ಸಕಲೇಶಪು; ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಕಾಡಾನೆ ದಾಳಿ ಪರಿಣಾಮ ಅಮಾಯಕ ಕೂಲಿ ಕಾರ್ಮಿಕನೋರ್ವ ಮೃತ ಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಕೆಂಪೇನಾಲ್ ರವಿ( 48)ಮೃತಪಟ್ಟ ದುರ್ದೈವಿ ಆಗಿದ್ದಾನೆ. ಗಾಳಿ ಗುಡ್ಡ ಗ್ರಾಮದ ಬಸವರಾಜು ಎಂಬುವವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುವಾಗ ಸುಮಾರು 11 ಗಂಟೆ ಸಮಯದಲ್ಲಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದ ಗ್ರಾಮಸ್ಥರು ಮೃತರ ಕುಟುಂಬಕ್ಕೆ ವಿಷಯ ತಿಳಿಸಿದ ನಂತರ ಸ್ಥಳಕ್ಕೆ ಆಗಮಿಸಿದ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಸ್ಥಳಕ್ಕೆ ಆಗಮಿಸಿದ ವಿವಿಧ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿ ಪ್ರತಿಭಟನೆ ಮಾಡತೊಡಗಿದರು. ಇನ್ನೆಷ್ಟು ಅಮಾಯಕರ ಪ್ರಾಣ ಬಲಿ ಕೊಡಬೇಕು? ಇದಕ್ಕೆ ಅಂತ್ಯವಿಲ್ಲವೇ. ಆನೆಯ ಉಪಟಳದಿಂದ ವಿಮುಕ್ತಿ ಯಾವಾಗ? ಮೃತನ ಸ್ಥಳಕ್ಕೆ ಶಾಸಕರು ಆಗಮಿಸಬೇಕೆಂದು ಗ್ರಾಮದ ನಿವಾಸಿಗಳು ಪಟ್ಟು ಹಿಡಿದ ಘಟನೆ ನಡೆದಿದೆ. ಶೀಘ್ರವೇ ಇಂತಹ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಊರಿನ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರ ನೀಡಿದ್ದಾರೆ.
ತಾಲೂಕಿನಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಅಮಾಯಕ ಕೂಲಿ ಕಾರ್ಮಿಕರು ಹಾಗೂ ಸಣ್ಣಪುಟ್ಟ ತೋಟಗಳ ಮಾಲೀಕರು ಸಾವನಪ್ಪುವುದು ಸಾಮಾನ್ಯವಾಗಿದ್ದು ಆದರು ಸಹ ಸರ್ಕಾರ ಕಾಡಾನೆ ಸಮಸ್ಯೆ ಗೆ ಯಾವುದೆ ಶಾಶ್ವತ ಪರಿಹಾರ ಹುಡುಕದಿರುವ ಕಾರಣ ಪರಿಸ್ಥಿತಿ ಗಂಭೀರ ಆಗಲು ಕಾರಣವಾಗಿದೆ.
ಇದನ್ನೂ ಓದಿ : ರೈತರ ತಾಳ್ಮೆ ಪರೀಕ್ಷೆ ಮಾಡದಂತೆ ವಿಜಯ ಕುಲಕರ್ಣಿ ಎಚ್ಚರಿಕೆ