Advertisement

ಉಪ್ಪು ನೀರಿನ ಸಮಸ್ಯೆ ನಿವಾರಣೆಗೆ ದಂಡೆ ಸತ್ಯಾಗ್ರಹ !

02:13 PM Jun 20, 2022 | Team Udayavani |

ಕಟಪಾಡಿ: ಜಗದ್ಗುರು ಮಧ್ವಾಚಾರ್ಯರ ಜನ್ಮಭೂಮಿ ಪಾಜಕ ಕ್ಷೇತ್ರದ ಅಂಚಿನಲ್ಲಿರುವ ಕುರ್ಕಾಲು ಗ್ರಾಮ ಹಲವು ರೀತಿಯಲ್ಲಿ ಪ್ರಸಿದ್ಧಿ. ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, 36 ಅಡಿ ಎತ್ತರದ ಆಚಾರ್ಯ ಮಧ್ವರ ಶಿಲಾ ವಿಗ್ರಹ, ಶಂಕರಪುರ ಮಲ್ಲಿಗೆಯ ಕಂಪಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವಂಥದ್ದು.

Advertisement

ಈ ಗ್ರಾಮ ಆಧರಿಸಿರುವುದು ಕೃಷಿಯನ್ನೇ. 973.17 ಹೆಕ್ಟೇರು ವಿಸ್ತೀರ್ಣದ ಗ್ರಾಮದಲ್ಲಿ ಸುಮಾರು 800 ಎಕರೆ ಕೃಷಿ ಭೂಮಿ ಇದೆ. 500ಕ್ಕೂ ಹೆಚ್ಚು ಕೃಷಿಕರಾಗಿದ್ದಾರೆ. ಕೂಲಿ ಕಾರ್ಮಿಕರೂ ಇದ್ದಾರೆ. ಭತ್ತ, ಧಾನ್ಯ, ವಿವಿಧ ತೋಟಗಾರಿಕಾ ಬೆಳೆಗಳು ಕೃಷಿಯ ನೆಲೆಯಲ್ಲಿದ್ದರೆ, ಇದೇ ಕೃಷಿಕರನ್ನು ಕೈ ಹಿಡಿದಿರುವ ಮತ್ತೂಂದು ಕ್ಷೇತ್ರ ಹೈನುಗಾರಿಕೆ. ಇಷ್ಟಕ್ಕೇ ಇದರ ಆರ್ಥಿಕ ಸಂರಚನೆಗಳು ಮುಗಿಯುವುದಿಲ್ಲ ಇಲ್ಲಿನ ಹವಾಮಾನ ಮತ್ತು ಮಣ್ಣಿನ ಗುಣದಿಂದಾಗಿ ಶಂಕರಪುರ ಮಲ್ಲಿಗೆಯೂ ಅರಳುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಗ್ರಾಮದ ಕಂಪನ್ನು ಪಸರಿಸಿರುವುದು ಇದೇ ಮಲ್ಲಿಗೆ. 400ಕ್ಕೂ ಅಧಿಕ ಕುಟುಂಬಗಳು ಮಲ್ಲಿಗೆ ಕೃಷಿಯನ್ನು ಅವಲಂಬಿಸಿವೆ.

ಉಪ್ಪು ನೀರಿನ ಸಮಸ್ಯೆ: ಇಷ್ಟೆಲ್ಲ ಇರುವ ಗ್ರಾಮವನ್ನು ಬಾಧಿಸುತ್ತಿರುವುದು ಉಪ್ಪು ನೀರಿನ ಸಮಸ್ಯೆ. ನದಿ ದಂಡೆ ಯೋಜನೆಯ ಅನುಷ್ಠಾನ ಆಗಬೇಕೆಂಬುದು ರೈತರ ಬೇಡಿಕೆ. ಹಲವು ವರ್ಷಗಳಿಂದ ಈ ವರ್ಷ ಬೇಡಿಕೆ ಈಡೇರಬಹುದು, ಮುಂದಿನ ವರ್ಷ ಈಡೇರಬಹುದು ಎಂದು ಕಾಯುತ್ತಿದ್ದಾರೆ. ಆದರೆ ಇನ್ನೂ ಕೈಗೂಡುವ ದಿನಗಳು ಕೂಡಿ ಬಂದಿಲ್ಲ. ಮಹಾತ್ಮಾ ಗಾಂಧೀಜಿ ನಡೆಸಿದ್ದು ದಂಡಿ ಸತ್ಯಾಗ್ರಹ (ದಂಡಿ ಮಾರ್ಚ್‌). ರೈತರು ದಂಡೆಗಾಗಿ ಸತ್ಯಾಗ್ರಹ ನಡೆಸಬೇಕಾಗಿದೆ.

ಬೇಡಿಕೆಯನ್ವಯ ಕುಡಿಯುವ ನೀರು ಒದಗಿಸಲಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಕುರ್ಕಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಅವಕಾಶ ನೀಡಿದರೂ ಗ್ರಾ.ಪಂ. ಅಧ್ಯಕ್ಷರು, ಸಹಿತ ಕುರ್ಕಾಲು ಗ್ರಾಮಾಡಳಿತಕ್ಕೆ ಸೂಕ್ತ ಮಾಹಿತಿಯನ್ನೂ ನೀಡದೇ ಅನ್ಯಾಯವೆಸಗುತ್ತಿದೆ. ಈ ಯೋಜನೆಯಡಿ ಕುರ್ಕಾಲು ಗ್ರಾಮಕ್ಕೆ ಬೇಡಿಕೆಯನ್ವಯ ಕುಡಿಯುವ ನೀರನ್ನು ಒದಗಿಸಲಿ. ಬಳಿಕ ಯೋಜನೆಯನ್ನು ವಿಸ್ತರಿಸಲಿ. –ಬಿಳಿಯಾರು ಮಹೇಶ್‌ ಶೆಟ್ಟಿ, ಅಧ್ಯಕ್ಷರು, ಕುರ್ಕಾಲು ಗ್ರಾಮ ಪಂಚಾಯತ್‌

Advertisement

ಅಣೆಕಟ್ಟು ಶೀಘ್ರ ನಿರ್ಮಾಣವಾದರೆ ಒಳಿತು:  ಉಪ್ಪು ನೀರು ಸಮಸ್ಯೆಯು ರೈತರನ್ನು, ಗ್ರಾಮಸ್ಥರನ್ನು ಹೈರಾಣಾಗಿಸಿತ್ತು. ಇದೀಗ ನೂತನವಾಗಿ ಅನುಷ್ಠಾನಗೊಳ್ಳಲಿರುವ 5 ಕೋಟಿ ರೂ. ವೆಚ್ಚದ ಅಣೆಕಟ್ಟು ನಿರ್ಮಾಣದ ಬಳಿಕ ಉಪ್ಪು ನೀರಿನ ಸಮಸ್ಯೆ ಪರಿಹಾರ ಕಾಣುವ ಭರವಸೆ ಇದೆ. ಕುರ್ಕಾಲು-ಸುಭಾಸ್‌ನಗರ ಜಂಕ್ಷನ್‌ ಬಳಸಿಕೊಂಡು ಮಣಿಪುರ ರಸ್ತೆಗೆ ಸಂಪರ್ಕವನ್ನು ನೀಡುವಂತೆ ಬಸ್‌ ಸಂಚರಿಸುವ ಮೂಲಕ ನಾಗರೀಕರಿಗೆ ಸೇವೆ ನೀಡುವ ಅವಶ್ಯಕತೆ ಇದೆ. – ಶೋಭಾ ಸಾಲ್ಯಾನ್‌, ಮಾಜಿ ಅಧ್ಯಕ್ಷರು, ಕುರ್ಕಾಲು ಗ್ರಾಮ ಪಂಚಾಯತ್‌       

-ವಿಜಯ ಆಚಾರ್ಯ ಉಚ್ಚಿಲ

 

 

Advertisement

Udayavani is now on Telegram. Click here to join our channel and stay updated with the latest news.

Next