ಬಯಲು ಸೀಮೆಯ ಬಡವರ ಭಾಗ್ಯದಂತಿರುವ ಪುಂಡೀಸೊಪ್ಪು, ಜೋಳ ಮತ್ತು ಸಜ್ಜೆಯ ಬೆಳೆಯಲ್ಲಿ ಹಕ್ಕರಕಿ ಸೊಪ್ಪು ಬೆಳೆವಂತೆ ಅಲ್ಲಲ್ಲಿ ಬೆಳೆದು ರೊಟ್ಟಿಯ ಜೋಡಿ ವಣಿಗೆಗೆ ಈಡಾಗುವ ರೀತಿಯೇ ವಿಶಿಷ್ಟ. ಅಕ್ಕಪಕ್ಕದ ಹೊಲಗಳಲ್ಲಿ ಪುಕ್ಕಟೆಯಾಗಿ ಹಕ್ಕರಕಿಯಂತೆ ದಕ್ಕುವ ಈ ಪುಂಡೀಗಿಡ, ತೀರಾ ಅಗ್ಗದ ದರದಲ್ಲಿ ಮಾರುಕಟ್ಟೆಯಲ್ಲಿ ಸಲ್ಲುವ ಈ ಪುಂಡೀಪಲ್ಲೆ ಈಚೆಗೆ ಧಾರವಾಡದಲ್ಲಿ ಹತ್ತು ರೂಪಾಯಿಗೆ ಒಂದು ಸೂಡಿ ಎಂದು ಮಾರಾಟವಾಗುವುದನ್ನು ಕೇಳಿದಾಗ ನನ್ನ ಬಾಲ್ಯದ ದಿನಗಳು ನೆನಪಾದವು. ಆಗ ಪುಂಡೀಪಲ್ಲೆ ಎನ್ನುವುದು ಬಡವರ ಪಲ್ಲೆ ಎನ್ನುವಂತಿತ್ತು. ಮನೆಯಲ್ಲಿ ಕಾಳುಕಡಿ ತೀರಿದಾಗ ಅವ್ವ ಈ ಪುಂಡೀಪಲ್ಲೆ ಮೇಲೆಯೇ ಹೆಚ್ಚೆಚ್ಚು ಅವಲಂಬಿಯಾಗುತ್ತಿದ್ದಳು. ಸಜ್ಜೆ ರೊಟ್ಟಿ ಮತ್ತು ಪುಂಡಿ ಪಲ್ಲೆ ನಮ್ಮ ಮನೆಯಲ್ಲಿ ತೀರಾ ಸಾಮಾನ್ಯವಾಗಿರುತ್ತಿತ್ತು. ಬಡತನದ ಆ ದಿನಗಳಲ್ಲಿ ಅಪ್ಪನ ಕೈ ಆಡದಿರುವಾಗ, ಅವ್ವಳ ಅಡುಗೆ ಮನೆಗೆ ಮತ್ತೆ ಮತ್ತೆ ಈಡಾಗುತ್ತಿದ್ದ ಸೊಪ್ಪು ಈ ಪುಂಡೀಪಲ್ಲೆ. ಜೋಳ ಬಿತ್ತುವಾಗ ಕೆಲವರು ಈ ಪುಂಡಿಯ ಬೀಜವನ್ನು ಸುತ್ತಲೂ ಅಕಡೀ ಹಾಕುವದಿತ್ತು. ಉದ್ದೇಶ ಅದರ ನಾರಿನಿಂದ ಹಗ್ಗ ಹೊಸೆಯುವ ದೂರದೃಷ್ಟಿ. ಪುಂಡಿಪಲ್ಲೆ ಎನ್ನುವುದು ನಮ್ಮ ಕಡೆಗೆ ಅಂದರೆ ವಿಜಯಪುರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಒಂದು ಅಗ್ಗದ ಜನಪ್ರಿಯ ಸೊಪ್ಪು. ಬೇಸಿಗೆಯಲ್ಲಂತೂ ಓಣಿಯ ಹತ್ತು ಮನೆಗಳಲ್ಲಿ ಐದು ಮನೆಗಳಲ್ಲಾದರೂ ಪುಂಡೀಪಲ್ಲೆ ಇರುತ್ತಿತ್ತು. ಇದೇ ಜಾತಿಯ ಹುಣಸೀಪಲ್ಲೆ ಎನ್ನುವ ಸೊಪ್ಪು ಪುಂಡೀಪಲ್ಲೆಯಷ್ಟು ಸ್ವಾದವೂ ಅಲ್ಲ, ಜನಪ್ರಿಯವೂ ಅಲ್ಲ. ಪುಂಡೀಪಲ್ಲೆಯ ಖ್ಯಾತಿ ಅಪರಂಪಾರ ಎನ್ನುವಂತಿರುತ್ತಿತ್ತು. ಬೇಸಿಗೆಯಲ್ಲಿ ಇದು ತುಂಬಾ ತಂಪು. ಮಡಿಕೆಯಲ್ಲಿ ಹದವಾಗಿ ಮುಗುಚುವ ಈ ಪುಂಡೀಪಲ್ಲೆಯ ಸ್ವಾದಕ್ಕೆ ಸಮನಾದ ಬಾಜಿ ಇನ್ನೊಂದು ಇರುತ್ತಿರಲಿಲ್ಲ.
ಪುಂಡೀಪಲ್ಲೆಯಂತೆ ಹಿಂಡೀಪಲ್ಲೆ ಎನ್ನುವ ಮಡಿಕೆ ಮುಕಣಿ ಎಂದು ಕರೆಯುವ ಕಾಳುಕಾಳಿನ ಬಾಜಿಯೂ ತುಂಬಾ ಜನಪ್ರಿಯವಾಗಿತ್ತು. ಆಗ ಸಜ್ಜೆ ರೊಟ್ಟಿ ತಿನ್ನುವವರು ಬಡವರು. ಈಗಾದರೆ ಸಜ್ಜೆ ರೊಟ್ಟಿ ಎನ್ನುವುದು ಒಂದು ಬಗೆಯ ಫ್ಯಾನ್ಸಿ ಫುಡ್, ಆಗ ಹಂಗಿರಲಿಲ್ಲ. ಬಡವರಷ್ಟೆ ಸಜ್ಜೆಯನ್ನು ಕೊಳ್ಳುವದಿತ್ತು. ಅಪ್ಪನಿಗೆ ಸಜ್ಜೆ ರೊಟ್ಟಿ ಆಗುತ್ತಿರಲಿಲ್ಲ. ಅವ್ವ ಅಪ್ಪನಿಗಷ್ಟೇ ಜೋಳದ ರೊಟ್ಟಿ ಬಡಿಯುತ್ತಿದ್ದಳು. ನಮಗೂ ಜೋಳದ ರೊಟ್ಟಿಯೇ ಇಷ್ಟವಾದರೂ ನಮಗೆ ಟಮ್ಸ್ì ಆಂಡ್ ಕಂಡಿಶನ್ಸ್ ಅನ್ವಯವಾಗುತ್ತಿತ್ತು. ಎರಡು ಸಜ್ಜೆಯ ರೊಟ್ಟಿ ಜೊತೆಗೆ ಒಂದು ಜೋಳದ ರೊಟ್ಟಿ ದಕ್ಕುತ್ತಿತ್ತು. ಮನೆಯಲ್ಲಿ ಹೇಳಿಕೊಳ್ಳುವ ಸ್ಥಿತಿವಂತಿಕೆ ಇರಲಿಲ್ಲ. ಅಡುಗೆಮನೆಯಲ್ಲಿಯ ಬಹುತೇಕ ಡಬ್ಬಿಗಳು ಖಾಲಿಯಾಗಿಯೇ ಇರುತ್ತಿದ್ದವು. ಮಡಿಕೆಯಲ್ಲಿ ಉಪ್ಪು ಮಾತ್ರ ತುಸು ಜಾಸ್ತಿ ಇರುತ್ತಿತ್ತು. ಆಗ ಅವ್ವ ಹಿಂದೆ ಮುಂದೆ ಯೋಚಿಸದೇ ಪುಂಡೀಪಲ್ಲೆ ಮಾಡುವ ತೀರ್ಮಾನ ಮಾಡುತ್ತಿದ್ದಳು.
ನಮಗೆ ಪುಂಡೀಪಲ್ಲೆ ಎನ್ನುವುದು ಖುಷಿಯೇ. ಆದರೆ ವಾರದಲ್ಲಿ ಮೂರು ದಿನ ಬರೀ ಅದೇ ಎನ್ನುವಂತಾದಾಗ ಅದು ತಲೆಚಿಟ್ಟು ಹಿಡಿಸುತ್ತಿತ್ತು. ಅವ್ವಳ ಕೈಗುಣ ಮಾತ್ರ ಅದ್ಭುತ! ಮನೆಯಲ್ಲಿ ಏನೂ ಇಲ್ಲದಿರುವಾಗಲೂ ಅಷ್ಟೊಂದು ಸ್ವಾದವಾಗಿ ಅಡುಗೆ ಮಾಡುತ್ತಿದ್ದುದು ನನ್ನವ್ವ ಮಾತ್ರ. ಅವ್ವ ನೋಡಲು ಕಡ್ಡಿಯಂತಿದ್ದರೂ ಕೆಲಸ ಮಾಡುವಾಗ ದೈತ್ಯಳಾಗಿ ಬಿಡುತ್ತಿದ್ದಳು. ಆಕೆ ಏನೇ ಮಾಡಿದರೂ ನೀಟಾಗಿ ನೇಟಾಗಿ ಮಾಡುತ್ತಿದ್ದಳು. ಶಾವಿಗೆ ಹೊಸಿಯುವದಿರಲಿ, ಹಪ್ಪಳ ಮಾಡುವದಿರಲಿ, ಸಂಡಗಿ ಹಾಕುವದಿರಲಿ ಎಲ್ಲ ಕೆಲಸವೂ ಅಷ್ಟೇ. ತುಂಬಾ ನೀಟಾಗಿ ಮಾಡುತ್ತಿದ್ದಳು. ಅವ್ವ ಮಾಡುವ ಪುಂಡೀಪಲ್ಲೆಗೆ ಇಡೀ ಓಣಿ ತುಂಬಾ ಡಿಮ್ಯಾಂಡು. “”ಶಾಂತಕ್ಕ ವಣಗಿ ಏನು ಮಾಡೀದಿ?” ಎಂದು ಓಣಿಯ ಹೆಂಗಸರು ಕೇಳುವದಿತ್ತು. ಅವ್ವ “”ಪುಂಡೀಪಲ್ಲೆ” ಅಂದಾಗ ಸಣ್ಣದಾದ ಬಟ್ಟಲು ಕೊಟ್ಟು ಮಕ್ಕಳನ್ನು ಕಳುಹಿಸುತ್ತಿದ್ದರು. ಅವ್ವ ಹೀಗೆ ಪುಂಡೀಪಲ್ಲೆಗೆ ಡಿಮಾಂಡ್ ಇಡುವವರನ್ನು ಮೊದಲೇ ಲೆಕ್ಕ ಹಾಕಿಯೇ ಈಡಾಗುವಂತೆ ತುಸು ದೊಡ್ಡದಾಗಿರುವ ಮಡಿಕೆಯಲ್ಲಿ ಮಾಡಿರುತ್ತಿದ್ದಳು.
ಪುಂಡೀಸೊಪ್ಪು ತೀರಾ ಬಲತಿರಬಾರದು, ಹಾಗೆಯೇ ತೀರಾ ಎಳೆಯದೂ ಇರಬಾರದು ಎನ್ನುವ ಕರಾರಿನ ಮೇಲೆ ಅವ್ವ ತಾನೇ ಖುದ್ದಾಗಿ ಹೊಲಕ್ಕೆ ಹೋದಾಗ ಉಡಿದುಕೊಂಡು ಬರುತ್ತಿದ್ದಳು. ಜೋಳದ ನುಚ್ಚು, ಜೀರಿಗೆ, ಸಾಸಿವೆ, ಅಜಿವಾನ, ಉಪ್ಪು$, ಮೆಣಸು, ಅರಿಶಿಣ, ಬೆಳ್ಳೊಳ್ಳಿ, ಕೊತಂಬ್ರಿ ಇವಿಷ್ಟು ಪುಂಡೀಪಲ್ಲೆ ಮಾಡಲು ಬಳಸುವ ಸಾಮಗ್ರಿಗಳು. ಈ ಸಾಮಗ್ರಿಗಳ ಅಳತೆಗೋಲು ಕೂಡಾ ಸರಿಯಾಗಿರಬೇಕು. ಹೆಚ್ಚಾಕಡಿಮೆಯಾದರೆ ಅಡುಗೆಯೇ ಎಡವಟ್ಟಾಗುತ್ತದೆ. ಈ ಪುಂಡೀಪಲ್ಲೆಯನ್ನು ಅವ್ವ ಬಹುತೇಕವಾಗಿ ಮಡಕೆಯಲ್ಲಿಯೇ ಮಾಡುತ್ತಿದ್ದಳು. ಒಳ್ಳೆಯ ಪುಂಡೀಪಲ್ಲೆಯನ್ನು ಮೊದಲು ಸೋಸಿ, ಆಮೇಲೆ ಜೋಳದ ನುಚ್ಚು ಮತ್ತು ಮೇಲೆ ಹೇಳಿದ ಸಾಮಗ್ರಿಗಳೊಂದಿಗೆ ಒಂದಷ್ಟು ಹೊತ್ತು ಕುದಿಸಿಯಾದ ನಂತರ ಅದನ್ನು ಕೆಳಗಿಳಿಸಿ ಸಣ್ಣದಾದ ಕಟ್ಟಿಗೆಯ ಹುಟ್ಟಿನಿಂದ ಅದನ್ನು ಮುಗುಚುತ್ತಿದ್ದಳು. ಹಾಗೆ ಮುಗುಚುವುದರಲ್ಲಿಯೇ ಪುಂಡೀಪಲ್ಲೆಯ ಹದಗಾರಿಕೆ ಮಡಕೆಯೊಳಗಡೆಯೇ ಮೈದಾಳುತ್ತಿತ್ತು. ಮತ್ತೆ ಸ್ವಲ್ಪ ಹೊತ್ತು ಒಲೆಯ ಮೇಲಿಟ್ಟು ಆಮೇಲೆ ಕೆಳಗಿಳಿಸಿ ಮಡಕೆಯ ಕಂಟದ ಸುತ್ತಲೂ ಬೂದಿಯಿಂದ ಗೆರೆ ಎಳೆದು, ಮೇಲೆ ಮುಚ್ಚಳವಿಟ್ಟು ಬೆಂಕಿ ಇರದ ಒಲೆಯ ಮೇಲೆ ಇಡುತ್ತಿದ್ದಳು. ಮುಚ್ಚಳ ತೆಗೆದರೆ ಸಾಕು ಪುಂಡೀಪಲ್ಲೆಯ ಒಂದು ಸೊಗಸಾದ ಅರೋಮಾ ಮೂಗಿಗೆ ಮುಕುರುತ್ತಿತ್ತು. ಸಜ್ಜೆ ರೊಟ್ಟಿಯ ಜೊತೆಗೆ ಪುಂಡೀಪಲ್ಲೆ ಮತ್ತು ಅದರ ಜೊತೆಗೆ ಕಚ್ಚಿಕೊಳ್ಳಲು ಎಳೆಯ ಹಸಿ ಮೆಣಸಿನಕಾಯಿ. ಸಜ್ಜೆ ರೊಟ್ಟಿ, ಪುಂಡೀಪಲ್ಲೆ, ಕುಸಬೀ ಎಣ್ಣೆ ಮತ್ತು ಹಸಿ ಮೆಣಸಿನಕಾಯಿಯ ಸಹಯೋಗದ ಸ್ವಾದ “ವಾಹ್!’ ಎನ್ನುವಂಗಿರುತ್ತಿತ್ತು. ಅನೇಕ ಬಾರಿ ಅವ್ವ ಮುಗುಚುತ್ತಿದ್ದ ಪುಂಡೀಪಲ್ಲೆ ನೆನಪಾಗಿ ಬಾಯಲ್ಲಿ ನೀರೂರುವದಿದೆ. ಅವ್ವ ನಮಗೆಲ್ಲಾ ವಾರಗಟ್ಟಲೆ ಅದನ್ನೇ ತಿನ್ನಿಸುವ ದಿತ್ತು. ಅದು ಹಳಸುವದಿಲ್ಲ ಎಂದು ಹೇಳುತ್ತಲೇ ನಮಗೆ ಮತ್ತೆ ಮತ್ತೆ ಅದನ್ನೇ ಬಡಿಸುವದಿತ್ತು. ಎರಡು ಮೂರು ದಿನ ಬಿಟ್ಟು ಮಡಕೆಯ ಮುಚ್ಚಳ ತೆಗೆದಾಗ ಒಳಗೆ ಮಂಜು ಮುಸುಕಿದಂತೆ ತೋರುವ ಬ್ರೂಸನ್ನು ಹೊರತೆಗೆದು, “ಅದು ಹಾಳಾಗಿಲ್ಲ ಬರೀ ಬ್ರೂಸು ಬಂದಿದೆ’ ಎಂದು ಮತ್ತೆ ಅದನ್ನೇ ಉಣಿಸುತ್ತಿದ್ದ ಅವ್ವಳ ಪುಂಡೀಪಲ್ಲೆ ಆಗಲೂ ಅಗಾಧವಾಗಿತ್ತು. ಈಗಂತೂ ಅವಳಿಲ್ಲದಿರುವಾಗ ಅದು ಇನ್ನಷ್ಟು ಅಗಾಧವಾಗಿದೆ. ಅವ್ವ ಗಟ್ಟಿಯಾಗಿ ಕುಳಿತು ಮಡಿಕೆಯನ್ನು ಹಿಡಿದು ಹದ ಬರುವವರೆಗೆ ಮುಗುಚುವುದರಲ್ಲಿಯೇ ಪುಂಡೀಪಲ್ಲೆಯ ಸ್ವಾದದ ಹಿಕಮತ್ತು ಅಡಕವಾಗಿರುತ್ತಿತ್ತು.
ಸೂಟಿಯಲ್ಲಿ ವಿಜಯಪುರಕ್ಕೆ ತೆರಳಿದಾಗ ತರಕಾರಿ ಮಾರುಕಟ್ಟೆಯಲ್ಲಿ ತಿರುಗುವಾಗ ಮತ್ತೆ ಮತ್ತೆ ಕಣ್ಣಿಗೆ ಬೀಳುವ ಪುಂಡೀಸೊಪ್ಪು ಅವ್ವಳ ಕೈಗುಣ ಮತ್ತು ಸ್ವಾದವನ್ನು ನೆನಪಿಗೆ ತರುತ್ತದೆ. ಅಕ್ಕ, ಅವ್ವಳ ಎಲ್ಲ ಅಡುಗೆಯನ್ನು ಕಲಿತವಳು. ಥೇಟ್ ಅವ್ವಳ ಹಾಗೆಯೇ ಮಾಡುತ್ತಾಳೆಂದರೂ ಅವ್ವಳ ಪುಂಡೀಪಲ್ಲೆಯ ಹದಗಾರಿಕೆ ಮಾತ್ರ ಅಕ್ಕನಿಗೂ ದಕ್ಕಿಲ್ಲ. ಅಕ್ಕ ಪುಂಡೀಪಲ್ಲೆ ಮಾಡುತ್ತಾಳೆಯಷ್ಟೇ ಅವ್ವಳಂತೆ ಮಡಕೆಯನ್ನು ಗಟ್ಟಿಯಾಗಿ ಹಿಡಿಯುವ, ಮುಗುಚುವ ಹಿಕಮತ್ತು ಮಾತ್ರ ಅವಳಿಗೆ ಒಲಿದಿಲ್ಲ. ನನ್ನವಳಂತೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವಳು. ಆಕೆಗೆ ಮೀನುಗಳ ಮೆನು ಚೆನ್ನಾಗಿ ಗೊತ್ತಿದೆ. ಆದರೆ, ಈ ಬಗೆಯ ತರಕಾರಿ, ಸೊಪ್ಪಿನದು ತೀರಾ ಕಡಿಮೆ. ಅದರಲ್ಲೂ ಪುಂಡೀಪಲ್ಲೆಯಂಥ ಸೊಪ್ಪು ಅವಳಿಗೆ ತೀರಾ ಅಪರೂಪ. ನಾನು ಅನೇಕ ಬಾರಿ ಧಾರವಾಡದ ತರಕಾರಿ ಮಾರುಕಟ್ಟೆಯಲ್ಲಿ, “”ಇಲ್ನೋಡು ಅದು ಪುಂಡೀಪಲ್ಲೆ ಅಂತ, ಬಾಳ ಚಲೋ ಆಗತೈತಿ ಆದರ ಅದನ್ನ ಮಾಡ್ಲಿಕ್ಕ ಹಿಕಮತ್ ಬೇಕು” ಅಂದಾಗ ಅವಳು ಏನೂ ಮರುಮಾತನಾಡುತ್ತಿರಲಿಲ್ಲ. ಬಹುಶಃ ಅವಳಿಗೆ ಗೊತ್ತಿರಬೇಕು. ಮಾತಿಗೆ ಒಂದೇ ಅರ್ಥ ಮೌನಕ್ಕೆ ನಾನಾ ಅರ್ಥ ಎಂದು. ನಾನೂ ಆ ಹೊತ್ತಲ್ಲಿ ಮೌನಿಯಾಗುತ್ತಿದ್ದೆ. ಅನೇಕ ಬಾರಿ ಈ ಮೌನವೇ ಸುಖ ಸಂಸಾರದ ಸೂತ್ರಗಳಲ್ಲೊಂದು ಎನ್ನುವ ಬಗ್ಗೆ ನನಗೂ ಮನವರಿಕೆಯಾಗಿದೆ.
ಎಸ್.ಬಿ. ಜೋಗುರ