Advertisement

ಕಾಡಾನೆ ಸೆರೆಗೆ ಸಕೆ‹ಬೈಲಲ್ಲಿ ಗಜಪಡೆಗೆ ತರಬೇತಿ

06:00 AM Aug 12, 2018 | |

ಶಿವಮೊಗ್ಗ: ಆನೆ ಪಳಗಿಸೋದು ಸುಲಭದ ಮಾತಲ್ಲ. ಅದರಲ್ಲೂ ಮದವೇರಿದ ಆನೆ ನಿಭಾಯಿಸೋದು ಇನ್ನೂ ಕಷ್ಟ. ಇಂಥದ್ದರಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಎದುರಾದಾಗ ನೆನಪಾಗೋದು ಅಭಿಮನ್ಯು (ಎಕೆ 47) ಮತ್ತು ತಂಡ. ಆದರೀಗ ಈ ಸಾಹಸಕ್ಕಾಗಿ ಮತ್ತೂಂದು ತಂಡ ತರಬೇತಿಗೊಳಿಸಲಾಗುತ್ತಿದೆ. ಶಿವಮೊಗ್ಗದ ಸಕ್ರೆಬೈಲು ಬಿಡಾರದಲ್ಲಿ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ!

Advertisement

ಮೈಸೂರು ದಸರಾ ಅಂಬಾರಿ ಹೊರುವ ಅಭಿಮನ್ಯು ಆನೆ ಹಿಡಿಯೋದಷ್ಟೇ ಅಲ್ಲ, ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲೂ ಎಕ್ಸ್‌ಪರ್ಟ್‌. ಹೀಗಾಗಿ ಈ ಕಾರ್ಯಕ್ಕೆ ಅಭಿಮನ್ಯು ನೇತೃತ್ವದ ತಂಡ ರೆಡಿಯಾಗಿರುತ್ತೆ. ಮೈಸೂರು, ಹಾಸನ, ತುಮಕೂರು, ಕೊಡಗು, ಚಾಮರಾಜ ನಗರದಲ್ಲಷ್ಟೇ ಹೆಚ್ಚಾಗಿದ್ದ ಆನೆಗಳ ಉಪಟಳ ಈಗೀಗ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಹೆಚ್ಚಾಗಿದೆ. ಜತೆಗೆ ಆಗುಂಬೆಯಲ್ಲೂ ಒಂಟಿ ಸಲಗದ ಹಾವಳಿ ಈಚೆಗೆ ಜಾಸ್ತಿಯಾಗಿದ್ದು, ಬೆಳೆ ನಾಶಕ್ಕೆ ಕಾರಣವಾಗಿದೆ. ಹೀಗಾಗಿ, ಅಭಿಮನ್ಯು ತಂಡವನ್ನೇ ಅವಲಂಬಿಸಬೇಕಾದ ಸ್ಥಿತಿ ಇರಬಾರದೆನ್ನುವ ಕಾರಣಕ್ಕಾಗಿ ಇನ್ನೊಂದು ತಂಡಕ್ಕೆ ತರಬೇತಿ ನೀಡಲಾಗುತ್ತಿದೆ.

9 ಆನೆಗಳಿಗೆ ತರಬೇತಿ
ಸಕ್ರೆಬೈಲಿನಲ್ಲಿ ಒಟ್ಟು 11 ಹೆಣ್ಣಾನೆ, 10 ಗಂಡಾನೆಗಳಿವೆ. ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ನುರಿತವರಿಂದ ಸಕ್ರೆಬೈಲು ಆನೆ ಬಿಡಾರದಲ್ಲಿರುವ 9 ಆನೆಗಳಿಗೆ ತರಬೇತಿ ಕೊಡಿಸುತ್ತಿದೆ.

ಸಾಮರ್ಥ್ಯ, ತರಬೇತಿ?
– ಕಾಡಾನೆಗಳನ್ನು ಹಿಡಿಯುವ ವೇಳೆ ಸೊಂಡಿಲು, ಕೋರೆಗಳಿಂದ ತಿವಿದು ನಿಲ್ಲಿಸುವ ಧೈರ್ಯ ತುಂಬುವುದು.
– ಕಾಲಿನಲ್ಲಿ ಹಗ್ಗವನ್ನು ಅದುಮಿ ಹಿಡಿಯುವ, ಎಳೆದೊಯ್ಯುವಂತೆ ತರಬೇತಿ ನೀಡಿ, ಶಕ್ತಿ ಬರಿಸುವುದು.
– ಮಾವುತ ಹೇಳುವಂತೆ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ತರಬೇತಿಗೊಳಿಸುವುದು.
– ಅಭಿಮನ್ಯುಗಿರುವ ಸ್ಪಂದಿಸುವ ಸಾಮಥ್ಯವನ್ನು ಉಳಿದ ಆನೆಗಳಿಗೂ ನೀಡುವುದು.

ಯಾರ್ಯಾರಿಗೆ ತರಬೇತಿ?
ಸಾಗರ್‌, ಮಾಲೆ, ಅರ್ಜುನ, ಗಂಗೆ, ಗೀತಾ, ನೇತ್ರ, ನಾಗಣ್ಣ, ಬಾಲಣ್ಣ ಹೆಸರಿನ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಸಾಗರ್‌ ಈಗಾಗಲೇ ತರಬೇತಿ ಪಡೆದಿದ್ದಾನೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿಲ್ಲ. ಶಿವಮೊಗ್ಗದಲ್ಲಿ ನಡೆಯುವ ಜಂಬೂ ಸವಾರಿಗೆ ಬಳಸಲಾಗುತ್ತಿದೆ.400ಕೆ.ಜಿ. ಬೆಳ್ಳಿ ಅಂಬಾರಿ ಸೇರಿ ಸಾವಿರ ಕೆ.ಜಿ.ವರೆಗೂ ತೂಕ ಹೊರುವ ಶಕ್ತಿ ಸಾಗರ್‌ಗೆ ಇದೆ. ತರಬೇತಿ ನೀಡಿದರೆ ಮೈಸೂರು ಅಂಬಾರಿ ಹೊರಲೂಬಹುದು ಎನ್ನುತ್ತಾರೆ ಅಧಿಕಾರಿಗಳು.

Advertisement

ಅಭಿಮನ್ಯು ವಿಶೇಷತೆ
ರಾಜ್ಯದಲ್ಲಿ ಪ್ರಸ್ತುತ ದುಬಾರೆ, ಮತ್ತಿಗೋಡು, ಬಂಡೀಪುರದಲ್ಲಿ ಅಭಿಮನ್ಯು, ಅರ್ಜುನ, ಹರ್ಷ, ಕೃಷ್ಣ, ಭೀಮ, ಬಲರಾಮ, ದ್ರೋಣ, ಗೋಪಾಲಸ್ವಾಮಿ ಆನೆಗಳು ಮಾತ್ರ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಅಭಿಮನ್ಯು ಮಾತ್ರ 100ಕ್ಕೂ ಹೆಚ್ಚು ಕಾಡಾನೆ, 10ಕ್ಕೂ ಹೆಚ್ಚು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾನೆ.

ನಮಗಿಂತ ಸೂಕ್ಷ್ಮಜೀವಿಗಳು ಇವು. ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಸ್ಪಂದಿಸಿದ ಆನೆಗಳನ್ನು ಮುಂದಿನ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ.
– ಶಿವಕುಮಾರ್‌, ಆರ್‌ಎಫ್‌ಒ (ವನ್ಯಜೀವಿ) ಸಕ್ರೆಬೈಲು

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next