Advertisement
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಇದ್ದ ಕೆರೆಗಳ ಪೈಕಿ ಅರ್ಧದಷ್ಟು ಕೆರೆಗಳು ಈಗ ಜೀರ್ಣಗೊಂಡಿವೆ. ಉಳಿದ ಅರ್ಧದಷ್ಟು ಕೆರೆಗಳನ್ನು ಉಳಿಸಿಕೊಳ್ಳಲು ಪಟ್ಟಣ ಪಂಚಾಯತ್ ಮತ್ತು ಜನರು ಇನ್ನಾದರೂ ಮುಂದಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ನಮ್ಮನ್ನು ಕಾಡದಿರದು.
Related Articles
ಕೆರೆಯ ಸುಂದರೀಕರಣ, ಆಧುನೀಕರಣ (ವಾಕಿಂಗ್ ಟ್ರ್ಯಾಕ್ ಇತ್ಯಾದಿ)ದ ಹೆಸರಿನಲ್ಲಿ ಒಟ್ಟೂ ಕೆರೆಗಳ ಅಸ್ತಿತ್ವಕ್ಕಾಗಲೀ ಅಥವಾ ಸುತ್ತಲಿನ ಹಸಿರಿನ ಅಸ್ತಿತ್ವಕ್ಕಾಗಲೀ (ಮರ-ಗಿಡ) ಚ್ಯುತಿ ಬಾರದಂತೆ ಸಂಬಂಧಪಟ್ಟ ಇಲಾಖೆಗಳು, ಪಟ್ಟಣ ಪಂಚಾಯತ್ ಗಮನಹರಿಸಬೇಕಿದೆ. ಕೆರೆ ಅಭಿವೃದ್ಧಿಪಡಿಸುವ ಗ್ರಾಮಸ್ಥ ರಿಗೂ, ಸಂಘ ಸಂಸ್ಥೆಗಳಿಗೂ ಹಸುರಿನ ಮಹತ್ವವನ್ನು ತಿಳಿಸಿ ಕೊಡಬೇಕಿದೆ. ಯಾಕೆಂದರೆ, ಈಗ ಕೆರೆಗಳ ಸುಂದರೀಕರಣ ಎಂದರೆ ಸುತ್ತಲಿನ ಬೃಹತ್ ಮರಗಳನ್ನು ಕಡಿದು, ಇಂಟರ್‌ಲಾಕ್ ಹಾಕುವುದು. ಇಂಥ ಕಾಂಕ್ರೀಟ್ ವನ ನಿರ್ಮಿಸುವ ಅಪಾಯವನ್ನು ತಡೆಯಬೇಕಿದೆ.
Advertisement
ಕುಡಿಯುವ ನೀರಿಗೆ ಬಳಕೆಪ.ಪಂ. ವ್ಯಾಪ್ತಿಯಲ್ಲಿ 417 ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜತೆಗೆ 8.9. ಎಂ.ಸಿ.ಎಫ್.ಟಿ. ನೀರಿನ ಬೇಡಿಕೆಯನ್ನು ಪ.ಪಂ.ನ 8 ಬಾವಿಗಳಿಂದ ಪೂರೈಸಲಾಗುತ್ತಿಲ್ಲ. ಹೀಗಾಗಿ ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಿದರೆ ಬಾವಿಯ ನೀರಿನ ಮಟ್ಟ ಮತ್ತು ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ ಹಾಗೂ ಖಾಸಗಿ ಬಾವಿಗಳಲ್ಲೂ ಜಲಮಟ್ಟ ಹೆಚ್ಚಾಗಲಿದೆ. ಕಂದಾಯ ಇಲಾಖೆಯ ಮೂಲಕ ಸರಕಾರಿ ಕೆರೆಗಳ ಸರ್ವೆ ನಡೆಸಿ ಗುರುತಿಸಬೇಕಿದ್ದು, ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕಿದೆ. ಪ್ರಸ್ತುತ ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನ ಕೆರೆಯನ್ನು ಸ್ಥಳೀಯರು ಒಟ್ಟಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದೇ ಮಾದರಿಯ ಕೆಲಸ ಪ್ರತಿಯೊಂದು ಗ್ರಾಮದಲ್ಲೂ ಆಗಬೇಕಿದೆ ಮತ್ತು ಕೆರೆಗಳ ಅಭಿವೃದ್ಧಿ ಸರಕಾರ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಕಷ್ಟು ಅವಕಾಶಗಳಿದೆ. ಗ್ರಾಮಸ್ಥರ ಸಭೆ ಕರೆದು, ಕೆರೆಗಳ ಉಳಿವಿನ ಬಗ್ಗೆ ಚರ್ಚಿಸಿ ಯೋಜನೆಗಳನ್ನು ಹಾಕಿಕೊಳ್ಳುವ ಇಚ್ಛಾಶಕ್ತಿಯನ್ನು ಆಡಳಿತ ವ್ಯವಸ್ಥೆ ತೋರಬೇಕಿದೆ.