Advertisement
ಆನ್‌ಲೈನ್ ಮೂಲಕ ಮಧ್ಯ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಚೆನ್ನೈ ಮೂಲದ ಎಚ್‌ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ವಿ. ಶ್ರೀಶಾನಂದ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.
Related Articles
Advertisement
ಮದ್ಯಪಾನ ಮಾನವನ ಆರೋಗ್ಯಕ್ಕೆ ಹಾನಿಕರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕುಟುಂಬಗಳು ಹಾಗೂ ಸಮಾಜಕ್ಕೆ ಕಳಂಕವಾಗಿದೆ. ಆನ್‌ಲೈನ್ ಮಾರಾಟದಿಂದ ಅಪ್ರಾಪ್ತರು ಸೇರಿ ಮದ್ಯಪಾನದ ಚಟಕ್ಕೆ ದಾಸರಾಗುತ್ತಿರುವ ಯುವಪೀಳಿಗೆಯ ನಿಯಂತ್ರಣ ಸಾಧ್ಯವಿಲ್ಲ. ಆನ್‌ಲೈನ್‌ನಲ್ಲಿ ಮದ್ಯ ಖರೀದಿಸುವವರ ವಯಸ್ಸು ಗುರುತಿಸುವುದು ಹಾಗೂ ವಹಿವಾಟಿನ ಮೇಲ್ವಿಚಾರಣೆ ನಡೆಸುವುದು ಕಷ್ಟವಾಗಲಿದೆ ಎಂದು ಹೈಕೋರ್ಟ್‌ನ ಏಕಸದಸ್ಯಪೀಠ 2019ರ ಸೆ.18ರಂದು ತೀರ್ಪು ನೀಡಿತ್ತು.
ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಶೋಕಾಸ್ ನೋಟಿಸ್ ನೀಡದೆ ಏಕಾಏಕಿ ಅನುಮತಿ ಪತ್ರ ವಾಪಸ್ ಪಡೆದಿರುವುದು ಕಾನೂನು ಬಾಹಿರವಾಗಿದೆ. ನಮ್ಮ ವಹಿವಾಟಿನಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿರುವುದು ಸಂವಿಧಾನದ ಕಲಂ 14 ಮತ್ತು 19 (1) (ಜಿ) ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರ ಸಂಸ್ಥೆ ವಾದಿಸಿತ್ತು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಂಸ್ಥೆಗೆ ಡೈರಿ ಉತ್ಪನ್ನಗಳನ್ನು ಹೊರತುಪಡಿಸಿ ಆನ್‌ಲೈನ್ ಮೂಲಕ ಸಿದ್ಧ ಆಹಾರ ಪದಾರ್ಥಗಳು ಮತ್ತು ಪಾನೀಯಗಳನ್ನು ಮಾರಾಟ ಮಾಡಲು ಸರ್ಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಅನುಮತಿ ನೀಡಿತ್ತು. ಈ ಮಧ್ಯೆ 2017ರ ಆ. 1ರಂದು ಅಬಕಾರಿ ಇಲಾಖೆ ಆಯುಕ್ತರು ಅರ್ಜಿದಾರ ಸಂಸ್ಥೆಗೆ ಬಿಯರ್, ವೈನ್ ಸೇರಿ ಭಾರತ ಮತ್ತು ವಿದೇಶಗಳ ಮದ್ಯ ಮಾರಾಟ ನಡೆಸಲು ಅನುಮತಿ ಪತ್ರ ನೀಡಿದ್ದರು. ಬಳಿಕ ಅನುಮತಿ ವಾಪಸ್ ಪಡೆಯಲಾಗಿತ್ತು. ಆನ್‌ಲೈನ್ ಮದ್ಯ ಮಾರಾಟ ಸ್ಥಗಿತಗೊಳಿಸಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಏಕಸದಸ್ಯಪೀಠ 2019ರಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಿ, ಅಬಕಾರಿ ಇಲಾಖೆ ನಿರ್ಧಾರವನ್ನು ಎತ್ತಿಹಿಡಿದಿತ್ತು . ಹಾಗಾಗಿ ಕಂಪನಿ ಮೇಲ್ಮನವಿಯನ್ನು ಸಲ್ಲಿಸಿತ್ತು.