Advertisement

Sairat: ಪ್ರಸ್ತುತ ಸಮಾಜಕ್ಕೆ ಭೂತಕನ್ನಡಿಯಂತಿರುವ ಸೈರಾಟ್‌

05:43 PM Dec 10, 2024 | Team Udayavani |

ಒಂದು ಹುಡುಗ ಹುಡುಗಿ ಮಾತಾಡಿದರೆ ತಪ್ಪು. ಅದರಲ್ಲೂ ಪ್ರೀತಿ ಮಾಡಿದರಂತೂ ಕೊಲೆಗಿಂತ ದೊಡ್ಡ ಅಪರಾಧ ಎನ್ನುವ ಸಮಾಜ ನಮ್ಮದು. ಇನ್ನು ಅಂತರ್ಜಾತಿ ವಿವಾಹದ ಬಗ್ಗೆ ಎಲ್ಲಿಯ ಮಾತು? ಇದರ ಬಗ್ಗೆ ಆಲೋಚನೆ ಕೂಡ ಯಾರು ಮಾಡರು. ಅಂತಹದರಲ್ಲಿ ಈ ಸೈರಾಟ್‌ ಸಿನೆಮಾ ನೋಡಿದ ಮೇಲೆ ನನಗೆ ಸಾಕಷ್ಟು ಗೊಂದಲಗಳು ಉಂಟಾಗಿದೆ. ಹೌದು, ಈ ಸಿನೆಮಾದಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಈ ಸಿನೆಮಾವನ್ನು ನೋಡಿದಾಗ ಎಂತಹ ಕಲ್ಲು ಹೃದಯದವರಾದರೂ ಒಂದು ಕ್ಷಣ ಮರುಗುವುದಂತು ಖಚಿತ.

Advertisement

ಈ ಸಿನೆಮಾದಲ್ಲಿ ನಾಯಕಿಯ ಧೈರ್ಯ ಮತ್ತು ಸಾಹಸ ನಿಜವಾಗಿಯೂ ಸಮಾಜದ ಎಲ್ಲ ಸ್ತ್ರೀಯರಿಗೆ ಮಾದರಿಯಾಗುವಂತದ್ದು. ಆಕೆ ತನ್ನ ಸರ್ವಸ್ವವಾದ ತಂದೆ-ತಾಯಿ, ಬಂಧು-ಬಳಗವನ್ನು ಬಿಟ್ಟು ಪ್ರೀತಿಸಿದವನೊಂದಿಗೆ ಗೊತ್ತಿರದ ಊರಿಗೆ ಬರುವುದೆಂದರೆ ಸುಲಭದ ಮಾತಲ್ಲ. ಆಕೆ ಅವನ ಮೇಲಿಟ್ಟಿರುವ ನಂಬಿಕೆಗೆ ಬೆಲೆ ಕಟ್ಟಲಾಗದು. ಆದರೆ ನಾಯಕ ಒಂದು ಸಂದರ್ಭದಲ್ಲಿ ಇದನ್ನೆಲ್ಲ ಮರೆತು ಆಕೆಯ ಚಾರಿತ್ರ್ಯದ ಬಗ್ಗೆ ಅನುಮಾನಿಸಿ ಪುರುಷ ಪ್ರಧಾನ ಸಮಾಜವನ್ನು ನೆನಪಿಸುತ್ತಾನೆ. ಎಷ್ಟೇ ಪ್ರೀತಿ ಮಾಡಲಿ ಏನೇ ಮಾಡಲಿ ಆದರೆ ಗಂಡಸಿನಲ್ಲಿರುವ ಪುರುಷ ಪ್ರಧಾನ ಮನಸ್ಥಿತಿ ಎಂದಿಗೂ ಎಲ್ಲಿಗೂ ಹೋಗಲ್ಲ ಎನ್ನುವುದಕ್ಕೆ ಈ ಸನ್ನಿವೇಶ ಕನ್ನಡಿ ಹಿಡಿದಂತಿದೆ. ಹಾಗೆಯೇ ಮೇಲ್ವರ್ಗದಿಂದ ಬಂದ ಒಂದು ಹೆಣ್ಣು ಮಗಳು ಕೆಳವರ್ಗದವರ ಜೀವನಕ್ಕೆ ಒಗ್ಗಿಕೊಳ್ಳಲು ಪಡುವ ಕಷ್ಟವನ್ನು ಕೆಲವು ದೃಶ್ಯಗಳಲ್ಲಿ ನಮಗೆ ಕಾಣಲು ಸಿಗುತ್ತದೆ.

ಈ ಸಿನೆಮಾವನ್ನು ನೋಡಿದಾಗ ಒಟ್ಟಾರೆಯಾಗಿ ನನಗನಿಸಿದ್ದೇನೆಂದರೆ ಪ್ರೀತಿಯೆಂದರೇನು? ಈ ಚಲನಚಿತ್ರದಲ್ಲಿ ತೋರಿಸಿದ ಹಾಗೆ ಒಂದು ವೇಳೆ ಬೇರೆ ಬೇರೆ ಜಾತಿ ಅಥವಾ ಧರ್ಮದವರು ಪ್ರೀತಿಸಿದರೆ ಅದಕ್ಕೆ ಊರು ಬಿಟ್ಟು ಎಲ್ಲರಿಂದ ದೂರ ಉಳಿಯುವುದೇ ಪರಿಹಾರವೇ ? ಇಲ್ಲ ಹಾಗೆ ಹೇಳಲು ಸಾಧ್ಯವಿಲ್ಲ. ಕಾರಣ, ಈ ಸಿನೆಮಾದ ಕೊನೆಯಲ್ಲಿ ಯಾರ ತಂಟೆ ತಕರಾರಿಗೂ ಹೋಗದೆ ಎಲ್ಲರಿಂದ ದೂರ ಉಳಿದ ಪ್ರೇಮಿಗಳನ್ನು ನೆಮ್ಮದಿಯಾಗಿ ಬದುಕಲು ಬಿಡದೇ ದಾರುಣವಾಗಿ ಹತ್ಯೆ ಮಾಡಿದರಲ್ಲ. ಅಂದರೆ ಎನಿದರ ಅರ್ಥ? ಹೆಚ್ಚಾಗಿ ಅಂತರ್ಜಾತಿ ಪ್ರೀತಿ ಮಾಡಿದವರೆಲ್ಲರ ಬದುಕು ಹೀಗೆ ಕೊಲೆಗಳಲ್ಲೇ ಅಂತ್ಯಗೊಳ್ಳುತ್ತದೆ. ಈ ತರಹ ಅಂತ್ಯಗೊಳ್ಳುವುದಾದರೆ ಪ್ರೀತಿಸಿದವರ ಅಸ್ತಿತ್ವಕ್ಕೇನು ಬೆಲೆಯಿದೆಯಲ್ಲವೇ.

ಎಲ್ಲೋ ಓದಿದ ನೆನಪು, ಅಂತರ್ಜಾತಿ ವಿವಾಹ ಜಾತಿ ವ್ಯವಸ್ಥೆಯನ್ನೇ ಹೊಡೆದೊಡಿಸಲು ಇರುವ ಅಸ್ತ್ರವೆಂದು. ಆದರೆ ಅಂತರ್ಜಾತಿ ವಿವಾಹವಾದವರನ್ನೆಲ್ಲ ಊರಿಂದ ಹೊರಗಿಡುವುದು, ಕೊಲೆ ಮಾಡುವುದು, ಹಿಂಸಿಸುವುದು ಅಥವಾ ಕೀಳಾಗಿ ನೋಡುವುದು ಹೀಗೆ ಮಾಡಿದರೆ ಜಾತಿ ವ್ಯವಸ್ಥೆಯನ್ನು ಹೇಗೆ ಅಂತ್ಯಗೊಳಿಸಲು ಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಸುತ್ತಮುತ್ತ ನಡೆಯುವ ಎಷ್ಟೋ ಘಟನೆಗಳನ್ನು ದಿನಂಪ್ರತಿ ಟಿವಿ, ದಿನಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ. ಇದರಿಂದಾಗಿ ಸಮಾಜದಲ್ಲಿರುವ ಜಾತಿ ವ್ಯವಸ್ಥೆಯನ್ನು ಅಂತ್ಯಗೊಳಿಸುವುದಕ್ಕಿಂತ ಹೊಡೆದಾಟ ಬಡಿದಾಟವಾಗಿರುವುದೇ ನಮಗೆ ಕಾಣಲು ಹೆಚ್ಚು ಸಿಗುತ್ತದೆ. ಹಾಗಾದರೆ, ಈ ಅಂತರ್ಜಾತಿ ವಿವಾಹದಿಂದ ಜಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಸಾಧ್ಯವೇ ಎನ್ನುವುದು ನನ್ನ ಪ್ರಶ್ನೆ.

Advertisement

 ಪ್ರಗತಿ ಶೆಟ್ಟಿ

ಕೆರಾಡಿ

Advertisement

Udayavani is now on Telegram. Click here to join our channel and stay updated with the latest news.

Next