Advertisement

ಸ್ಯಾಮ್‍ ಸಂಗ್‍ ಗೆಲಾಕ್ಸಿ 5 ಸ್ಮಾರ್ಟ್ ವಾಚ್‍: ಏನಿದರ ವಿಶೇಷ?

07:34 PM Nov 11, 2022 | Team Udayavani |

ಸ್ಯಾಮ್‍ ಸಂಗ್‍ ಇತ್ತೀಚಿಗೆ ಹೊರ ತಂದಿರುವ ಎರಡು ಸ್ಮಾರ್ಟ್ ವಾಚ್ ಗಳು ಗೆಲಾಕ್ಸಿ ವಾಚ್‍ 5 ಪ್ರೊ ಮತ್ತು ಗೆಲಾಕ್ಸಿ ವಾಚ್‍ 5. ಇವೆರಡರ ಪೈಕಿ ದೊಡ್ಡಣ್ಣ ಗೆಲಾಕ್ಸಿ ವಾಚ್‍ 5 ಪ್ರೊ. ಆದರೆ ಇದಕ್ಕೆ ಕಮ್ಮಿಯಿಲ್ಲದಂತೆ ಗೆಲಾಕ್ಸಿ ವಾಚ್‍ 5 ಕೂಡ ಗಮನ ಸೆಳೆಯುತ್ತದೆ. ಪ್ರೊ 45000 ದಿಂದ 50000 ರೂ. ದರ ಪಟ್ಟಿಯನ್ನು ಹೊಂದಿದ್ದರೆ, ಅದರ ತಮ್ಮ ಎನ್ನಬಹುದಾದ ವಾಚ್‍ 5 ರೂ. 31000 ರೂ. ನಿಂದ 36000 ರೂ. ದರ ಪಟ್ಟಿ ಹೊಂದಿದೆ. ಗೆಲಾಕ್ಸಿ ವಾಚ್‍ 5ನ ಗುಣ ಲಕ್ಷಣಗಳು ಇಂತಿವೆ.

Advertisement

ವಿನ್ಯಾಸ
ಗೆಲಾಕ್ಸಿ ವಾಚ್‍ 5 ಎರಡು ಅಳತೆಗಳಲ್ಲಿ ಬರುತ್ತದೆ. 44 ಮಿ.ಮೀ. ಮತ್ತು 40 ಮಿ.ಮೀ. ಪ್ರೊ ಗಿಂತ ಕಡಿಮೆ ವೆಚ್ಚದ ಗೆಲಾಕ್ಸಿ ವಾಚ್ 5 ತನ್ನ ವೈಶಿಷ್ಟ್ಯದಲ್ಲಿ ಕಡಿಮೆಯೇನಿಲ್ಲ. ಪ್ರೊಗಿಂತ ಹಗುರ, ಹೆಚ್ಚು ಆರಾಮದಾಯಕ ವಿನ್ಯಾಸ ಮತ್ತು ಸರಳವಾದ ಇಂಟರ್ಫೇಸ್ ಗಮನ ಸೆಳೆಯುತ್ತದೆ.
ಗ್ಯಾಲಕ್ಸಿ ವಾಚ್ 5 ಪ್ರೊ ವಾಚು, ಟೈಟಾನಿಯಂ ಲೋಹ ಹೊಂದಿದ್ದರೆ, ವಾಚ್‍ 5, ಆರ್ಮರ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ವಾಚಿನ ಡಿಸ್‍ ಪ್ಲೇ ಸ್ಯಾಫೈರ್ ಕ್ರಿಸ್ಟಲ್‍ ಗಾಜಿನದ್ದಾಗಿದೆ. 44 ಮಿ.ಮೀ. ಅಳತೆಯ ವಾಚು 33.5 ಗ್ರಾಂ ತೂಕ ಹೊಂದಿದೆ. 40 ಮಿ.ಮೀ. ಅಳತೆಯದು 28.7 ಗ್ರಾಂ ತೂಕ ಹೊಂದಿದೆ.50 ಮೀಟರ್‍ ಆಳದ ನೀರು ನಿರೋಧಕ ಸಾಮರ್ಥ್ಯ (ಐಪಿ 68) ಹೊಂದಿದೆ.

ಪರದೆ
Galaxy Watch 5 Pro ಗೆ ಸಮಾನವಾಗಿ, Galaxy Watch 5 ಸ್ಯಾಫೈರ್ ಗ್ಲಾಸ್‍ ಡಿಸ್‍ ಪ್ಲೇ ಸೂಕ್ಷ್ಮ ಗೀರುಗಳನ್ನು ತಡೆಯುತ್ತದೆ. 1.4 ಇಂಚಿನ ಸೂಪರ್‍ ಅಮೋಲೆಸ್‍ ಪರದೆ, 450*450 ಪಿಕ್ಸಲ್‍ ಹೊಂದಿದೆ. ಸ್ಮಾರ್ಟ್‍ ವಾಚ್‍ ಗಳಲ್ಲಿ ಚಚ್ಚೌಕ ಹಾಗೂ ದುಂಡಗಿನ ಎರಡು ವಿಧದ ಪರದೆಗಳಿವೆ. ಕೆಲವರಿಗೆ ಚೌಕಾಕಾರ ಇಷ್ಟವಾದರೆ, ಕೆಲವರಿಗೆ ದುಂಡಾಕಾರದ ವಾಚ್‍ ಇಷ್ಟವಾಗುತ್ತದೆ. ಈ ವಾಚ್‍ ದುಂಡಾಕಾರವಾಗಿದೆ.
ಇದು 1000 NITS ನ ಗರಿಷ್ಠ ಬ್ರೈಟ್ ನೆಸ್‍ ಹೊಂದಿರುವ ಪರದೆ ಹೊಂದಿದೆ. ಇದು ಬಿರು ಬಿಸಿಲಲ್ಲಿ ಹಿಡಿದರೂ ಸ್ಪಷ್ಟವಾಗಿ ಕಾಣುತ್ತದೆ. ಒಟ್ಟಾರೆಯಾಗಿ, ಗ್ಯಾಲಕ್ಸಿ ವಾಚ್ 5 ರ ವಿನ್ಯಾಸ ಸುಂದರವಾಗಿದೆ. ಅತ್ಯುತ್ತಮ ಟಚ್‍ ಬಟನ್‌ಗಳು, ಆರಾಮದಾಯಕ ಬ್ಯಾಂಡ್‍ ಮತ್ತು ಹಗುರವಾದ ತೂಕ ಹೊಂದಿದೆ.

ಪ್ರೊಸೆಸರ್ ಮತ್ತು ಓಎಸ್‍
ವಾಚ್‍ 5 ಪ್ರೊ ನಂತೆಯೇ ಇದರಲ್ಲು ಸಹ ಎಕ್ಸಿನಾಸ್‍ ಡಬ್ಲೂ 920 ಪ್ರೊಸೆಸರ್‍ ಇದೆ. ಇದು ಗೂಗಲ್‍ನ ವಿಯರ್‍ ಓಎಸ್‍ ಕಾರ್ಯಾಚರಣೆ ಹೊಂದಿದ್ದು, ಸ್ಯಾಮ್‍ಸಂಗ್‍ ಒನ್‍ ಯೂಐ ಜೊತೆಗಿದೆ. ಇದರಲ್ಲಿ ಗೂಗಲ್‍ ಪ್ಲೇ ಸ್ಟೋರ್‍ ಇದೆ. ಗೂಗಲ್‍ ಮ್ಯಾಪ್‍ ಸೇರಿದಂತೆ ಇನ್ನಿತರ ಗೂಗಲ್‍ ಆಪ್‍ಗಳನ್ನು ಇನ್‍ ಸ್ಟಾಲ್ ಮಾಡಿಕೊಳ್ಳಬಹುದು. ಸ್ಯಾಮ್‍ ಸಂಗ್‍ ಫೋನಿನಲ್ಲಿ ನೋಡುವ ಬಹುತೇಕ ಆಂಡ್ರಾಯ್ಡ್ ಆಪ್‍ಗಳು ಮೊದಲೇ ಇನ್ ಸ್ಟಾಲ್‍ ಆಗಿವೆ. ತುಂಬಾ ಮೃದುವಾಗಿ ಕಾರ್ಯಾಚರಿಸುತ್ತದೆ.

ಕಾರ್ಯಾಚರಣೆ
ಈ ವಾಚ್‍ ಹಲವಾರು ಮಾಪನಗಳನ್ನು ಮಾಡುವ ಹಲವಾರು ಸಂವೇದಕಗಳನ್ನು ಹೊಂದಿದೆ. ಆದರೆ ಇಸಿಜಿ ಮತ್ತು ದೇಹದ ಉಷ್ಣತೆಯ ಟ್ರ್ಯಾಕಿಂಗ್‌ನಂತಹ ವಿಷಯಗಳನ್ನು ಸಕ್ರಿಯಗೊಳಿಸುವ ಅಪ್ ಡೇಟ್‍ ಇನ್ನೂ ದೊರೆತಿಲ್ಲ.ಇದನ್ನು ಹೊರತುಪಡಿಸಿದರೂ, ಸಾಮಾನ್ಯ ವೈಶಿಷ್ಟ್ಯಗಳಾದ, ವ್ಯಾಯಾಮ, ನಡಿಗೆಯ ಮಾಪನ, ಬಾಡಿ ಕಂಪೋಸಿಷನ್‍ ಇವೆಲ್ಲ ನಿಖರವಾಗಿವೆ. ಈ ವಾಚಿನ ಮಾಪನಗಳು ಕ್ರೀಡಾಪಟುಗಳು, ಓಟಗಾರರು ಬಳಸುವ ಫಿಟ್‍ ನೆಸ್‍ ವಾಚ್‍ಗಳಷ್ಟೇ ನಿಖರವಾಗಿವೆ.

Advertisement

ವ್ಯಾಯಾಮ, ಓಟ, ನಿದ್ರೆ, ಇತ್ಯಾದಿಗಳ ಪ್ರಮಾಣ ಅಳೆಯುವ ಸಲುವಾಗಿ. ಇದರಲ್ಲಿ ನಡಿಗೆ, ಓಟ, ಸೈಕ್ಲಿಂಗ್‍, ರನ್ನಿಂಗ್ ಕೋಚ್‍, ಈಜು, ಟ್ರೆಡ್‍ಮಿಲ್‍, ಭಾರ ಎತ್ತುವಿಕೆ, ಏರೋಬಿಕ್ಸ್, ಫುಟ್‍ ಬಾಲ್‍, ಬಿಲ್ವಿದ್ಯೆ ಮುಂತಾದ 90 ಬಗೆಯ ವರ್ಕೌಟ್‍ ಗಳನ್ನು ಆಯ್ಕೆ ಮಾಡಿಕೊಂಡು ಅದರ ಚಟುವಟಿಕೆಗಳನ್ನು ಮಾಪನ ಮಾಡಬಹುದಾಗಿದೆ.

ಆಪ್ಟಿಕಲ್‍ ಹಾರ್ಟ್‍ ರೇಟ್‍ ಸೆನ್ಸರ್, ಬಾಡಿ ಕಂಪೋಸಿಷನ್‍ ಅನಾಲಿಸಿಸ್‍ ನಂತಹ ವೈಶಿಷ್ಟ್ಯಗಳ ಮೂಲಕ ಹೃದಯದ ಆರೋಗ್ಯ ದೇಹದ ಕೊಬ್ಬಿನ ಪ್ರಮಾಣ, ದೇಹದಲ್ಲಿರುವ ನೀರಿನ ಅಂಶ, ಬಿಎಂಆರ್‍ ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು.
ಕರೆ ಮಾಡುವುದು, ಕರೆ ಸ್ವೀಕರಿಸುವ ವೈಶಿಷ್ಟ್ಯವಿದೆ. ವಾಚ್‍ 5 ಪ್ರೊ ನಲ್ಲಿದ್ದಂತೆ ಇದರಲ್ಲಿಯೂ ಎರಡು ರೀತಿಯ ಕಾಲಿಂಗ್‍ ಫೀಚರ್ ಇದೆ. ಬ್ಲೂಟೂಟ್‍ ಆವೃತ್ತಿಯಲ್ಲಿ, ಫೋನ್‍ ಜೊತೆ ಬ್ಲೂಟೂತ್‍ ಆನ್‍ ಮಾಡಿಕೊಂಡು ಕಾಲಿಂಗ್‍ ಗೆ ಬಳಸಬೇಕು. 4ಜಿ ಆವೃತ್ತಿಯಲ್ಲಿ ಇ ಸಿಮ್‍ ಫೀಚರ್‍ ಆಕ್ಟಿವೇಟ್‍ ಮಾಡಿಕೊಂಡು, ಫೋನ್‍ ರೇಂಜಿನಲ್ಲಿ ಇಲ್ಲದೇ ಹೋದರೂ, ಇ ಸಿಮ್‍ ಮೂಲಕ ಕರೆ ಮಾಡಲು, ಕರೆ ಸ್ವೀಕರಿಸಲು ಬಳಸಬಹುದು.

ಬ್ಯಾಟರಿ
ಇದು 410 ಎಂಎಎಚ್‍ ಬ್ಯಾಟರಿ ಹೊಂದಿದೆ. ಮ್ಯಾಗ್ನೆಟಕ್‍ ಚಾರ್ಜರ್ ಒಳಗೊಂಡಿದ್ದು, ಟೈಪ್‍ ಸಿ ಚಾರ್ಜರ್ ಗೆ ಈ ಕೇಬಲ್‍ ಹಾಕಿ ಚಾರ್ಜ್ ಮಾಡಬೇಕು. ಪೂರ್ತಿ ಚಾರ್ಜ್‍ ಆಗಲು 1 ಗಂಟೆ 20 ನಿಮಿಷ ಬೇಕಾಗುತ್ತದೆ. ಇದರ ಬ್ಯಾಟರಿ ಎರಡು ದಿನ ಬಾಳಿಕೆ ಬರುತ್ತದೆ. ಆದರೆ ಆಲ್ವೇಸ್‍ ಆನ್‍ ಡಿಸ್‍ ಪ್ಲೇ ಆಫ್‍ ಮಾಡಬೇಕು.
5 ಸಾವಿರ ರೂ.ಗಳಿಗೂ ಸ್ಮಾರ್ಟ್ ವಾಚ್‍ ದೊರಕುತ್ತವೆ. ಅವುಗಳಿಗೂ ಇದಕ್ಕೂ ಏನು ವ್ಯತ್ಯಾಸ? ಎಂಬ ಪ್ರಶ್ನೆ ಮೂಡಬಹುದು.ಇದೊಂದು ಪ್ರೀಮಿಯಂ ಸ್ಮಾರ್ಟ್ ವಾಚ್‍. ಅಂದರೆ ಎಲ್ಲ ಮಾಪನಗಳೂ ಸರ್ಟಿಫೈಡ್‍ ಆಗಿವೆ. ಹಾಗಾಗಿ ನಡಿಗೆಯ ಹೆಜ್ಜೆಯ ಮಾಪನವಿರಬಹುದು, ಹೃದಯ ಬಡಿತದ ರೇಟ್‍ ಇರಬಹುದು, ನಿದ್ರೆಯ ಮಾಪನ ಎಲ್ಲವೂ ನಿಖರವಾಗಿರುತ್ತವೆ. ಸ್ಯಾಪೈರ್ ಗಾಜು, ಆರ್ಮರ್ ಅಲ್ಯುಮಿನಿಯಂ ಕೇಸ್‍, ಐಪಿ 68 ಸರ್ಟಿಫೈಡ್‍ ನೀರು ನಿರೋಧಕ ಹಾಗಾಗಿಯೇ ಇದರ ದರ ಹೆಚ್ಚಿರುತ್ತದೆ. ಫಿಟ್‍ನೆಸ್‍ ಮತ್ತು ನೈಜ ಸ್ಮಾರ್ಟ್ ವಾಚಿನ ಅನುಭವ ಬಯಸುವವರಿಗೆ ಇದು ಸೂಕ್ತ.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next