Advertisement

ಉಪ್ಪಿನ ಚಿತ್ರಾಲಯ

12:30 AM Mar 07, 2019 | |

ಅಡುಗೆಯ ಅವಿಭಾಜ್ಯ ಅಂಗ ಉಪ್ಪು. “ಉಪ್ಪಿಗಿಂತ ರುಚಿ ಇಲ್ಲ’ ಎಂಬ ನಾಣ್ಣುಡಿಯೇ ನಮ್ಮಲ್ಲಿದೆ. ಅಡುಗೆಗೆ ಬಳಸುವ ಉಪ್ಪನ್ನು ಸುಂದರ ಕಲಾಕೃತಿ ರಚನೆಗೆ ಬಳಸಿದರೆ? ಅದನ್ನು ಸಾಧ್ಯವಾಗಿಸಿರುವವರು ನಾರ್ವೆಯ ಕಲಾಶಿಕ್ಷಕ ಡಿನೋಟಾಮಿಕ್‌.

Advertisement

ಚಿಕ್ಕವನಿದ್ದಾಗಿನಿಂದಲೂ ಡಿನೋಟಾಮಿಕ್‌ಗೆ ತಾನೊಬ್ಬ ಪ್ರಖ್ಯಾತ ಕಲಾವಿದನಾಗಿ ಗುರುತಿಸಿಕೊಳ್ಳಬೇಕೆಂಬ ಬಯಕೆಯಿತ್ತು. ಅದಕ್ಕಾಗಿ ಹಲವು ಕಸರತ್ತುಗಳನ್ನು ಪಟ್ಟನು. ವಿವಿಧ ಕಲಾಪ್ರಕಾರಗಳನ್ನು ಅವನು ಕಲಿತು ನೈಪುಣ್ಯತೆ ಸಾಧಿಸಿದ್ದರೂ ಅದೇಕೋ ಹೆಸರು ಮಾತ್ರ ಬರಲೇ ಇಲ್ಲ. ಈ ಸಮಯದಲ್ಲಿಯೇ ಆತನಿಗೆ ಏನನ್ನಾದರೂ ಹೊಸತನ್ನು ಪ್ರಯತ್ನಿಸುವ ಮನಸ್ಸಾಯಿತು. ಹಾಗೆ ಮೂಡಿದ ಉಪಾಯವೇ ಉಪ್ಪಿನ ಕಲೆ!

ಡಬ್ಬಿಯೊಳಗೆ ಉಪ್ಪು
ಟೊಮೊಟೋ ಸಾಸ್‌, ಚಟ್ನಿಯನ್ನು ತುಂಬಿಡಬಹುದಾದ ಮೆದುವಾದ ಡಬ್ಬಿಗಳನ್ನು ಸಂಗ್ರಹಿಸಿ ಅದರೊಳಗೆ ಸಾಕಷ್ಟು ನುಣುಪಾದ ಉಪ್ಪಿನ ಪುಡಿಯನ್ನು ತುಂಬಿ ತಾನು ಬಿಡಿಸಬೇಕೆಂದಿರುವ ಚಿತ್ರವನ್ನು ಡಬ್ಬಿಯನ್ನುಅದುಮುವ ಮೂಲಕ ಸರಾಗವಾಗಿ ಬಿಡಿಸಲು ಪ್ರಾರಂಭಿಸಿದನು. ಸಾಕಷ್ಟು ಶ್ರಮ ಹಾಗೂ ಪ್ರಯತ್ನಗಳ ನಂತರ ಅವನು ಒಬ್ಬ ಪರಿಣಿತ ಉಪ್ಪುಕಲಾವಿದನಾಗಿ ರೂಪುಗೊಂಡನು. 

ಮಾಧ್ಯಮ ಬೆಂಬಲ
ಮೊದಲಿಗೆ ತನ್ನ ಹೊಸ ಕಲಾಪ್ರಕಾರದ ಪ್ರಚಾರಕ್ಕಾಗಿ ಡಿನೋ ಬಳಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ ಖಾತೆಗಳನ್ನು. ಎಲ್ಲಾ ಪ್ರಕಾರಗಳಲ್ಲಿಯೂ ಡಿನೋಟಾಮಿಕ್‌ಗೆ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದರು. ಡಿನೋನ ಜನಪ್ರಿಯತೆಯನ್ನುಕಂಡ ಅನೇಕ ದಿನಪತ್ರಿಕೆಗಳು, ದೂರದರ್ಶನ ವಾಹಿನಿಗಳು ಅವನನ್ನು ಸಂದರ್ಶಿಸಿ ಪ್ರಚಾರ ನೀಡಿದವು. ತನ್ನೊಡನೆ ತನ್ನ ಹೊಸ ಕಲಾಪ್ರಕಾರವನ್ನೂ ಉತ್ತುಂಗಕ್ಕೆ ಒಯ್ಯುತ್ತಿರುವ ಡಿನೋಟಾಮಿಕ್‌ ಇನ್ನೂ ಹೆಚ್ಚು ಕಲಾಪ್ರಕಾರಗಳನ್ನು ಅನ್ವೇಷಿಸಿ ಯಶ ಪಡೆಯಲಿ. ಅವನಂಥ ಸಾವಿರಾರು ಮಂದಿಗೆ ಸ್ಫೂರ್ತಿಯಾಗಲಿ.

ಬಲಗೈ ಸೋತಾಗ ಎಡಗೈ
ಸತತ ಅಭ್ಯಾಸದಿಂದ ತನ್ನ ಬಲಗೈನ ಮಣಿಕಟ್ಟು ಆಯಾಸದಿಂದ ನಿಯಂತ್ರಣಕ್ಕೆ ಬಾರದಿದ್ದಾಗ ತನ್ನ ಎಡಗೈಯಿಂದಲೇಅಭ್ಯಾಸ ಮುಂದುವರೆಸಿ ಎರೆಡೂ ಕೈಗಳಿಂದಲೂ ಚಿತ್ರರಚಿಸುವಲ್ಲಿ ಸಫ‌ಲತೆ ಪಡೆದನು.

Advertisement

ಪೆನ್ಸಿಲ್‌ ಕಂಪನಿ ಪ್ರಾಯೋಜಕತ್ವ
ಡಿನೋಟಾಮಿಕ್‌ನ ಜನಪ್ರಿಯತೆ ಕಂಡ ಅತಿ ದೊಡ್ಡ ಪೆನ್ಸಿಲ್‌ ಉತ್ಪಾದನಾ ಕಂಪನಿಯೊಂದು ಅವನಿಗೆ ಪ್ರಾಯೋಜಕತ್ವವನ್ನು ಒದಗಿಸಿ ಹಣಕಾಸಿನ ನೆರವನ್ನು ನೀಡಿತು. ಕಲೆಯನ್ನು ಅವಲಂಬಿಸಿದವರ ಜೀವನ ಹದಗೆಡುತ್ತದೆ ಎಂಬ ಮಾತಿದೆ. ಆದರೆ ನಿಜವಾದ ಕಲೆಗೆ ಯಾವತ್ತೂ ಬೆಲೆ ಇದ್ದೇ ಇರುತ್ತದೆ ಎನ್ನುವುದಕ್ಕೆ ಡಿನೋಟಾಮಿಕ್‌ ಒಳ್ಳೆಯ ಉದಾಹರಣೆ.

ಪ.ನಾ.ಹಳ್ಳಿ ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next