ಬೆಂಗಳೂರು: ಸಂತಾನಹರಣ ಶಸ್ತ್ರಚಿಕಿತ್ಸೆಗೂ ಸಾರಿಗೆ ನೌಕರರ ವೇತನ ಬಡ್ತಿಗೂ ಸಂಬಂಧ ಇದೆಯೇ?
– ಹೌದು, ನಿಕಟ ಸಂಬಂಧ ಇದೆ. ಅಷ್ಟೇ ಅಲ್ಲ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸಾರಿಗೆ ನೌಕರರು ವೇತನ ಬಡ್ತಿಯನ್ನೂ ಪಡೆಯಲಿದ್ದಾರೆ. ಇಂತಹದ್ದೊಂದು ‘ಆಫರ್’ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನೌಕರರ ಮುಂದಿಟ್ಟಿದೆ.
ಒಂದು ಅಥವಾ ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸಂಸ್ಥೆಯ ನೌಕರರು ಅಥವಾ ಅವರ ಪತಿ/ ಪತ್ನಿಯು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ, ಹುದ್ದೆಯ ವೇತನ ಬಡ್ತಿ ದೊರೆಯಲಿದೆ. ಅಲ್ಲದೆ, ಈ ವೇತನ ಬಡ್ತಿಯನ್ನು ವೇತನ ಶ್ರೇಣಿಯ ವೈಯಕ್ತಿಕ ವೇತನವನ್ನಾಗಿ ಪರಿಗಣಿಸುವುದರ ಜತೆಗೆ ಪೂರ್ಣ ಸೇವಾವಧಿವರೆಗೂ ನೀಡಲಾಗುತ್ತದೆ. ಅಂದರೆ ಮೂಲ ವೇತನದಲ್ಲಿ ಇದು ಸೇರ್ಪಡೆ ಆಗುವುದಿಲ್ಲ. ಈ ಸಂಬಂಧ ಕೆಎಸ್‌ಆರ್‌ಟಿಸಿಯು ಸುತ್ತೋಲೆ ಹೊರಡಿಸಿದೆ.
ಕುಟುಂಬ ಯೋಜನೆ ಅಡಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿರುವ ಕುರಿತು ನೀಡುವ ಬಡ್ತಿಯನ್ನು ‘ವಿಶೇಷ ವೇತನ ಬಡ್ತಿ’ ಎಂದು ಪರಿಗಣಿಸಲಾಗುವುದು. ಸೌಲಭ್ಯಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಲಾದ ದಿನಾಂಕದಿಂದ ಎರಡು ವರ್ಷದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಇಲ್ಲವಾದರೆ, ವಿಶೇಷ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ ಎಂದೂ ಸುತ್ತೋಲೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ.
ಈ ಮೊದಲೇ ಇತ್ತು?: ಈ ಮೊದಲೇ ವಿಶೇಷ ವೇತನ ಬಡ್ತಿ ಸೌಲಭ್ಯ ಇತ್ತು. ಆದರೆ, ಅದಕ್ಕೆ ಅವಧಿ ನಿಗದಿಪಡಿಸಿರಲಿಲ್ಲ. ಹಾಗಾಗಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ದಿನದಿಂದ ಏಳೆಂಟು ವರ್ಷಗಳ ನಂತರವೂ ಈ ಸಂಬಂಧ ಅರ್ಜಿಗಳು ಸಲ್ಲಿಕೆ ಆಗುತ್ತಿದ್ದವು. ಈಚೆಗೆ ನಡೆದ ನಿಗಮದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.