ಚಿತ್ರದುರ್ಗ: ಕಾಂಗ್ರೆಸ್ ನಾಯಕರಾದ ಸಲೀಂ, ಉಗ್ರಪ್ಪ ಅವರಿಗೆ ಈಗ ಜ್ಞಾನೋದಯವಾಗಿದ್ದು, ಭ್ರಷ್ಟಾಚಾರದ ಬಗ್ಗೆ ಇಷ್ಟು ದಿನ ಮುಚ್ಚಿಟ್ಟದ್ದೇಕೆ ಅನ್ನುವುದನ್ನು ಬಿಚ್ಚಿ ಹೇಳಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖೂಬಾ, ಸಲೀಂ ಅವರು ಸತ್ಯಾಸತ್ಯತೆಯನ್ನು ತಡವಾಗಿಯಾದರೂ ಬಾಯಿ ಬಿಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಒಳಜಗಳ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಂಡರೆ ಬೇರೆಯವರಿಗೆ ಆಗುವುದಿಲ್ಲ. ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಕಂಡರೆ ಡಿಕೆಶಿಗೆ ಆಗುವುದಿಲ್ಲ ಎಂದರು.
2013ರಿಂದ 18ರವರೆಗೆ ಅಧಿಕಾರಿಗಳು, ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಗಳು , ರೈತ ರ ಆತ್ಮಹತ್ಯೆಗಳು ನಡೆದಿವೆ. ಯಾರ ಕಾಲದಲ್ಲಿ ಹೆಚ್ಚು ಕೊಲೆ, ಆತ್ಮಹತ್ಯೆ ನಡೆದದ್ದು ಎನ್ನುವುದನ್ನು ಸಿದ್ಧರಾಮಯ್ಯ ನೆನಪಿಸಿಕೊಳ್ಳಲಿ ಎಂದರು.
ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಗೆ ಯಾವ ಬಂಡವಾಳವೂ ಇಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ನೀಡಿಲ್ಲ. ಹಿಂದೂಗಳಿಗೆ ಬೈದರೆ ಮುಸ್ಲಿಮರು ಕಾಂಗ್ರೆಸ್ ಪರ ಎಂಬ ಭ್ರಮೆಯಿಂದ ಸಿದ್ದರಾಮಯ್ಯ ಅವರು ಹೊರ ಬರಬೇಕು ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕ ವಿ.ಎಸ್ .ಉಗ್ರಪ್ಪ ಅವರ ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಅವರು ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಡಿ.ಕೆ. ಶಿವಕುಮಾರ್ ವಿರುದ್ಧವೇ ಭ್ರಷ್ಟಾಚಾರದ ಕುರಿತಾಗಿ ಮಾತನಾಡಿ ತೀವ್ರ ಮುಜುಗರ ತಂದಿಟ್ಟಿದ್ದರು.