ಕೆ.ಆರ್.ಪೇಟೆ: ಕುರಿಗಳ ರಕ್ಷಣೆಗೆ ತೋಳಗಳನ್ನು ನೇಮಿ ಸಿದಂತಾಗಿದೆ. ಕೃಷಿ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲೇ ರಸಗೊಬ್ಬರ ವರ್ತಕರು ಕಾಳಸಂತೆಯಲ್ಲಿ ಯೂರಿಯಾ ಮತ್ತು ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದರೂ ಕೃಷಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ರಸಗೊಬ್ಬರ ವ್ಯಾಪಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಅಧಿಕಾರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ರೈತ ಮುಖಂಡರು ಕೃಷಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ನಂದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ರೈತ ಮುಖಂಡರಿಂದ ಕೇಳಿ ಬಂದ ಆರೋಪವಿದು.
ಕರ್ನಾಟಕ ರಾಜ್ಯ ರೈತ ಸಂಘವು ತಾಲೂಕಿನ ಹಲವು ಜ್ವ ಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಾಲೂಕು ಆಡಳಿತ ಮತ್ತು ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹೋರಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕು ಆಡಳಿತ ಕಾರ್ಯ ಸೌಧದ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಸತೀಶ್, ಕೃಷಿಅಧಿಕಾರಿ ಶ್ರೀಧರ್, ಭೂ ದಾಖಲೆ ಗಳ ಸಹಾಯಕ ನಿಬಂಧಕ ಸಿದ್ದಯ್ಯ ಅವರ ಸಮಕ್ಷಮದಲ್ಲಿ ನಡೆದ ರೈತ ಮುಖಂಡರ ಸಮಾಲೋಚನಾ ಸಭೆಯಲ್ಲಿ ತಾಲೂಕಿನ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಏಕಾಏಕಿ ಯೂರಿಯಾ ದುಬಾರಿ: ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಒಂದು ಚೀಲ ಯೂರಿಯಾಕ್ಕೆ 290 ರೂ.ಗಳ ಬದಲಿಗೆ 400 ರೂನಿಂದ 600 ರೂ. ಪಡೆಯಲಾಗುತ್ತಿದೆ. ಕೃಷಿ ಅಧಿಕಾರಿಗಳ ಎದುರೇ ರಸಗೊಬ್ಬರ ವ್ಯಾಪಾರಿಗಳು ಕಾಳಸಂತೆಯಲ್ಲಿ ಯೂರಿಯಾ ಮಾರಾಟ ಮಾಡುತ್ತಾ, ರೈತರಿಗೆ ಇಷ್ಟವಿದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಜಾಗ ಖಾಲಿಮಾಡಿ ಎಂದು ಬೆದರಿಕೆ ಹಾಕಿದರೂ ಕೃಷಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಸಹಾಯಕರಾಗಿರುವ ಕೃಷಿ ಅಧಿಕಾರಿ ಶ್ರೀಧರ್, ವರ್ತಕರಿಗೆ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಲು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿಗೆ ನೇರವಾಗಿ ಆರೋಪ ಮಾಡಿದರು.
ಕೋಟ್ಯಂತರ ರೂ. ದುರುಪಯಯೋಗ: ತಾಲೂಕಿನ ಮಾಕವಳ್ಳಿಯಲ್ಲಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು 290 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೂ ಮಾಕವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಒಳಹಾಕಿಕೊಂಡು ವಾರ್ಷಿಕ ಕೇವಲ 10ರಿಂದ 12 ಲಕ್ಷ ರೂ. ಮೌಲ್ಯದ ಆಸ್ತಿತೆರಿಗೆ ಪಾವತಿ ಮಾಡುತ್ತಾ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂಪಾಯಿ ತೆರಿಗೆ ಹಣ ವಂಚಿಸುತ್ತಿದ್ದಾರೆ.’ ಈ ಬಗ್ಗೆ ಕ್ರಮ ಕೈಗೊಂಡು ಸರ್ಕಾರಕ್ಕೆ ಪಾವತಿಸ ಬೇಕಾದ ಆಸ್ತಿ ತೆರಿಗೆಯನ್ನು ಕಾನೂನು ಬದ್ಧವಾಗಿ ತೆಗೆದುಕೊಳ್ಳಬೇಕು ಎಂದು ಪತ್ರ ಬರೆದು ಕಳೆದ ಏಳೆಂಟು ವರ್ಷಗಳಿಂದ ರೈತಮುಖಂಡರು ಹೋರಾಟ ನಡೆಸುತ್ತಿದ್ದರು ಗ್ರಾಪಂ ಯಾವುದೇ ಕ್ರಮ ಕೈಗೊಂ ಡಿಲ್ಲ. ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಕೋಟ್ಯಂತರ ರೂ. ತೆರಿಗೆ ಹಣ ದುರುಪಯೋಗವಾಗಿದೆ. ರೈತಸ್ನೇಹಿಯಾಗಿ ಕೆಲಸ ಮಾಡಬೇಕಾಗಿದ್ದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಹಾರುಬೂದಿ ಸೇರಿದಂತೆ ತ್ಯಾಜ್ಯಯುಕ್ತವಾದ ಮಲಿನವಾಗಿರುವ ನೀರನ್ನು ಹೇಮಾವತಿ ನದಿಗೆ ಹರಿಯ ಬಿಡುವ ಮೂಲಕ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಅಧಿಕಾರಿಗಳಿಂದ ಪಕ್ಷಪಾತ ಧೋರಣೆ: ರೈತ ಹೋರಾಟಗಾರ ಕರೋಟಿತಮ್ಮಯ್ಯ ಅವರನ್ನು ಕಾರ್ಖಾನೆಯ ಒಳಗೆ ಪರಿಶೀಲನೆ ನಡೆಸಲು ಬಿಡದೇ, ಆಡಳಿತ ಮಂಡಳಿಯು ಅವಮಾನಿಸಿದ್ದಲ್ಲದೆ ತಮ್ಮಯ್ಯ ಅವರನ್ನು ಹತ್ಯೆ ಮಾಡಿಸಲು ಸಂಚು ನಡೆಸಿದೆ, ಈಬಗ್ಗೆ ತನಿಖೆಯಾಗಬೇಕು, ಚಳುವಳಿಗಾರರಿಗೆ ರಾಜ್ಯ ಸರ್ಕಾರವು ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ ತಾಲೂಕು ರೈತ ಸಂಘದ ಅಧ್ಯಕ್ಷ ಪುಟ್ಟೇಗೌಡ ಹಾಗೂ ಮುದುಗೆರೆರಾಜೇಗೌಡ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಶ್ರೀಮಂತ ವರ್ಗಕ್ಕೆ ಸೇರಿದೆ ಎಂದು ಅಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸಬಾರದು. ರೈತರ ಸಮಾಲೋಚನಾ ಸಭೆಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್ ಅವರ ಬದಲಿಗೆ ಸಭೆಯಲ್ಲಿ ಭಾಗವಹಿಸಿದ್ದ ಪ್ರಥಮ ದರ್ಜೆ ಸಹಾಯಕ ಹಾಗೂ ಕಸಬಾ ಹೋಬಳಿಯ ತೋಟಗಾರಿಕೆ ಅಧಿಕಾರಿ ಮಾಹಿತಿ ನೀಡಲು ತಡಬಡಿಸಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಸಭೆಯಿಂದ ಹೊರಗೆ ಕಳಿಸಿದ ಉಪವಿಭಾಗಾಧಿಕಾರಿಗಳು ಮುಂದಿನ ಸಭೆಗೆ ತೋಟಗಾರಿಕಾ ಸಹಾಯಕ ನಿರ್ದೇಶಕರೇ ಹಾಜರಾಗುವಂತೆ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಸಿಂದಘಟ್ಟ ಮುದ್ದುಕುಮಾರ್, ನಗರೂರು ಕುಮಾರ್, ಬೂಕನಕೆರೆ ನಾಗರಾಜು, ಕರೋಟಿ ತಮ್ಮಯ್ಯ, ಮರುವನಹಳ್ಳಿ ಶಂಕರ್, ಆಹಾರ ನಾಗರಿಕ ಸರಬರಾಜು ಇಲಾಖೆಯ ಶಿರಸ್ತೆದಾರ್ ಪೂರ್ಣಿಮಾ ಇತರರು ಇದ್ದರು.
ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಎಸಿ: ರೈತರ ಕುಂದುಕೊರತೆಗಳನ್ನು ಆಲಿಸಿದ ಉಪವಿಭಾಗಾಧಿಕಾರಿ ನಂದೀಶ್ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಸದ್ಯದಲ್ಲಿಯೇ ಕಾರ್ಖಾನೆಯ ಆವರಣದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿ ವಾಸ್ತವ ಅಂಶವನ್ನು ಹೋರಾಟಗಾರರ ಮುಂದೆ ಬಿಚ್ಚಿಟ್ಟು, ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪರಿಸರ ವಿರೋಧಿಯಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನಂದೀಶ್ ಭರವಸೆ ನೀಡಿದರು.