Advertisement

ಉಪ್ಪು ನೀರಿನ ಹೊಳೆ, ಕೊಳಚೆ‌ ಮಧ್ಯೆ ಕುಡಿಯುವ ನೀರಿಗೆ ಪರದಾಟ

09:31 PM May 02, 2019 | Sriram |

ಒಂದೆಡೆ ಉಪ್ಪು ನೀರಿನ ಹೊಳೆ, ಇನ್ನೊಂದೆ‌ಡೆ ಹರಿಯುವ ಕೊಳಚೆ ನೀರು. ಮಧ್ಯೆ ಜನರು ನೀರಿಲ್ಲದೆ ಹೈರಾಣ. ಇಲ್ಲಿ ಬೆಳಗಾದರೆ ನೀರಿನ ಚಿಂತೆ. ಕೆಲಸ ಬಿಟ್ಟು ನೀರಿಗಾಗಿ ಕಾಯಬೇಕು, ಇದು ಕೊಡವೂರು ವಾರ್ಡ್‌ನ ಸ್ಥಿತಿ.

Advertisement

ಮಲ್ಪೆ: ಬೆಳಗಾದರೆ ಕುಡಿಯುವ ನೀರಿನ ಚಿಂತೆ. ಮೂರು ದಿನಕ್ಕೊಮ್ಮೆ ನಳ್ಳಿಯಲ್ಲಿ ನೀರು ಬಂದರೂ ಸರಾಗವಾಗಿ ಬರುತ್ತಿಲ್ಲ. ಹನಿ ಹನಿ ನೀರಿಗೆ ದಿನವಿಡೀ ರಜೆ ಹಾಕಿ ಕಾದು ಕುಳಿತು ಕೊಳ್ಳಬೇಕು. ಇದು ಕೊಡವೂರು ವಾರ್ಡ್‌ನ ಹೊಳೆ ತೀರದ ಹಲವಾರು ಮನೆಗಳಲ್ಲಿ ಕೇಳಿ ಬರುತ್ತಿರುವ ದೂರು.

ಕೊಡವೂರು ವಾರ್ಡ್‌ನ ಹೊಳೆ ತೀರದ ಮತ್ತು ಕೊಳಚೆ ನೀರು ಹರಿಯುವ ಪ್ರದೇಶಗಳಾದ ಚೆನ್ನಂಗಡಿ, ಕಟ್ಟದಬುಡ, ಕಾನಂಗಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪ್ರತಿ ವರ್ಷ ಇಲ್ಲಿನ ಜನರು ಬೇಸಗೆಯಲ್ಲಿ ಕುಡಿಯುವ ಹನಿ ನೀರಿಗಾಗಿ ನಿತ್ಯ ಪರದಾಡಬೇಕಾದ ಪ್ರಸಂಗ ನಿರ್ಮಾಣ ವಾಗುತ್ತದೆ. ಈ ವರ್ಷವೂ ಅದು ತಪ್ಪಿದ್ದಿಲ್ಲ.

ಈ ಭಾಗದ ಒಂದು ಕಡೆ ಸುತ್ತುವರಿದ ಉಪ್ಪು ನೀರಿನ ನದಿ, ಇನ್ನೊಂದೆ‌ಡೆ ನಗರದ ಕೊಳಚೆ ನೀರು ಈ ಪ್ರದೇಶದ ತೋಡಿನ ಮೂಲಕ ಹರಿದು ಸಮುದ್ರ ಸೇರುವುದರಿಂದ ಬಾವಿ ನೀರನ್ನು ಮುಟ್ಟುವ ಹಾಗಿಲ್ಲ. ಹಾಗಾಗಿ ಇಲ್ಲಿನ ಜನ ವರ್ಷ ಪೂರ್ತಿ ನಳ್ಳಿ ನೀರನ್ನೇ ಅವಲಂಬಿಸಬೇಕಾಗಿದೆ. ನೀರಿನ ಸಮಸ್ಯೆ ಹೇಳಲು ನಗರಸಭೆ ಸಂಪರ್ಕಕ್ಕೆ ಸಿಗುತ್ತಿಲ್ಲ. ನೀರಿನ ಸಮಸ್ಯೆ ದೂರಿಗೂ ಸ್ಪಂದಿಸುವುದಿಲ್ಲ. ನೀರನ್ನೂ ಸಾಲದಲ್ಲಿ ಖರೀದಿಸುವ ಪರಿಸ್ಥಿತಿ ಇಲ್ಲಿನವರದ್ದು.

ಕಲುಷಿತಗೊಂಡ ಬಾವಿ
ನಗರದ ಕಲುಷಿತ ನೀರು ನೇರ ಕಲ್ಮಾಡಿ ಹೊಳೆಯನ್ನು ಸೇರುತ್ತಿರುವುದರಿಂದ ಇದ್ದ ಕೆಲವೊಂದು ಬಾವಿಗಳಿಗೆ ಕೊಳಚೆ ನೀರು ಸೇರಿ ಬಾವಿಯ ನೀರು ಉಪಯೋಗಕ್ಕೆ ಸಿಗದಂತೆ ಆಗಿದೆ. ನದಿಯ ನೀರು ಕಪ್ಪು ಬಣ್ಣಕ್ಕೆ ಪರಿವರ್ತನೆಗೊಂಡಿದ್ದು ಅಸಹ್ಯ ದುರ್ವಾಸನೆ ಬೀರುತ್ತಿದೆ. ತೋಡಿನಲ್ಲಿ ಹರಿಯುವ ನೀರು ಮೈಗೆ ತಾಗಿ ಕೆಲವರು ಚರ್ಮರೋಗಕ್ಕೆ ಗುರಿಯಾಗಿದ್ದಾರೆ. ದುರ್ವಾಸನೆಯಿಂದಾಗಿ ನಾವು ಸರಿಯಾಗಿ ಉಸಿರಾಡುವಂತಿಲ್ಲ, ಊಟ ಮಾಡದಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಚೆನ್ನಂಗಡಿ ನಿವಾಸಿ ನವೀನ್‌.

Advertisement

ಸಮುದ್ರ ತೀರದವರಿಗೂ ಸಮಸ್ಯೆ
ಮೂಡುಬೆಟ್ಟು ವಾರ್ಡ್‌ನಲ್ಲಿ ಕಲ್ಮಾಡಿ ಚರ್ಚ್‌ನ ಹಿಂಭಾಗ ಮತ್ತು ಕಂಗಣಬೆಟ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಕಂಗಣಬೆಟ್ಟು ಪ್ರದೇಶದಲ್ಲಿ ಪಾದೆ ಇರುವುದರಿಂದ ಬಾವಿ ತೋಡಲು ಕಷ್ಟ. ವಡಭಾಂಡೇಶ್ವರ ವಾರ್ಡ್‌ನ ಸಮುದ್ರ ತೀರದ ಕೆಲವೇ ಮನೆಗಳಲ್ಲಿ ಸಮಸ್ಯೆ ಇದೆ. ಇನ್ನು ಕೊಳ ವಾರ್ಡ್‌ನಲ್ಲಿ ಕುಡಿಯಲು ಮೂರು ದಿನಕ್ಕೊಮ್ಮೆ ಬರುವ ನೀರಿನ ಉಪಯೋಗವಾದರೆ, ಇನ್ನಿತರ ಕೆಲಸಕ್ಕೆ ಬಾವಿ, ಹ್ಯಾಂಡ್‌ ಪಂಪ್‌ ನೀರನ್ನು ಬಳಸಲಾಗುತ್ತದೆ.

ಕಳೆದ ವರ್ಷ ಸಮಸ್ಯೆ ಇಷ್ಟಿರಲಿಲ್ಲ
ಕೊಡವೂರು ವಾರ್ಡ್‌ ಲಕ್ಷ್ಮೀನಗರ ಗರ್ಡೆ, 5, 4 ಮತ್ತು 2ನೇ ಕ್ರಾಸ್‌ ರಸ್ತೆ ಪ್ರದೇಶದಲ್ಲಿ ಮೂರು ದಿನಕ್ಕೊಮ್ಮೆ ನೀರು ಬಂದರೂ ಪ್ರಶರ್‌ ಇಲ್ಲ. ಕಳೆದ ವರ್ಷ ಇಷ್ಟೊಂದು ನೀರಿನ ಸಮಸ್ಯೆಯಾಗಿಲ್ಲ. ಕನಿಷ್ಠ ಎರಡು ದಿನಕ್ಕೊಮ್ಮೆ ನೀರು ಸಿಗುತ್ತಿತ್ತು.

ನಗರಸಭೆ ನಳ್ಳಿಯಿಂದ ನೀರು ಬಾರದಿದ್ದರೂ ಟ್ಯಾಂಕರ್‌ ನೀರಿನ ಸರಬರಾಜಿನಿಂದಾಗಿ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಈ ಸಲ ಟ್ಯಾಂಕರ್‌ ನೀರು ಕೂಡ ಇಲ್ಲ. ಅಧಿಕಾರಿಗಳ ಸ್ಪಂದನೆಯೂ ಇಲ್ಲ ಎನ್ನುತ್ತಾರೆ ಲಕ್ಷ್ಮೀನಗರ ಗರ್ಡೆಯ ಕಿಶೋರ್‌.

7-8 ಕೊಡ ಸಿಕ್ಕಿದರೆ ಪುಣ್ಯ!
ಬಟ್ಟೆ ಒಗೆಯಲು, ಪಾತ್ರೆ ತೊಳೆಯಲೆಂದು ಬೋರ್‌ವೆಲ್‌  ಮಾಡಿದ್ದೇವೆ. ಕಲುಷಿತ ನೀರಿನಿಂದಾಗಿ ತೆಂಗಿನ ಮರಕ್ಕೆ ಬಿಡಬಹುದಷ್ಟೆ ವಿನಾ ಇತರ ಎಲ್ಲದಕ್ಕೂ ನಗರಸಭೆಯ ನೀರನ್ನೇ ಅವಲಂಬಿಸಬೇಕಾಗಿದೆ.

ನಮ್ಮ ಚೆನ್ನಂಗಡಿ ಪ್ರದೇಶ ವಾರ್ಡ್‌ನ ಕೊನೆ ಭಾಗದಲ್ಲಿರುವುದರಿಂದ ಟ್ಯಾಂಕಿನ ಸಮೀಪದ ಮನೆಗಳಿಗೆ ನೀರು ಭರ್ತಿಯಾದ ಬಳಿಕ ನಮ್ಮ ನಳ್ಳಿಯಲ್ಲಿ
ನೀರು ಬರುತ್ತದೆ. ಅದೂ ಕೂಡ ಸಪೂರ. ಸುಮಾರು 7-8 ಕೊಡಪಾನ ನೀರು ಸಿಗುತ್ತದೆ ಎಂದು ಕಲ್ಮಾಡಿ ಚೆನ್ನಂಗಡಿಯ ವಿಮಲಾ ಅವರು ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ.

ಸಾಲ ರೂಪದಲ್ಲಿ ನೀರು
ನಮ್ಮಲ್ಲಿ ನೀರನ್ನು ಸಂಗ್ರಹಿಸಿಡಲು ಟ್ಯಾಂಕ್‌ಗಳು ಇಲ್ಲ. ಇದ್ದ ಪಾತ್ರೆಗಳಲ್ಲಿ ಶೇಖರಿಸಿ ಇಡುತ್ತೇವೆ. ನೀರು ಖಾಲಿಯಾದರೆ ಸಮೀಪದ ಮನೆಯಲ್ಲಿ ಸಾಲ ರೂಪದಲ್ಲಿ ನೀರು ತಂದು ಅಡುಗೆ ಮಾಡುತ್ತೇವೆ. ಮೂರು ದಿನಕ್ಕೊಮ್ಮೆ ಬರುವ ನೀರು ಸಾಕಾಗುತ್ತಿಲ್ಲ. ಬಾವಿ ಹಳದಿಯಾಗಿದೆ. ಸಂಬಂಧಿಕರು ಬಂದರೆ ದುಡ್ಡು ಕೊಟ್ಟು ಟ್ಯಾಂಕರ್‌ ನೀರನ್ನು ತರಿಸುತ್ತಿದ್ದೇವೆ. ಒಟ್ಟಿನಲ್ಲಿ ಖರ್ಚಿನ ಮೇಲೆ ಖರ್ಚಿಗೆ ಎಡೆ ಮಾಡಿಕೊಟ್ಟಿದೆ.
-ಜಲಜಾ ಪೂಜಾರಿ¤,ಸ್ಥಳೀಯ ಮಹಿಳೆ

ವಾರ್ಡಿನವರ ಬೇಡಿಕೆ
– ಬಜೆಯಲ್ಲಿ ನೀರಿಲ್ಲದಿದ್ದರೆ ಟ್ಯಾಂಕರ್‌ ನೀರು ಒದಗಿಸಲಿ.
– ನೀರಿನ ಸಮಸ್ಯೆ ಸಂಬಂಧಿಸಿ ಕಂಟ್ರೋಲ್‌ ರೂಂ ಸ್ಥಾಪಿಸಬೇಕು.
– ತಾತ್ಕಾಲಿಕ ಪರಿಹಾರಕ್ಕೆ ಆಡಳಿತ ಮುಂದಾಗಬೇಕು.
– ತೀರ ಅಗತ್ಯ ಪ್ರದೇಶಕ್ಕೆ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಬೇಕು.
– ಶಾಶ್ವತ ಯೋಜನೆ ಕಲ್ಪಿಸಬೇಕು.

ಶಾಶ್ವತ ಪರಿಹಾರಕ್ಕೆ ಒತ್ತು
ಸಾಧ್ಯವಾದಷ್ಟು ತೀರ ಅಗತ್ಯವಿರುವ ಪ್ರದೇಶದ ಮನೆಗಳಿಗೆ ವೈಯಕ್ತಿಕ ನೆಲೆಯಲ್ಲಿ ಟ್ಯಾಂಕರ್‌ನಲ್ಲಿ ನೀರನ್ನು ವಿತರಿಸಲಾಗುತ್ತಿದೆ. ಕುಡಿಯುವ ನೀರಿನ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದೆ ವಾರ್ಡ್‌ನ ಪ್ರತೀ ಮನೆಗಳಲ್ಲಿ ಇಂಗು ಗುಂಡಿ ನಿರ್ಮಾಣ, ವಾರ್ಡ್‌ನ 7 ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
– ವಿಜಯ ಕೊಡವೂರು,ನಗರಸಭಾ ಕೊಡವೂರು ವಾರ್ಡ್‌ಸದಸ್ಯರು

ಗಾಯದ ಮೇಲೆ ಬರೆ
ನಾವು ಮುಂಜಾನೆ ಎದ್ದು ಮೀನುಗಾರಿಕೆ ಕಸುಬಿಗೆ ಹೋಗುವವರು. ಬಂದರಿನಲ್ಲಿ ಮೀನಿನ ಅಭಾವದಿಂದ ಮೊದಲೇ ಸರಿಯಾದ ಕೆಲಸ ಇಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವ ಈ ವೇಳೆಯಲ್ಲಿ ಕೆಲಸ ಬಿಟ್ಟು ಕುಡಿಯುವ ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ಒಟ್ಟಿನಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಈಗಿನ ಬದುಕು.
– ಪುಷ್ಪಾ ಎಸ್‌.ಕಾಂಚನ್‌,ಕಾನಂಗಿ

ಉದಯವಾಣಿ ಆಗ್ರಹ
ಅಗತ್ಯವಿರುವಲ್ಲಿಗೆ ಕೂಡಲೇ ಟ್ಯಾಂಕರ್‌ ನೀರು ಪೂರೈಸುವುದು. ಕೊಳಚೆ ನೀರು ಈ ಭಾಗದ ಬಾವಿ ನೀರಿಗೆ ಸೇರದಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕು.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆ ಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next