Advertisement
ಉಪ್ಪಿನಕುದ್ರುವಿನ ಮಯ್ಯರಕೇರಿ ಯಲ್ಲಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಲು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದರಿಂದ ಈಗ ಮಯ್ಯರಕೇರಿ, ಬೊಬ್ಬರ್ಯ ದೈವಸ್ಥಾನ ಭಾಗದಲ್ಲಿರುವ 60ಕ್ಕೂ ಅಧಿಕ ಮಂದಿ ರೈತರ 30-40 ಎಕರೆ ಗದ್ದೆಗೆ ಉಪ್ಪು ನೀರು ನುಗ್ಗಿದೆ. ಇದರಿಂದ ಈ ಗದ್ದೆಗಳಲ್ಲಿ ಈಗಷ್ಟೇ ಬೆಳೆದ ನೆಲಗಡಲೆ, ಉದ್ದು ಕೃಷಿ ಉಪ್ಪು ನೀರಿನಿಂದ ಹಾನಿಯಾಗಿದೆ.
ಉಪ್ಪಿನಕುದ್ರು ಭಾಗದಲ್ಲಿ ಮುಂಗಾರಿನಲ್ಲಿ ಭತ್ತದ ಕೃಷಿ ಬೆಳೆದರೆ, ಹಿಂಗಾರು ಹಂಗಾಮಿನಲ್ಲಿ ನೆಲಗಡಲೆ, ಉದ್ದಿನಂತಹ ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿನ ರೈತರಿಗೆ ಅನುಕೂಲವಾಗಲೆಂದೆ 10 ವರ್ಷಗಳ ಹಿಂದೆ ಮಯ್ಯರಕೇರಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಆದರೆ ಅದರ ಸಮರ್ಪಕ ನಿರ್ವಹಣೆಯಿಲ್ಲದೆ, ಇಲ್ಲಿನ ರೈತರಿಗೆ ಪ್ರಯೋಜನವಾಗದಂತಾಗಿದೆ. ಇದರಿಂದಾಗಿ ಬಹುತೇಕ ಮಂದಿ ರೈತರು ಕೃಷಿಯಿಂದಲೇ ವಿಮುಖರಾಗಿ, ಗದ್ದೆಗಳನ್ನು ಹಡಿಲು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲಗೆ ಅಳವಡಿಕೆಗೆ ಆಗ್ರಹ
ನಾವು ಕಳೆದ ಹಲವು ದಿನಗಳಿಂದ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಲು ಗ್ರಾ.ಪಂ. ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಪಂಚಾಯತ್‌ನವರು ಹಾಗೂ ಅಧಿಕಾರಿಗಳು ಯಾರದೋ ವಿಚಾರಕ್ಕೆ ಕಟ್ಟು ಬಿದ್ದು ಹಲಗೆ ಅಳವಡಿಸಲು ಮುಂದಾಗುತ್ತಿಲ್ಲ. ಅವರಿಗೆ ಕೃಷಿಕರ ಹಿತ ಬೇಕಾಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಶೀಘ್ರ ಹಲಗೆ ಅಳವಡಿಸಲಿ ಎನ್ನುವುದಾಗಿ ಉಪ್ಪಿನಕುದ್ರು ಪರಿಸರದ ರೈತರು ಆಗ್ರಹಿಸಿದ್ದಾರೆ.
Related Articles
ನಾವು ಮುಂಗಾರಿನಲ್ಲಿ ಭತ್ತ ಬೆಳೆಯುತ್ತೇವೆ. ಹಿಂಗಾರಿನಲ್ಲಿ ನೆಲಗಡಲೆ, ಸ್ವಲ್ಪ ಉದ್ದು ಬೆಳೆಸಿದ್ದೇವೆ. ಆದರೆ ಈಗ ಹಲಗೆ ಅಳವಡಿಸದ ಕಾರಣ, ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಬೆಳೆದ ಕೃಷಿ ಪೂರ್ತಿ ಹಾಳಾಗಿದೆ. ಹೀಗೆ ಆದರೆ ಕೃಷಿ ಮಾಡುವುದಾದರೂ ಹೇಗೆ? ಈ ಬಗ್ಗೆ ಪಂಚಾಯತ್‌ನವರಿಗೆ, ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ.
– ಶೇಖರ್ ಉಪ್ಪಿನಕುದ್ರು, ಕೃಷಿಕರು
Advertisement
ಶೀಘ್ರ ಹಲಗೆ ಅಳವಡಿಕೆಉಪ್ಪಿನಕುದ್ರುವಿನ ರೈತರ ಸಮಸ್ಯೆ ಗಮನಕ್ಕೆ ಬಂದಿದ್ದು, ಮಯ್ಯರಕೇರಿಯ ಕಿಂಡಿ ಅಣೆಕಟ್ಟಿಗೆ ಆದಷ್ಟು ಶೀಘ್ರ ಹಲಗೆ ಅಳವಡಿಸಲಾಗುವುದು. ಈ ಬಗ್ಗೆ ಆದ್ಯತೆ ನೀಡಿ ಪಂಚಾಯತ್‌ನಿಂದ ಕ್ರಮ ವಹಿಸಲಾಗುವುದು.
– ನಾಗೇಂದ್ರ, ಪಿಡಿಒ ತಲ್ಲೂರು ಗ್ರಾ.ಪಂ.