Advertisement

Sakaleshpur politics: ಸಕಲೇಶಪುರ: ನಿಂತ ನೀರಾದ ರಾಜಕೀಯ

12:59 PM Sep 07, 2023 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ, ಜೆಡಿಎಸ್‌ ನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರುಗಳಿದ್ದಾರೆ. ಆದರೆ ಕೇಂದ್ರ, ರಾಜ್ಯ ಹಾಗೂ ಸ್ಥಳೀಯವಾಗಿ ಪಕ್ಷ ಅಧಿಕಾರದಲ್ಲಿಲ್ಲ. ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರದಲ್ಲಿದೆ, ಆದರೆ ಸ್ಥಳೀಯವಾಗಿ ಯಾವುದೇ ದೊಡ್ಡ ಅಧಿಕಾರವಿಲ್ಲದಿರುವುದರಿಂದ ಕ್ಷೇತ್ರದಲ್ಲಿ ರಾಜಕೀಯ ನಿಂತ ನೀರಾಗಿದ್ದು, ಅಧಿಕಾರದ ಮೇಲುಗೈಗಾಗಿ ಮೂರು ಪಕ್ಷಗಳ ಮುಖಂಡರು ಪರದಾಡುತ್ತಿದ್ದಾರೆ.

Advertisement

ಚಿತ್ರಣವೇ ಬದಲು: ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 19 ವರ್ಷಗಳ ಕಾಲ ನಿರಂತರವಾಗಿ ಜೆಡಿಎಸ್‌ ಅಧಿಕಾರದಲ್ಲಿದ್ದರಿಂದ ತಾಲೂಕಿನಲ್ಲಿ ಜೆಡಿಎಸ್‌ ಕಾರ್ಯಕರ್ತರದ್ದೇ ಹವಾವಾಗಿತ್ತು. ಆದರೆ, 2023ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಸ್ಥಳೀಯ ಸಾಮಾನ್ಯ ಬಿಜೆಪಿ ಕಾರ್ಯಕರ್ತ ಸಿಮೆಂಟ್‌ ಮಂಜು ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿದೆ. ಯಾವುದೇ ಸಣ್ಣಪುಟ್ಟ ಕಾರ್ಯಕ್ರಮವಿರಲಿ ಜೆಡಿಎಸ್‌ ಶಾಸಕರ ಜೊತೆ ಮುಂಚೂಣಿಯಲ್ಲಿರುತ್ತಿದ್ದ ಜೆಡಿಎಸ್‌ ಮುಖಂಡರು ಅನಿವಾರ್ಯವಾಗಿ ದೂರ ಉಳಿಯುವಂತಾಯಿತು. ಸಿಮೆಂಟ್‌ ಮಂಜು ಗೆಲುವನ್ನು ಜೆಡಿಎಸ್‌ ಮುಖಂಡರು ಇನ್ನೂ ಅರಗಿಸಿ ಕೊಳ್ಳಲು ಆಗಿಲ್ಲ, ಇದಲ್ಲದೇ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಕನಸನ್ನು ಹೊಂದಿದ್ದ ಜೆಡಿಎಸ್‌ ಮುಖಂಡ ರಿಗೆ ರಾಜ್ಯದಲ್ಲೂ ಸಹ ಪಕ್ಷ ಅಧಿಕಾರಕ್ಕೇರದಿರುವುದರಿಂದ ಭಾರೀ ನಿರಾಶೆಯಾಗಿದೆ.

ಅಡ್ಡಗಾಲು: ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸಹ ಜಿಲ್ಲೆಯಲ್ಲಿ ಬಿಜೆಪಿ ಸಂಸದರು ಇಲ್ಲದಿರುವುದು ಶಾಸಕರಿಗೆ ಅನಾನುಕೂಲವಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿರುವುದರಿಂದ ಕೆಲವೊಂದು ಅಭಿವೃದ್ಧಿ ಕೆಲಸಗಳಿಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಉಸ್ತುವಾರಿ ಸಚಿವರ ಮುಖಾಂತರ ಅಡ್ಡಗಾಲು ಹಾಕುತ್ತಿದ್ದಾರೆ. ಕಾಂಗ್ರೆಸ್‌ಗೆ ಹಿನ್ನಡೆ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದರೂ ಸಹ ಸ್ಥಳೀಯವಾಗಿ ಕಾಂಗ್ರೆಸ್‌ ಅಭ್ಯರ್ಥಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡಿದ್ದರಿಂದ ಕೈ ಮುಖಂಡರು ಸಹ ಒಂದು ರೀತಿಯಲ್ಲಿ ಅತಂತ್ರರಾಗಿದ್ದಾರೆ. ಪರಾಜಿತ ಅಭ್ಯರ್ಥಿ ಮುರುಳಿಮೋಹನ್‌ ಶಾಸಕರ ರೀತಿಯಲ್ಲೇ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಆದರೆ ಸ್ವಪಕ್ಷೀಯ ಹಲವು ಮುಖಂಡರು, ಕಾರ್ಯಕರ್ತರು ಅವರನ್ನು ಒಪ್ಪದಿರುವುದು ಕಾಂಗ್ರೆಸ್‌ನ ರಾಜಕೀಯ ಹಿನ್ನೆಡೆಗೆ ಕಾರಣವಾಗಿದೆ.

ಪಿಎಲ್‌ಡಿ ಬ್ಯಾಂಕ್‌ ಹಾಗೂ ಕೆಲವೇ ಕೆಲವು ಗ್ರಾಪಂಗಳಲ್ಲಿ ಮಾತ್ರ ಕಾಂಗ್ರೆಸ್‌ ಬೆಂಬಲಿತರು ಅಧಿಕಾರದಲ್ಲಿದ್ದು, ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಸಹ ಸ್ಥಳೀಯವಾಗಿ ಅಧಿಕಾರದಲ್ಲಿರದ ಕಾರಣ ಪಕ್ಷದ ಮುಖಂಡರು, ಕಾರ್ಯಕರ್ತರು ನಿರಾಶೆಯಲ್ಲಿದ್ದಾರೆ. ಒಟ್ಟಾರೆ ಮೂರು ಪ್ರಮುಖ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಂದು ರೀತಿಯಲ್ಲಿ ಗೊಂದಲದಲ್ಲಿದ್ದಾರೆ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಯಾವ ಪಕ್ಷದ ಬೆಂಬಲಿತರು ಹೆಚ್ಚು ಸ್ಥಾನ ಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಜೆಡಿಎಸ್‌ ಕಾರ್ಯಕರ್ತರಿಗೆ ಆತಂಕ: ಪಟ್ಟಣದ ಪುರಸಭೆ ಹಾಗೂ ಕೆಲವು ಗ್ರಾಪಂಗಳಲ್ಲಿ ಮಾತ್ರ ಜೆಡಿಎಸ್‌ ಅಧಿಕಾರದಲ್ಲಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಸಂಸದರಾಗಿದ್ದ ಪ್ರಜ್ವಲ್‌ ರೇವಣ್ಣ ತಮ್ಮ ತಂದೆ ಎಚ್‌ .ಡಿ.ರೇವಣ್ಣರೊಡನೆ ತಾಲೂಕಿಗೆ ಆಗಮಿಸಿ ಕಾರ್ಯಕರ್ತರ ಸಭೆ ನಡೆಸಿ ಜೆಡಿಎಸ್‌ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ದರು. ಇದೀಗ ಸಂಸದ ಪ್ರಜ್ವಲ್‌ ರೇವಣ್ಣ ಸಹ ಅನರ್ಹರಾಗಿರುವುದು ಜೆಡಿಎಸ್‌ ಕಾರ್ಯಕರ್ತರಿಗೆ ಆತಂಕ ತಂದಿದೆ.

Advertisement

ಅನುದಾನ ತರಲು ಹೆಣಗಾಟ: ತಮಗೆ ಬೇಕಾದ ಅಧಿಕಾರಿಗಳನ್ನು ಶಾಸಕರಿಗೆ ಹಾಕಿಸಿಕೊಳ್ಳಲು ಪರದಾಡುವಂತಾಗಿದೆ. ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಸಹ ಕ್ಷೇತ್ರದ ಅಭಿವೃದ್ಧಿಗೆ ಬರುವುದು ಅನುಮಾನವಾಗಿದ್ದು, ಇದರಿಂದ ಶಾಸಕರು ಅನುದಾನ ತರಲು ಶ್ರಮ ಹಾಕಬೇಕಾಗಿದೆ. ಬಿಜೆಪಿಯ ಎರಡನೇ ಹಂತದ ಮುಖಂಡರು ಅಷ್ಟಾಗಿ ಪ್ರವರ್ಧಮಾನಕ್ಕೆ ಬರದಿರುವುದು ಸಹ ರಾಜಕೀಯ ನಿಂತ ನೀರಾಗಲು ಕಾರಣವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರಬಹುದು. ಆದರೆ ಸ್ಥಳೀಯವಾಗಿ ಬಿಜೆಪಿ ಶಾಸಕರು ಕ್ಷೇತ್ರದಲ್ಲಿದ್ದು, ವಿರೋಧಿಗಳ ರಾಜಕೀಯ ಕುತಂತ್ರಗಳಿಗೆ ನಾವು ಹೆದರುವುದಿಲ್ಲ. ●ರಾಜ್‌ಕುಮಾರ್‌ ಕ್ಯಾಮನಹಳ್ಳಿ, ಬಿಜೆಪಿ ಮುಖಂಡ

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು ಅಧಿಕಾರದಲ್ಲಿ ಇಲ್ಲದಿರಬಹುದು. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಉಸ್ತುವಾರಿ ಸಚಿವರ ಮೂಲಕ ಮಾಡಲು ಒತ್ತಾಯಿಸಲಾಗುವುದು. ಕಿರಣ್‌ ಬಿಳುತಾಳ್‌, ಕಾಂಗ್ರೆಸ್‌ ಮುಖಂಡ

ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರು ಇಲ್ಲದಿರಬಹುದು. ಪ್ರಜ್ವಲ್‌ ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಆಗುವುದು ನಿಶ್ಚಿತ. ಕ್ಷೇತ್ರದಲ್ಲಿ ಜೆಡಿಎಸ್‌ ತಳಮಟ್ಟದ ಕಾರ್ಯಕರ್ತರ ಬಲವಿದ್ದು, ಮುಂದೆಯೂ ಸದೃಢವಾಗಿರಲಿದೆ. ●ಕವನ್‌ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರು, ಜೆಡಿಎಸ್‌ ಮುಖಂಡರು

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next