ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಿಂದ ಗುರುವಾರ ಎರಡು ಆನೆಗಳನ್ನು ಮಧ್ಯಪ್ರದೇಶದ ಕಾನ್ಹಾ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು. ನಾಲ್ಕು ಆನೆಗಳನ್ನು ಕಳುಹಿಸಲು ಈ ಹಿಂದೆ ಬೇಡಿಕೆ ಸಲ್ಲಿಸಲಾಗಿತ್ತು. ಕೊನೆ ಗಳಿಗೆಯಲ್ಲಿ ಎರಡು ಆನೆಗಳನ್ನು ಮಾತ್ರ ಕರೆದುಕೊಂಡು ಹೋಗುತ್ತಿದ್ದಾರೆ.
26 ವರ್ಷದ ರವಿ ಹಾಗೂ 7 ವರ್ಷದ ಶಿವ ಆನೆಗಳನ್ನು ಲಾರಿಗಳಲ್ಲಿ ಮಧ್ಯಪ್ರದೇಶದತ್ತ ಕೊಂಡೊಯ್ಯಲಾಯಿತು. 37 ವರ್ಷದ ಮಣಿಕಂಠ ಹಾಗೂ 36 ವರ್ಷದ ಬೆಂಗಳೂರು ಗಣೇಶ ಆನೆಗಳನ್ನು ಕೊನೆ ಗಳಿಗೆಯಲ್ಲಿ ಕೈಬಿಡಲಾಗಿದೆ. ಇವೆರಡು ಆನೆಗಳು ಉಗ್ರ ಸ್ವಭಾವದಾಗಿದ್ದು ಈಗಾಗಲೇ 35, 36 ವರ್ಷ ಆಗಿರುವುದರಿಂದ ಪಳಗಿಸುವುದು ಕಷ್ಟ ಎಂಬ ಕಾರಣಕ್ಕೆ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೆ ಮೂರು ಆನೆಗಳು ಬೇಕಾಗಿದ್ದು ಒಂದೂವರೆ ತಿಂಗಳಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಒಟ್ಟು 14 ಆನೆಗಳನ್ನು ಕರ್ನಾಟಕದ ವಿವಿಧ ಬಿಡಾರಗಳಿಂದ ಕೊಂಡೊಯ್ಯಲು ಮಧ್ಯಪ್ರದೇಶ ಸರಕಾರ ಅನುಮತಿ ಪಡೆದಿದೆ. ಕಾನ್ಹಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದು ಈ ಆನೆಗಳನ್ನು ಗಸ್ತು ತಿರುಗಲು ಬಳಸಲಾಗುತ್ತದೆ.