Advertisement

ಬೋಟ್‌ಗಳಲ್ಲಿ ಅಳವಡಿಕೆಯಾಗದ ಉಪ್ಪುನೀರು ಸಂಸ್ಕರಣ ಯಂತ್ರ: ಪ್ರಾತ್ಯಕ್ಷಿಕೆಗೆ ಸೀಮಿತವಾದ ಯೋಜನೆ

11:53 PM Mar 06, 2023 | Team Udayavani |

ಮಂಗಳೂರು: ವಾರ, ಹದಿನೈದು ದಿನ -ಹೀಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು ಬೋಟ್‌ಗಳಲ್ಲಿ ತಮ್ಮ ಜತೆ ಲೀಟರ್‌ಗಟ್ಟಲೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವ ಬದಲು ಸಮುದ್ರದ ನೀರನ್ನೇ ಸಂಸ್ಕರಿಸಿ ಉಪಯೋಗಿಸುವ ವ್ಯವಸ್ಥೆ ಯೊಂದನ್ನು ಮೀನುಗಾರರಿಗೆ ಪರಿಚಯಿಸುವ ಕೆಲಸ ಇಲಾಖೆ ಮಾಡಿತ್ತು. ಆದರೆ ಇದನ್ನು ಅನುಷ್ಠಾನಕ್ಕೆ ತರುವಲ್ಲಿ ಮಾತ್ರ ವಿಳಂಬವಾಗಿದೆ.

Advertisement

2021ರ ಸಪ್ಟೆಂಬರ್‌ ತಿಂಗಳಲ್ಲಿ ಸ್ವತಃ ಮೀನುಗಾರಿಕಾ ಸಚಿವರ ನೇತೃತ್ವದಲ್ಲೇ ಇದರ ಪ್ರಾತ್ಯಕ್ಷಿಕೆ ನಡೆಸಿ, ಮೀನುಗಾರಿಕಾ ಬೋಟ್‌ ಮಾಲಕರಿಗೆ ವಿವರಿಸಲಾಗಿತ್ತು. ಯಂತ್ರಕ್ಕೆ ಕೇಂದ್ರ ಸರಕಾರದಿಂದ ಶೇ. 50ರಷ್ಟು ಸಬ್ಸಿಡಿ ಮತ್ತು ರಾಜ್ಯದಿಂದಲೂ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದ್ದರು. ಆದರೆ ಯೋಜನೆ ಪ್ರಾಯೋಗಿಕ ಪರೀಕ್ಷೆಗೆ ಮಾತ್ರ ಸೀಮಿತವಾಗಿದ್ದು, ಅನಂತರ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

ಮೀನುಗಾರರಿಗೆ ಅಗತ್ಯ
ಪ್ರಸ್ತುತ ಮೀನುಗಾರರು ತಮಗೆ ಅಗತ್ಯ ಇರುವಷ್ಟು ಶುದ್ಧ ಸಿಹಿನೀರನ್ನು ಬಂದರಿನಿಂದ ತೆರಳುವಾಗಲೇ ಟ್ಯಾಂಕ್‌ಗಳಲ್ಲಿ ಕೊಂಡೊಯ್ಯುತ್ತಿದ್ದಾರೆ. ಸಾವಿರಾರು ಲೀಟರ್‌ ನೀರಿನ ಟ್ಯಾಂಕ್‌ ಇರಿಸಿಕೊಳ್ಳು ವುದರಿಂದ ಬೋಟ್‌ನಲ್ಲಿ ಭಾರ ಹೆಚ್ಚುತ್ತದೆ. ಕೆಲವೊಮ್ಮೆ ಕೊಂಡೊಯ್ದ ನೀರು ಖಾಲಿಯಾಗುವ ಸಾಧ್ಯತೆಯೂ ಇದೆ. ಆದರೆ ಶುದ್ಧೀಕರಣ ಘಟಕ ಇರಿಸಿಕೊಳ್ಳುವುದು ಇವೆಲ್ಲದಕ್ಕೆ ಮುಕ್ತಿ ನೀಡುತ್ತದೆ. ಆದರೆ ಸಚಿವರು ಪ್ರಾತ್ಯಕ್ಷಿಕೆಗೆ ತೋರಿಸಿದ ಉತ್ಸುಕತೆಯನ್ನು ಬಳಿಕ ಅನುಷ್ಠಾನದಲ್ಲಿ ತೋರಿಸಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.

ವಿದೇಶಗಳಲ್ಲಿ ಈಗಾಗಲೇ ಬಳಕೆ
ಅಮೆರಿಕ, ಯೂರೋಪ್‌ನಲ್ಲಿ ಈ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ದೇಶದ ಮಟ್ಟಿಗೆ ನಮ್ಮಲ್ಲೇ ಮೊದಲ ಪ್ರಯೋಗವಾಗಿತ್ತು. ಬೋಟ್‌ ಸಂಚರಿಸುತ್ತಿರುವಾಗಲೇ ಉಪ್ಪು ನೀರನ್ನು ಪೈಪ್‌ ಮೂಲಕ ಸಂಗ್ರಹಿಸಿ, ಶುದ್ಧೀಕರಣ ಯಂತ್ರಕ್ಕೆ ಊಡಿಸಿದರೆ ಸಿಹಿ ನೀರು ಇನ್ನೊಂದು ಪೈಪ್‌ ಮೂಲಕ ಹೊರಗೆ ಬರುತ್ತದೆ. ದಿನಕ್ಕೆ 2 ಸಾವಿರ ಲೀ. ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿರುವ ಯಂತ್ರದ ಬೆಲೆ 4.60 ಲಕ್ಷ ರೂ. ಆಸ್ಟ್ರೇಲಿಯಾ ಮೂಲದ ರೆಯಾನ್ಸ್‌ ಎನ್ನುವ ಸಂಸ್ಥೆ ಈ ಕಿಟ್‌ ತಯಾರಿಸಿದೆ.

ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಿಗೆ ಉಪ್ಪು ನೀರು ಸಂಸ್ಕರಿಸಿ, ಸಿಹಿ ನೀರು ಪಡೆಯುವ ಯಂತ್ರ ಅಳವಡಿಸುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಪ್ರಕ್ರಿಯೆ ಜಾರಿಯಲ್ಲಿದೆ. ಮತ್ಸ್ಯ ಸಂಪದ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮೀನುಗಾರಿಗೆ ಒದಗಿಸುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದೆ.
– ಎಸ್‌. ಅಂಗಾರ, ಮೀನುಗಾರಿಕೆ ಸಚಿವರು

Advertisement

ನೀರು ಸಂಸ್ಕರಿಸುವ ಕಿಟ್‌ ಅಳವಡಿಸಲು ಸರಕಾರದಿಂದ ಸಬ್ಸಿಡಿ ಇದೆ ಎಂದು ಹೇಳಿದ್ದರು. ಮಂಗಳೂರು, ಮಲ್ಪೆಯಲ್ಲಿ ಸಮುದ್ರಕ್ಕೆ ಬೋಟ್‌ನಲ್ಲಿ ತೆರಳಿ ಪ್ರಾತ್ಯಕ್ಷಿಕೆ ನಡೆಸಿದ್ದರು. ಅನಂತರ ಇಲಾಖೆಯಿಂದ ಮೀನುಗಾರರಿಗೆ ಯಾವುದೇ ಮಾಹಿತಿ ಬಂದಿಲ್ಲ.
– ಮೋಹನ್‌ ಬೆಂಗ್ರೆ, ಮೀನುಗಾರಿಕಾ ಮುಖಂಡರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next