ಪಂಚಕುಲ: ಬರೋಬ್ಬರಿ ಹನ್ನೆರಡು ವರ್ಷಗಳ ಹಿಂದೆ (2007) ಸಂಝೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ತೀರ್ಪು ಕೊನೆಗೂ ಬುಧವಾರ ಹೊರಬಿದ್ದಿದೆ. ಸ್ವಾಮಿ ಅಸೀಮಾನಂದ ಹಾಗೂ ಇತರ ಮೂವರು ಆರೋಪಿಗಳ ವಿರುದ್ಧದ ಆರೋಪಗಳನ್ನು ಹರಿಯಾಣದ ಪಂಚಕುಲದಲ್ಲಿನ ವಿಶೇಷ ಕೋರ್ಟ್ ಖುಲಾಸೆಗೊಳಿಸಿದೆ.
ಲೋಕೇಶ್ ಕುಮಾರ್, ಕಮಲ್ ಚೌಹಾಣ್ ಹಾಗೂ ರಾಜಿಂದರ್ ಚೌಧರಿ ಆರೋಪಮುಕ್ತರಾದ ಇತರರು. ಬಹು ಕುತೂಹಲಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಪಾಕಿಸ್ತಾನೀಯರ ಸಾಕ್ಷ್ಯಗಳನ್ನೂ ಪರಿಗಣಿಸಬೇಕು ಎಂದು ಆ ರಾಷ್ಟ್ರದ ಮಹಿಳೆ ರಹೀಲಾ ವಕೀಲ್ ಎಂಬುವವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ್ದು, ಇದು ವಿಚಾರಣೆಗೆ ಯಾವುದೇ ರೀತಿಯಲ್ಲೂ ಅರ್ಹವಲ್ಲ ಎಂದಿದೆ.
ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯವಿಲ್ಲದ್ದರಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಒಟ್ಟು ಎಂಟು ಜನರನ್ನು ಆರೋಪಿಗಳು ಎಂದು ಗುರುತಿಸಲಾಗಿದ್ದು, ಈ ಪೈಕಿ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಸುನೀಲ್ ಜೋಶಿಯನ್ನು 2007 ಡಿಸೆಂಬರ್‌ನಲ್ಲಿ ಹತ್ಯೆಗೈಯಲಾಗಿತ್ತು. . ಇತರ ನಾಲ್ವರು ವಿಚಾರಣೆ ಎದುರಿಸಿದ್ದಾರೆ. ಆರ್‌ಎಸ್‌ಎಸ್ ಸದಸ್ಯ ಅಸೀಮಾನಂದರನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು. ಸದ್ಯ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ.
ಕೋಲಾಹಲದ ಪ್ರಕರಣ: 2007ರ ಫೆ.18ರಂದು ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಸಂಝೋತಾ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ ನಡೆದು 68 ಮಂದಿ ಅಸುನೀಗಿದ್ದರು. ಈ ಪೈಕಿ ಹೆಚ್ಚಿನವರು ಪಾಕಿಸ್ತಾನಿ ನಾಗರಿಕರು. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಪ್ರಕರಣ ಹಿಂದೂ ಭಯೋತ್ಪಾದನೆ ಎಂಬ ಕಟು ಟೀಕೆಯೊಂದಿಗೆ ಹಲವಾರು ರಾಜಕೀಯ ತಿರುವುಗಳನ್ನೂ ಪಡೆದುಕೊಂಡಿತ್ತು. 2010 ರ ವರೆಗೆ ಹರಿಯಾಣ ಪೊಲೀಸರು ನಡೆಸಿದ್ದ ತನಿಖೆಯನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ದಳ)ವಹಿಸಿಕೊಂಡಿತ್ತು. 2011 ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದ ಎನ್‌ಐಎ ಎಂಟು ವ್ಯಕ್ತಿಗಳನ್ನು ಆರೋಪಿಗಳು ಎಂದು ಹೆಸರಿಸಿತ್ತು. ಇವರನ್ನು ಕೊಲೆ ಹಾಗೂ ಸಂಚು ಆರೋಪವನ್ನು ಎನ್‌ಐಎ ಹೊರಿಸಿತ್ತು. ಗುಜರಾತ್‌ನ ಅಕ್ಷರಧಾಮ, ಜಮ್ಮುವಿನ ರಘುನಾಥ ಮಂದಿರ, ವಾರಾಣಸಿಯ ಸಂಕಟ ಮೋಚನ ಮಂದಿರ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಕ್ರುದ್ಧರಾಗಿ ಸದ್ಯ ಖುಲಾಸೆಗೊಂಡವರು ಈ ಕೃತ್ಯವೆಸಗಿದ್ದರೆಂದು ಎನ್‌ಐಎ ಆರೋಪಿಸಿತ್ತು.
ಸೂಕ್ತ ಸಾಕ್ಷ್ಯವಿದ್ದೂ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಇದೇ ಪ್ರಕರಣ ಕಾಶ್ಮೀರಿಗಳು ಅಥವಾ ಮುಸ್ಲಿಮರ ವಿರುದ್ಧ ಸಲ್ಲಿಸಲಾಗಿದ್ದರೆ ವಿಚಾರಣೆಯನ್ನೇ ನಡೆಸದೆ ಶಿಕ್ಷೆ ವಿಧಿಸಲಾಗುತ್ತಿತ್ತು. ಕೇಸರಿ ಉಗ್ರರ ಕಡೆಗೆ ಯಾಕೆ ಈ ರೀತಿಯ ಒಲವು ತೋರಿಸಲಾಗುತ್ತಿದೆ?
– ಮೆಹಬೂಬಾ ಮುಫ್ತಿ, ಪಿಡಿಪಿ ನಾಯಕಿ