Advertisement

ನಿಸ್ವಾರ್ಥ ಪೌರ ಸೈನಿಕರಿಗೊಂದು ಸಲಾಮ್‌

02:47 PM Mar 29, 2020 | Suhan S |

ವಿಜಯಪುರ: ಜಗತ್ತನ್ನೇ ತಳ್ಳಣಗೊಳಿಸಿರುವ ಕೋವಿಡ್‌-19 ಹೆಸರಿನ ವೈರಸ್‌ ನಿಗ್ರಹಕ್ಕಾಗಿ ರವಿವಾರದಿಂದ ದೇಶವೇ ಸ್ತಬ್ಧವಾಗಿದೆ.

Advertisement

ಈ ಹಂತದಲ್ಲಿ ಐತಿಹಾಸಿಕ ಪ್ರವಾಸಿಗರ ತಾಣ ಎನಿಸಿರುವ ವಿಜಯಪುರ ಮಹಾನಗರದಲ್ಲಿ ಕೋವಿಡ್‌-19 ರೋಗದ ವಿರುದ್ಧದ ಹೋರಾಟದಲ್ಲಿ ಪಾಲಿಕೆ ಪೌರ ಕಾರ್ಮಿಕರು ಸೈನಿಕರಂತೆ ಜೀವದ ಹಂಗುತೊರೆದು ಸ್ವಚ್ಛತೆಗೆ ಮುಂದಾಗಿದ್ದಾರೆ.

ಕೋವಿಡ್‌-19  ಹರಡದಂತೆ ತಡೆಯಲು ದೇಶದ ಜನರು 21 ದಿನ ತಾವು ಇದ್ದ ಸ್ಥಳದಿಂದ ಹೊರ ಬರದೇ ಅಲ್ಲಿಯೇ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ “ಲಾಕ್‌ಡೌನ್‌’ ಆದೇಶ ಹೊರಡಿಸಿದ್ದಾರೆ. ಸಹಜವಾಗಿ ಈ ಆದೇಶ ಜಿಲ್ಲೆಯಲ್ಲೂ ಜಾರಿಯಲ್ಲಿದೆ. ಜಿಲ್ಲೆಯ ಜನರು ಮನೆಗಳಿಂದ ಹೊರ ಬಂದು ರಸ್ತೆಗೆ ಇಳಿಯದಂತೆ ಪೊಲೀಸರು ಕಣ್ಗಾವಲು ಕಾಯಲು ಕಾಯುತ್ತಿದ್ದಾರೆ. ಮತ್ತೂಂದೆಡೆ ರೋಗ ಬಾಧೆ ಹರಡದಂತೆ ತಡೆಯಲು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಮಲೀನ ಇರುವ ಪ್ರದೇಶಗಳಿಗೆ ನುಗ್ಗಿ ಸ್ವಚ್ಛತೆಗೆ ಮುಂದಾಗಿದ್ದಾರೆ.

ದೇಶದಲ್ಲಿ ಎಂಥದ್ದೇ ಕಠಿಣ ಸಂದರ್ಭದಲ್ಲಿ ಸೈನಿಕರು ದೇಶದ ಗಡಿಯಲ್ಲಿ ವೈರಿಗಳ ವಿರುದ್ಧ ಹೋರಾಟಕ್ಕೆ ಮಾತ್ರವಲ್ಲ ದೇಶದೊಳಗೂ ಜನರ ರಕ್ಷಣೆಗೆ ಮುಂದಾಗುತ್ತಾರೆ. ಪೌರ ಕಾರ್ಮಿಕರು ಕೂಡ ಎಷ್ಟೇ ಮಾರಕ ಸಾಂಕ್ರಾಮಿಕ ರೋಗ ಹರಡಿಕೊಂಡರೂ ತಮ್ಮ ಜೀವದ ಹಂಗು ತೊರೆದು ರೋಗ ತವರು ಎನಿಸಿದ ಕೊಳಕು ಪ್ರದೇಶಗಳಿಗೆ ತೆರಳಿ ಸ್ವತ್ಛತೆಗೆ ಮುಂದಾಗುತ್ತಾರೆ.

ನಗರದ ಬೀದಿಬದಿ ಗೂಡಿಸುವ ಜತೆಗೆ ಮನೆ ಮನೆಗೆ ತೆರಳಿ ಟಂಟಂ ಮೂಲಕ ಕಸ ಸಂಗ್ರಹದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹ್ಯಾಂಡ್‌ಗ್ಲೌಸ್‌, ವಿಶೇಷ ಮಾಸ್ಕ್, ಜಾಕೆಟ್‌ ಹೊರತಾಗಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇಂಥ ಕೊರತೆಗಳ ಮಧ್ಯೆ, ಅಲ್ಪ ಸಂಬಳ ಪಡೆದರೂ ಮಹಾನಗರ ಪಾಲಿಕೆಯ 530 ಪೌರಕಾರ್ಮಿಕರು ಸೈನಿಕರಂತೆ ದೇಶದ ವೈರಿ ಎನಿಸಿರುವ ಕೋವಿಡ್‌-19  ವಿರುದ್ಧ ಹೋರಾಟದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

Advertisement

ಇನ್ನು ರೋಗ ಸೋಂಕು ಹರಡದಂತೆ ಕಳೆದ ಎರಡು ದಿನಗಳಿಂದ ನಗರ ಸಾರ್ವಜನಿಕ ಸ್ಥಳಗಳಲ್ಲಿ ರಸಾಯನಿಕ ಮಿಶ್ರಣದ ಕ್ರಿಮಿನಾಶಕ ಸಿಂಪರಣೆಗೆ ಮುಂದಾಗಿದ್ದಾರೆ. ಈ ಮಹತ್ಕಾರ್ಯದ ಮುಂಚೂಣಿಯಲ್ಲಿ ನಿಂತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೂ ಪೌರ ಕಾರ್ಮಿಕರು ಸಹಕಾರ ನೀಡುತ್ತಿದ್ದಾರೆ. ಬಸ್‌ ನಿಲ್ದಾಣ, ಜಿಲ್ಲಾ ಧಿಕಾರಿ ಕಚೇರಿ, ಮಹಾತ್ಮಾ ಗಾಂಧಿಧೀಜಿ ವೃತ್ತ, ಎಲ್‌.ಬಿ.ಶಾಸ್ತ್ರೀ ಮಾರುಕಟ್ಟೆ ಪ್ರದೇಶ, ಶ್ರೀ ಸಿದ್ದೇಶ್ವರ ದೇವಾಲಯ ಮಾರ್ಗ ಹಾಗೂ ವಿವಿಧ ಮಾರ್ಗಗಳಲ್ಲಿ ಇರುವ ಖಾಸಗಿ ವಾಣಿಜ್ಯ ಸಂಕಿರಣಗಳಿಗೆ ಕ್ರಿಮಿನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ.

ನಮ್ಮ ಜೀವಕ್ಕಿಂತ ಜನರ ಜೀವ ಮುಖ್ಯ ಎಂದು ರೋಗಕಾರಕ ಪ್ರದೇಶದಲ್ಲಿ ಕೆಲಸ ಮಾಡುವ ನಮ್ಮ ಬದುಕು ದುಸ್ತರವಾಗಿದೆ. ಸರ್ಕಾರ ಪೌರ ಕಾರ್ಮಿಕರ ಗೌರಯುತ ಬದುಕಿಗೆ ಆಸರೆಯಾಗಲಿ. –ಹೆಸರು ಹೇಳಲು ಇಚ್ಛಿಸದ,ಪೌರಕಾರ್ಮಿಕ

 

 

-ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next