ಪಡುಬಿದ್ರಿ: ಅದಾನಿ ಯುಪಿಸಿಎಲ್ ತನ್ನ ವಿಸ್ತರಣಾ ಯೋಜನೆಯ ವೇಳೆ ಸ್ಥಾಪಿಸಲಿ ರುವ 450 ಕೋಟಿ ರೂ. ವೆಚ್ಚದ ಸಿಮೆಂಟ್ ಘಟಕದಲ್ಲಿ ಕಚ್ಚಾ ವಸ್ತುವಾದ ಕ್ಲಿಂಕರ್ಗಳನ್ನು ಆಮದು ಮಾಡಿಕೊಳ್ಳುವುದರಿಂದ ಪರಿಸರ ಮಾಲಿನ್ಯವು ಬಹುಮಟ್ಟಿಗೆ ನಿಯಂತ್ರಿತ ವಾಗಲಿದೆ. ಇದೇ ವೇಳೆ ಈ ದೈತ್ಯ ಸಂಸ್ಥೆಯು ಸ್ಥಾಪಿಸಲುದ್ದೇಶಿಸಿರುವ ಉಪ್ಪು ನೀರಿನ ಶುದ್ಧೀಕರಣ ಘಟಕವು ಭವಿಷ್ಯದಲ್ಲಿ ಈ ಜಿಲ್ಲೆಗೆ ವರದಾನ ವಾಗಲಿರುವುದಾಗಿ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಹೇಳಿದರು.
ಸಮಿತಿಯ ಅಧ್ಯಕ್ಷ ಧರ್ಮಪಾಲ ದೇವಾಡಿಗ ಸಹಿತ ಸುಮಾರು 40 ಮಂದಿ ಸದಸ್ಯರ ಜತೆಗೂಡಿ ಅದಾನಿ ಯುಪಿಸಿಎಲ್‌ಗೆ ಭೇಟಿಯಿತ್ತು ಕಳೆದ ಬಾರಿ ಸಮಿತಿ ಭೇಟಿಯಿತ್ತ ವೇಳೆ ಆದಾನಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ನೀಡಿದ್ದ ಭರವಸೆಗಳ ಮರು ಪರಿಶೀಲನೆಯನ್ನು ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನಾ ಘಟಕವಿದ್ದು ಜಿಲ್ಲೆಗೆ ಅಲ್ಪ ಮಾತ್ರ ವಿದ್ಯುತ್ತನ್ನು ವಿತರಿಸಲಾಗುತ್ತಿದೆ. ಈ ತಾರತಮ್ಯ ನೀತಿ ತರವಲ್ಲ. ಈ ಕುರಿತಾಗಿ ಪೂರ್ವ ಪ್ರಧಾನ ಮಂತ್ರಿ ದೇವೇಗೌಡ ಹಾಗೂ ಪೂರ್ವ ಜಿಲ್ಲಾ ಉಸ್ತುವಾರಿಗಳಾಗಿದ್ದ ಡಾ| ವಿ.ಎಸ್. ಆಚಾರ್ಯರು ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ವಾಗ್ಧಾನವನ್ನು ಹಿಂದೆಯೇ ನೀಡಿದ್ದರು. ಈಗ ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸಿದ್ದರೂ ಅವಿಭಜಿತ ಜಿಲ್ಲೆಗಳಿಗೆ ದಿನದ 24 ತಾಸೂ ವಿದ್ಯುತ್ತನ್ನು ರಾಜ್ಯ ಸರಕಾರ ನೀಡಬೇಕು. ಇದಕ್ಕಾಗಿ ರಾಜ್ಯ ಇಂಧನ ಸಚಿವ ಡಿ. ಕೆ. ಶಿವಕುಮಾರ್‌ರೊಂದಿಗೆ ತಮ್ಮ ಸಮಿತಿ ಚರ್ಚಿಸಿ ಬೇಡಿಕೆಯನ್ನು ಸಲ್ಲಿಸಲಿದೆ ಎಂದರು.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯನ್ನು ಸ್ವಾಗತಿಸಿ ಮಾತಾಡಿದ ಅದಾನಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಕೇಂದ್ರ ಪರಿಸರ ಇಲಾಖೆಯಿಂದ ಈಗಾಗಲೇ ಅನುಮತಿಯನ್ನು ಪಡೆದುಕೊಂಡಿದ್ದು 14,500 ಕೋಟಿ ರೂ. ವೆಚ್ಚದಲ್ಲಿ ಯುಪಿಸಿಎಲ್ 2ನೇ ಹಂತದ ವಿಸ್ತರಣಾ ಯೋಜನೆಯು ಅನುಷ್ಠಾನಗೊಳ್ಳಲಿದೆ. ಯೋಜನೆಗೆ 160 ಎಕರೆ ಭೂಮಿ ಸ್ವಾಧೀನಗೊಂಡಿದ್ದು 568 ಎಕರೆ ಭೂಸ್ವಾಧೀನತೆಯು ಆಗಬೇಕಿದೆ ಎಂದರು.
ಸಮಿತಿಯ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡಿದರು. ಯುಪಿಸಿಎಲ್ ಪ್ಲಾಂಟ್ ಹೆಡ್ ಸುಂದರ್ ರೇ, ಯುಪಿಸಿಎಲ್ ಎಜಿಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ, ಸಮಿತಿಯ ಸದಸ್ಯರಾದ ರಾಮಚಂದ್ರ ಬೈಕಂಪಾಡಿ, ಜಗದೀಶ ಅಧಿಕಾರಿ, ಉದ್ಯಮಿ ಹರೀಶ್ ಕುಮಾರ್ ಶೆಟ್ಟಿ, ಫೆಲಿಕ್ಸ್ ಡಿ”ಸೋಜಾ, ಜಾದೂಗಾರ ಪ್ರೊ| ಶಂಕರ್, ಪಿ.ಡಿ. ಶೆಟ್ಟಿ, ಹ್ಯಾರಿ ಸಿಕ್ವೇರ, ದಯಾ ಸಾಗರ್ ಚೌಟ, ಸುರೇಂದ್ರ ಮೆಂಡನ್, ಕುತ್ಪಾಡಿ ರಾಮಚಂದ್ರ ಗಾಣಿಗ, ಎಚ್. ಮೋಹನ್‌ದಾಸ್, ನಿತ್ಯಾನಂದ ಕೋಟ್ಯಾನ್, ಜಿ.ಟಿ. ಆಚಾರ್, ಎಸ್.ಕೆ. ಶ್ರೀಯಾನ್, ಎಲ್.ವಿ. ಅಮೀನ್, ದಿವಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸುಧಾಕರ ಶೆಟ್ಟಿ ತೋನ್ಸೆ, ತುಳಸಿದಾಸ್ ಅಮೀನ್, ಅರುಣ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.