ಮುಂಬಯಿ: ಎನ್ ಸಿಪಿ (ಅಜಿತ್ ಪವರ್) ಬಣದ ನಾಯಕ ಬಾಬಾ ಸಿದ್ದಿಕಿ (Baba Siddique) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಇದರ ಹೊಣೆ ಹೊತ್ತಿಕೊಂಡಿರುವ ಲಾರೆನ್ಸ್ ಬಿಷ್ಣೋಯ್ (Gangster Lawrence Bishnoi) ಗ್ಯಾಂಗ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಸಲ್ಮಾನ್ ಖಾನ್ ಅವರನ್ನು ಬೆಂಬಲಿಸಿದ ಎಲ್ಲರಿಗೂ ಇದೇ ರೀತಿ ಆಗುತ್ತದೆಂದು ಗ್ಯಾಂಗ್‌ನ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಪಾತಕಿ ಲೋಕದಲ್ಲಿ ಹತ್ತಾರು ಅಪರಾಧ ಕೃತ್ಯಗಳನ್ನುವೆಸಗಿರುವ ಬಿಷ್ಣೋಯ್ ಸಲ್ಮಾನ್ ಮೇಲೆ ಸಂಚು ರೂಪಿಸಿರುವುದು ಗೊತ್ತೇ ಇದೆ. ಇದೇ ವರ್ಷ ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿಯನ್ನು ನಡೆಸಿದರ ಹಿಂದೆ ಬಿಷ್ಣೋಯ್ ಗ್ಯಾಂಗ್ ಕೈವಾಡವಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಾಬಾ ಸಿದ್ದಿಕಿ ಹತ್ಯೆ ಬಳಿಕ ತನಿಖೆ ಚುರುಕುಗೊಳಿಸಿದ್ದು, ಲಾರೆನ್ಸ್ ಗ್ಯಾಂಗ್‌ನ ಚಟುವಟಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿ ಬಾಲಿವುಡ್ ನಟರು, ಹಾಸ್ಯನಟ, ರಾಜಕಾರಣಿಗಳು ಸೇರಿದಂತೆ ಇತರರು ಇರುವುದಾಗಿ ʼಇಂಡಿಯಾ ಟುಡೇʼ ವರದಿ ತಿಳಿಸಿದೆ.
ಸಲ್ಮಾನ್ ಖಾನ್: ಬಾಲಿವುಡ್ ನಟ ಲಾರೆನ್ಸ್ ಬಿಷ್ಣೋಯ್ ತಂಡದ ಪ್ರೈಮ್ ಟಾರ್ಗೆಟ್ ಆಗಿದ್ದಾರೆ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್ಗಾಗಿ ಸಲ್ಮಾನ್ ಖಾನ್ (Salman Khan) ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದರು. ಆ ಸಮಯದಲ್ಲಿ ಸಲ್ಮಾನ್ ಖಾನ್ ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯದವರು ಪ್ರಕೃತಿ ಆರಾಧಕರು. ಬಿಷ್ಣೋಯ್ ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಈ ಪ್ರಾಣಿಯನ್ನು ಕೊಲ್ಲುವುದನ್ನು ಅಥವಾ ಮರವನ್ನು ಕಡಿಯುವುದನ್ನು ಬಿಷ್ಣೋಯಿಗಳು ಎಂದಿಗೂ ಸಹಿಸುವುದಿಲ್ಲ.
ಅಂದಿನಿಂದ ಇಂದಿನವರೆಗೆ ಸಲ್ಮಾನ್ ಖಾನ್ ಅವರಿಗೆ ಅನೇಕ ಬಾರಿ ಗ್ಯಾಂಗ್ ಸ್ಟರ್ ಲಾರೆನ್ಸ್ ಇ-ಮೇಲ್ ಮೂಲಕ ಬೆದರಿಕೆಯನ್ನು ಹಾಕುತ್ತಲೇ ಬಂದಿದ್ದ. ಇತ್ತೀಚೆಗೆ ಗುಂಡಿನ ದಾಳಿ ನಡೆಸಿ, ಮತ್ತೊಮ್ಮೆ ಸಲ್ಮಾನ್ ಖಾನ್ ಗೆ ಎಚ್ಚರಿಕೆಯನ್ನು ನೀಡಿದ್ದ. 2022 ಹಾಗೂ 2023 ರ ಅವಧಿಯಲ್ಲಿ ಬಿಷ್ಣೋಯ್ ಹಲವು ಬಾರಿ ಸಲ್ಮಾನ್ ಖಾನ್ ಗೆ ಬೆದರಿಕೆಯನ್ನು ಹಾಕಿದ್ದ.
ಜೀಶನ್ ಸಿದ್ದಿಕಿ:
ಬಾಬಾ ಸಿದ್ದಿಕಿ ಅವರ ಪುತ್ರ, ಶಾಸಕ ಆಗಿರುವ ಜೀಶನ್ ಸಿದ್ದಿಕ್ (Zeeshan Siddique) ಕೂಡ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿದ್ದಾರೆ ಎಂದು ಪೊಲೀಸರ ಮುಂದೆ ಆರೋಪಿಗಳಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ.
ಮುನಾವರ್ ಫಾರುಕಿ: ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುವ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್, ಬಿಗ್ ಬಾಸ್ ವಿನ್ನರ್ ಮುನಾವರ್ ಫಾರುಕಿ (Munawar Faruqui) ಈ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿದ್ದಾರೆ. ಮುನಾವರ್ ಮೇಲೆ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ಸಂಚು ರೂಪಿಸಲಾಗಿತ್ತು. ಆದರೆ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಮುನಾವರ್ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.
ಶಗನ್‌ಪ್ರೀತ್ ಸಿಂಗ್: ಮೃತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮ್ಯಾನೇಜರ್ ಆಗಿದ್ದ ಶಗನ್‌ಪ್ರೀತ್
(Shaganpreet Singh) ಬಿಷ್ಣೋಯ್ ಹಿಟ್ ಲಿಸ್ಟ್ ನಲ್ಲಿದ್ದಾರೆ. ಶಗನ್‌ಪ್ರೀತ್ ಆಗಸ್ಟ್ 7ರ 2021ರಲ್ಲಿ ಮೊಹಾಲಿಯಲ್ಲಿ ಕೊಲ್ಲಲ್ಪಟ್ಟ ಲಾರೆನ್ಸ್ ಆಪ್ತ ವಿಕ್ಕಿ ಮಿದ್ದುಖೇರಾ ಅವರ ಹಂತಕರಿಗೆ ಆಶ್ರಯ ನೀಡಿದ್ದರು ಎನ್ನಲಾಗಿದೆ.
ಕೌಶಲ್ ಚೌಧರಿ: ಕುಖ್ಯಾತ ಬಾಂಬಿಹಾ ಗ್ಯಾಂಗ್‌ನ ಸದಸ್ಯ ಮತ್ತು ಬಿಷ್ಣೋಯ್ ವಿರುದ್ಧ ಗ್ಯಾಂಗ್ ನ ಸದಸ್ಯ ಆಗಿರುವ ಕೌಶಲ್ ಚೌಧರಿ (Kaushal Chaudhary) ಅವರು ಮಿದ್ದುಖೇರಾ ಹಂತಕರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಅವರು ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್ ನಲ್ಲಿದ್ದಾರೆ.
ಅಮಿತ್ ದಾಗರ್: ಕೌಶಲ್ ಚೌಧರಿಯ ಆಪ್ತ ಒಡನಾಡಿಯಾಗಿರುವ ಅಮಿತ್ ದಾಗರ್ (Amit Dagar) ಮಿದ್ದುಖೇರಾ ಹತ್ಯೆಯಲ್ಲಿ ಭಾಗಿಯಾಗಿದ್ದ. ಇದೇ ಕಾರಣದಿಂದ ಆತ ಬಿಷ್ಣೋಯ್ ಲಿಸ್ಟ್ ನಲ್ಲಿದ್ದಾನೆ.