ಚಿಕ್ಕಬಳ್ಳಾಪುರ: ಸಕಾಲ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದ ಮಾಹೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ 50 ಬಾರಿ ಪ್ರಥಮ ಸ್ಥಾನಗಳಿಸಿ ಅರ್ಧ ಶತಕ ಬಾರಿಸಿದೆ. ಈ ಸಾಧನೆಗೈದ ಮತ್ತೂಂದು ಜಿಲ್ಲೆ ರಾಜ್ಯದಲ್ಲಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಈ ಕುರಿತು ವರದಿ ಬಿಡುಗಡೆ ಮಾಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಿಗದಿತ ಕಾಲಮಿತಿಯೊಳಗೆ ಸಾರ್ವ ಜನಿಕರ ಅಹವಾಲು ಅರ್ಜಿಗಳನ್ನು ವಿಲೇವಾರಿ ಮಾ ಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯ 2022ರ ಏಪ್ರಿಲ್ ತಿಂಗಳ ಪ್ರಗತಿ ಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ 2022ರ ಏಪ್ರಿಲ್ ಮಾಹೆ ಯಲ್ಲೂ ಪ್ರಥಮ ಸ್ಥಾನ ಉಳಿಸಿಕೊಂಡಿದೆ ಎಂದರು.
ಜಿಲ್ಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ ಒಟ್ಟು 59,802 ಅರ್ಜಿಗಳನ್ನು ಸ್ವೀಕರಿಸಿ, ಈ ಪೈಕಿ 59,109 ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. 2,647 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕೃತವಾಗಿದೆ. 2,031 ಅರ್ಜಿಗಳು ವಿಲೇವಾರಿ ಬಾಕಿಯಿದೆ. ಶೀಘ್ರ ವಿಲೇವಾರಿಯಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಿದೆ ಎಂದರು.
ಸಕಾಲ ಸಚಿವರಿಂದ ಪ್ರಶಂಸೆ: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಸಕಾಲ ಯೋಜನೆ ಆರಂಭದಿಂದ ಈ ವರೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು 50 ಬಾರಿ ಪ್ರಥಮ, 14 ಬಾರಿ ದ್ವಿತೀಯ ಹಾಗೂ 10 ಬಾರಿ ತೃತೀಯ ಸ್ಥಾನಗಳಿಸಿದೆ.
Related Articles
ಒಟ್ಟಾರೆ 50 ಬಾರಿ (ಮಾಹೆ) ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯ ಮಟ್ಟದಲ್ಲಿ ಸಕಾಲ ಸಚಿವರಿಂದ ಪ್ರಶಂಸೆ ಪಡೆದಿರುವ ಕೀರ್ತಿಯು ಜಿಲ್ಲೆಗೆ ಸಲ್ಲುತ್ತದೆ ದಶಮಾನೋತ್ಸವ ಕಾರ್ಯಕ್ರಮದಲ್ಲೂ ಪ್ರಶಸ್ತಿ ಪಡೆದಿದೆ. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡುತ್ತಿರುವುದೇ ಈ ಸಾಧನೆಗೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಮುಂದೆಯೂ ಹೀಗೆಯೇ ಯಶಸ್ವಿಯಾಗಿ ನಿರ್ವಹಿಸಿ ಪ್ರಥಮ ಸ್ಥಾನವನ್ನು ಕಾಪಾಡಿಕೊಳ್ಳಬೇಕೆಂದು ಪ್ರೋತ್ಸಾಹಿಸಿದರು.
ಈ ಸಾಧನೆಗೆ ಕೈಜೋಡಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ತ ಜನತೆಗೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಡೀಸಿ ಕೃತಜ್ಞತೆ ಅರ್ಪಿಸಿದರು.
ಏನಿದು ರ್‍ಯಾಂಕ್?: ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ ಕುರಿತಂತೆ ರಾಜ್ಯ ಸರ್ಕಾರ ಪ್ರತಿ ತಿಂಗಳು ರ್ಯಾಕಿಂಗ್ ಪಟ್ಟಿ ಪ್ರಕಟಿಸುತ್ತದೆ. ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಕಾಲ ಮಿತಿಯಲ್ಲಿ ಕಡತ ವಿಲೇವಾರಿಯಾಗಬೇಕು ಹಾಗೂ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಕಾಲ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರದ ಸೇವೆಗಳು ಲಭ್ಯವಾಗಲಿವೆ.
ಗಮನಾರ್ಹ ಸಾಧನೆ: ಸಕಾಲ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ನಿರಂತರ ಮುಂಚೂಣಿಯಲ್ಲಿದೆ. ಯೋಜನೆ ಆರಂಭವಾದಾಗಿನಿಂದ (2012 ರಿಂದ) ಈ ವರೆಗೆ ಸರ್ಕಾರ ಈ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಮಾಹೆಗಳ ಪೈಕಿ ಚಿಕ್ಕಬಳ್ಳಾಪುರ ರಾಜ್ಯದಲ್ಲಿಯೇ 50 ಬಾರಿ (ತಿಂಗಳು) ಪ್ರಥಮ ಸ್ಥಾನ ಗಳಿಸಿರುವುದು ಜಿಲ್ಲಾಡಳಿತದ ಕಾರ್ಯ ಅನುಷ್ಠಾನಕ್ಕೆ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ಸಂತಸ ವ್ಯಕ್ತಪಡಿಸಿದರು.