Advertisement

ಬೆಲೆ ಏರಿದ್ರೂ ಕಾರ್ಮಿಕರ ದಿನಗೂಲಿ ಏರಿಲ್ಲ

11:57 AM Nov 25, 2021 | Team Udayavani |

ಶಹಾಬಾದ: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ, ಕೂಲಿ ಕಾರ್ಮಿಕರ ದಿನಗೂಲಿ ಹೆಚ್ಚಳವಾಗಿಲ್ಲ. ಇದರಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಶನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.

Advertisement

ನಗರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಶನ್‌ ಕಟ್ಟಡ ಕಾರ್ಮಿಕರ ಮೂರನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್‌ ವೇಳೆ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು. ಈ ಕುರಿತು ಯಾವ ಸರ್ಕಾರವು ಸರಿಯಾದ ನೆರವು ನೀಡಲಿಲ್ಲ. ಕಲ್ಯಾಣ ಮಂಡಳಿ ಕೆಲ ಸೌಲಭ್ಯಗಳನ್ನು ನೀಡಿದರೂ ಸಕಾಲಕ್ಕೆ ಕಾರ್ಮಿಕರಿಗೆ ತಲುಪಲೇ ಇಲ್ಲ. ಕಾರ್ಮಿಕರಿಗೆ ನೀಡಲಾದ ರೇಷನ್‌ ಕಿಟ್‌ನಲ್ಲೂ ಕೋಟ್ಯಂತರ ರೂ.ಗಳ ಅವ್ಯವಹಾರವಾಗಿದೆ ಎಂದು ದೂರಿದರು.

ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಕಾರ್ಮಿಕ ಸಂಘಗಳ ಜತೆ ಕಾರ್ಮಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದಾರೆ. ಇದರಿಂದಾಗಿ ಸಾವಿರಾರು ಕಾರ್ಮಿಕರು ಹಸಿವಿನ ದವಡೆಯಿಂದ ಪಾರಾಗಿದ್ದಾರೆ. ಇದು ಅಭಿನಂದನಾರ್ಹ ಕೆಲಸ. ಆದರೆ ಕೊರೊನಾ ಅಲೆಗಳಲ್ಲಿ ನಿರುದ್ಯೋಗಿಗಳಾಗಿರುವ ಲಕ್ಷಾಂತರ ಕಾರ್ಮಿಕರಿಗೆ ಸರ್ಕಾರ ಉದ್ಯೋಗ ಭದ್ರತೆ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ಬಹುತೇಕ ದುಡಿಯುವ ವರ್ಗದ ಕಾರ್ಮಿಕರಿಗೆ ಕಾರ್ಮಿಕ ಗುರುತಿನ ಚೀಟಿ ಇಲ್ಲ. ಪರಿಣಾಮ ಕಾರ್ಮಿಕರು ಇಲಾಖೆ ನೀಡುವ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆದರೆ ಜಮೀನು ಹೊಂದಿದ ವ್ಯಕ್ತಿಗಳಿಗೆ ಕಾರ್ಮಿಕರ ಗುರುತಿನ ಚೀಟಿ ನೀಡಲಾಗಿದೆ. ಆದ್ದರಿಂದ ಕೂಡಲೇ ನಕಲಿ ಚೀಟಿಗಳನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

Advertisement

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಯ್ಯಸ್ವಾಮಿ, ಕೆಪಿಆರ್‌ಎಸ್‌ ಚಿತ್ತಾಪುರ ತಾಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ, ಸಿಐಟಿಯು ತಾಲೂಕು ಅಧ್ಯಕ್ಷೆ ಶೇಖಮ್ಮ ಕುರಿ, ಯುವ ಸಾಹಿತಿ ರವಿ ಬೆಳಮಗಿ, ದಲಿತ ಮುಖಂಡ ಶಂಕರ ಜಾನೆ ಮಾತನಾಡಿದರು. ನಾಗಪ್ಪ ರಾಯಚೂರುಕರ್‌ ನಿರೂಪಿಸಿದರು, ಭೀಮಶ್ಯಾ ಹಳ್ಳಿ, ರಾಮು ಜಾಧವ, ಅರ್ಜುನ್‌ ನಾಟಿಕಾರ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next