾ ನೀಡುತ್ತಿರುವುದರಿಂದ ಕೆಲವು ಗ್ರಾಹಕರು ಇಂಥ ಅಂಕಿಗಳಿಗೆ ಮಾರು ಹೋಗುವುದರಿಂದ ಸ್ಯಾಮ್‍ ಸಂಗ್‍ ಕೂಡ ಈಗ 108 ಮೆಗಾಪಿಕ್ಸಲ್‍ ನ ಅಂಕಿಗೆ ಮೊರೆ ಹೋಗಿದೆ! ವಾಸ್ತವವಾಗಿ ಸ್ಯಾಮ್‍ ಸಂಗ್‍ ನಲ್ಲಿ  ಕಡಿಮೆ ಮೆಗಾಪಿಕ್ಸಲ್‍ ನಮೂದಿಸಿರುವ ಕ್ಯಾಮರಾಗಳೂ ಚೆನ್ನಾಗಿಯೇ ಇದ್ದವು!

ಕ್ಯಾಮರಾದಲ್ಲಿ ಮೂಡಿಬಂದ ಫೋಟೋಗಳ ಗುಣಮಟ್ಟ, ಫ್ಲಾಗ್‍ಶಿಪ್‍ ಮೊಬೈಲ್‍ ಗಳ ಫೋಟೋಗಳ ಗುಣಮಟ್ಟಕ್ಕೆ ಸನಿಹವಾಗಿದೆ. ಚಿತ್ರಗಳ ಡೀಟೇಲ್‍ ದಟ್ಟವಾಗಿದೆ. ಹೊರಾಂಗಣದಲ್ಲಿ ತೆಗೆದ ಚಿತ್ರಗಳು ಮಾತ್ರವಲ್ಲ, ಒಳಾಂಗಣದಲ್ಲಿ ತೆಗೆದ ಚಿತ್ರಗಳ ಡೀಟೇಲಿಂಗ್‍ ಚೆನ್ನಾಗಿದೆ

ಇನ್ನು ಸೆಲ್ಫೀ ಕ್ಯಾಮರಾ ಬಗ್ಗೆ ಹೇಳುವುದಾದರೆ ಹೆಚ್ಚು ಕ್ಲಿಯರ್ ಆದ, ಹಿಂಬದಿಯ ಕ್ಯಾಮರಾದಷ್ಟೇ ಸಶಕ್ತವಾದ ಇಮೇಜ್‍ ಗಳನ್ನ ನೀಡಿತು. ನಿಜಕ್ಕೂ ಸೆಲ್ಫೀ ಕ್ಯಾಮರಾದ ಗುಣಮಟ್ಟ ಉತ್ತಮವಾಗಿದೆ. ಕೆಲವು ಮೊಬೈಲ್‍ ಗಳಲ್ಲಿ ಹಿಂಬದಿಗೆ ಒಳ್ಳೆ ಕ್ಯಾಮರಾ ಕೊಟ್ಟು, ಸೆಲ್ಫೀಗೆ ಅಂತಹ ಆದ್ಯತೆ ನೀಡಿರುವುದಿಲ್ಲ. ಆದರೆ ಇದರಲ್ಲಿ ಸೆಲ್ಫಿ ಕ್ಯಾಮರಾ ಕೂಡ ಚೆನ್ನಾಗಿದೆ. (ಕೆಲವು ಮೊಬೈಲ್ ಗಳಲ್ಲಿ ಮುಖ ನುಣ್ಣಗೆ ಕಾಣುವಂತೆ ಮಾಡಿರುತ್ತಾರೆ. ಆದರೆ ಚಿತ್ರಗಳ ಗುಣಮಟ್ಟ ಇರುವುದಿಲ್ಲ. ಇದು ಹಾಗಲ್ಲ!)

ವಿಡಿಯೋ ಗೆ ಆಪ್ಟಿಕಲ್‍ ಇಮೇಜ್‍ ಸ್ಟೆಬಿಲೈಸೇಷನ್‍ ಇದೆ. ಹೀಗಾಗಿ ವಿಡಿಯೋಗಳು ಹೆಚ್ಚು ಅಲುಗಾಟ ತೋರದೇ ಸ್ಟಡಿಯಾಗಿ ಮೂಡಿಬರುತ್ತವೆ. ಎಚ್‍ಡಿಆರ್ ವಿಡಿಯೋ ಸೌಲಭ್ಯ ಸಹ ಒಳಗೊಂಡಿದೆ.

ಕಾರ್ಯಾಚರಣೆ: ಇದರಲ್ಲಿ ಸ್ನಾಪ್‍ಡ್ರಾಗನ್‍ 778ಜಿ ಪ್ರೊಸೆಸರ್ ಹಾಕಲಾಗಿದೆ. 8ಜಿಬಿ+ 128ಜಿಬಿ ಮತ್ತು 8ಜಿಬಿ+256ಜಿಬಿ ಆವೃತ್ತಿಗಳನ್ನು ಹೊಂದಿದೆ. ಇದರ ರ್ಯಾಮ್‍ ಅನ್ನು 16 ಜಿಬಿಯವರೆಗೂ ವಿಸ್ತರಿಸುವ ಸೌಲಭ್ಯ ನೀಡಲಾಗಿದೆ.  778 ಪ್ರೊಸೆಸರ್ ಮೇಲ್ಮಧ್ಯಮ ದರ್ಜೆಯ ಮೊಬೈಲ್‍ಗಳಲ್ಲಿ ಅಳವಡಿಸಲಾಗುವ 5 ಜಿ ಸೌಲಭ್ಯ ಉಳ್ಳ ಪ್ರೊಸೆಸರ್. ವೇಗವಾಗಿ ಕಾರ್ಯಾಚರಿಸುತ್ತದೆ. ಸ್ಯಾಮ್‍ ಸಂಗ್‍ ತನ್ನದೇ ಆದ ಎಕ್ಸಿನಾಸ್‍ ನೀಡದೇ ಸ್ನಾಪ್ ಡ್ರಾಗನ್‍ ಪ್ರೊಸೆಸರ್ ನೀಡಿರುವುದು, ಈ ಮೊಬೈಲ್‍ನ ಪ್ಲಸ್‍ ಪಾಯಿಂಟ್‍ ಗಳಲ್ಲೊಂದು!

ಆಂಡ್ರಾಯ್ಡ್ 12 ಓಎಸ್‍ ಇದ್ದು, ಇದಕ್ಕೆ ಸ್ಯಾಮ್‍ ಸಂಗ್‍ ನ ಒನ್‍ ಯೂಐ ಮರ್ಜ್‍ ಮಾಡಲಾಗಿದೆ.  ಹೀಗಾಗಿ ಆಂಡ್ರಾಯ್ಡ್ ನಲ್ಲಿರುವ ಸವಲತ್ತುಗಳ ಜೊತೆಗೆ, ಸ್ಯಾಮ್‍ ಸಂಗ್‍ ನಲ್ಲಿ ದೊರಕುವ ಕೆಲವು ವೈಶಿಷ್ಟ್ಯಗಳು ದೊರಕುತ್ತವೆ.

ಬ್ಯಾಟರಿ: ಇದರಲ್ಲಿ 5000 ಎಂಎಎಚ್‍ ಬ್ಯಾಟರಿ ಇದೆ. ಇದಕ್ಕೆ 25 ವ್ಯಾಟ್ಸ್ ವೇಗದ ಚಾರ್ಜಿಂಗ್‍ ಸೌಲಭ್ಯ ನೀಡಲಾಗಿದೆ. ಆದರೆ, ಆದರೆ.. ಮೊಬೈಲ್‍ ಜೊತೆಗೆ ಚಾರ್ಜರ್ ನೀಡಿಲ್ಲ! ಗಮನದಲ್ಲಿರಲಿ, ಇತ್ತೀಚಿಗೆ ಬಿಡುಗಡೆ ಮಾಡುತ್ತಿರುವ ಮೊಬೈಲ್‍ ಗಳಲ್ಲಿ ಸ್ಯಾಮ್‍ ಸಂಗ್‍ ಚಾರ್ಜರ್ ಗಳನ್ನು ನೀಡುತ್ತಿಲ್ಲ! ಗ್ರಾಹಕರು ಪ್ರತ್ಯೇಕವಾಗಿ ಚಾರ್ಜರ್ ಖರೀದಿಸಬೇಕು.

ಒಟ್ಟಾರೆಯಾಗಿ ಮೊಬೈಲ್‍ನ ಗುಣಮಟ್ಟವೇನೋ ಚೆನ್ನಾಗಿದೆ. ಆದರೆ  ದರ ಸ್ವಲ್ಪ ದುಬಾರಿ ಅನಿಸುತ್ತದೆ.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next