ಬ್ಯಾಂಕಾಕ್ (ಥಾಯ್ಲೆಂಡ್): ಜುಲೈನಲ್ಲಿ ಜಪಾನಿನ ಟೋಕೊಯೋದಲ್ಲಿ ಒಲಿಂಪಿಕ್ ಆರಂಭವಾಗಲಿದೆ. ಈಗ ಎಲ್ಲಕಡೆ ಒಲಿಂಪಿಕ್‌ಗೆ ಅರ್ಹತೆ ಪಡೆಯುವ ಧಾವಂತ. ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಕೆ. ಶ್ರೀಕಾಂತ್ ಕೂಡ ಅಂತಹದ್ದೇ ಸಂದಿಗ್ಧದಲ್ಲಿದ್ದಾರೆ.
ಏ.26ರೊಳಗೆ ಅವರು ಅಗತ್ಯವಿರುವ ಅರ್ಹತೆಯನ್ನು ಗಳಿಸಬೇಕು. ಆದ್ದರಿಂದ ಮುಂದೆ ನಡೆಯುವ ಪ್ರತೀ ಕೂಟವೂ ಅವರಿಗೆ ಅನಿವಾರ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ ಬುಧವಾರದಿಂದ ಆರಂಭವಾಗಲಿರುವ ಥಾಯ್ಲೆಂಡ್ ಮಾಸ್ಟರ್ಸ್ ಕೂಟದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿಂದ ಕಣಕ್ಕಿಳಿಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರೂ ಅರ್ಹತೆ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ.
ಅರ್ಹತೆ ಪಡೆಯುವುದು ಹೇಗೆ?: ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ 22ನೇ ಶ್ರೇಯಾಂಕದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ 23ನೇ ಸ್ಥಾನದಲ್ಲಿದ್ದಾರೆ. ಏ.26ರೊಳಗೆ ಯಾರು ಅಗ್ರ 16ನೇ ಶ್ರೇಯಾಂಕ ದೊಳಗಿರುತ್ತಾರೋ, ಅವರಿಗೆ ಒಲಿಂಪಿಕ್‌ನಲ್ಲಿಸ್ಪರ್ಧಿಸುವ ಅವಕಾಶ ಸಿಗಲಿದೆ. ಆದರೆ ಇಲ್ಲೂ ಷರತ್ತುಗಳು ಅನ್ವಯಿಸುತ್ತವೆ.
ಅಂದರೆ ಒಂದು ದೇಶದ ತಲಾ ಇಬ್ಬರಿಗೆ, ಒಂದು ಸಿಂಗಲ್ಸ್ ವಿಭಾಗದಲ್ಲಿ (ಪುರುಷ ಮತ್ತು ಮಹಿಳೆಯರಿಗೆ ತಲಾ 2) ಅರ್ಹತೆ ಸಿಗುತ್ತದೆ. ಆಗ ಅವರು ಕೇವಲ ಅಗ್ರ 16ರೊಳಗೆ ಅರ್ಹತೆ ಪಡೆದರೆ ಸಾಲುವುದಿಲ್ಲ. ತಮ್ಮ ದೇಶದ ಉಳಿದೆಲ್ಲರಿಗಿಂತ ಉತ್ತಮ ಶ್ರೇಯಾಂಕ ಹೊಂದಬೇಕು.
ಇದರರ್ಥ ಇಷ್ಟೇ…ಮಹಿಳಾ ಸಿಂಗಲ್ಸ್‌ನಲ್ಲಿ ಞ6ನೇ ಶ್ರೇಯಾಂಕದಲ್ಲಿರುವ ಪಿ.ವಿ.ಸಿಂಧು ಈಗಾಗಲೇ ಅರ್ಹತೆ ಪಡೆದಿದ್ದಾರೆ. ಈ ವಿಭಾಗ ದಲ್ಲಿ ಇನ್ನೂ ಒಂದು ಸ್ಥಾನವಷ್ಟೇ ಬಾಕಿಯಿದೆ. ಒಂದು ವೇಳೆ ಸೈನಾ ಅಗ್ರ 16ಕ್ಕೇರಿದರೂ, ಇನ್ನೊಬ್ಬ ಮಹಿಳಾ ತಾರೆ ಅದಕ್ಕಿಂತ ಉತ್ತಮ ಸ್ಥಾನ ಪಡೆದರೆ, ಸೈನಾಗೆ ಒಲಿಂಪಿಕ್ ಅರ್ಹತೆ ಸಿಗುವುದಿಲ್ಲ! ಸರಿಯಾಗಿ ಇದೇ ಸ್ಥಿತಿ ಕೆ. ಶ್ರೀಕಾಂತ್‌ಗೆ ಇದೆ. 11ನೇ ಶ್ರೇಯಾಂಕ ಹೊಂದಿರುವ ಬಿ.ಸಾಯಿ ಪ್ರಣೀತ್ ಒಲಿಂಪಿಕ್‌ಗೆ ತೆರಳುವುದು ಖಚಿತ. ಇನ್ನುಳಿದ ಒಂದು ಸ್ಥಾನವನ್ನು ಶ್ರೀಕಾಂತ್ ಪಡೆದುಕೊಳ್ಳಬೇಕು, ಉಳಿದವರ ಪೈಪೋಟಿಯನ್ನು ಮೀರಿ!
ಏ.26ರವರೆಗೆ ಒಟ್ಟು 6 ಬ್ಯಾಡ್ಮಿಂಟನ್ ಕೂಟಗಳು ನಡೆಯುತ್ತವೆ. ಅಷ್ಟರಲ್ಲೂ ಪಾಲ್ಗೊಳ್ಳುವುದು ಕಷ್ಟ. ಆಡಿದರೂ ಗೆಲ್ಲುವುದು ಕಷ್ಟ. ಸಿಕ್ಕಿದ ಅವಕಾಶಗಳ ಪೈಕಿ, ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವನ್ನು ದಕ್ಕಿಸಿಕೊಳ್ಳಬೇಕು, ಹಾಗೆಯೇ ಒಲಿಂಪಿಕ್ ಅರ್ಹತೆಯನ್ನು.
ಕಳಪೆ ಲಯದ ಭೀತಿ
ಸದ್ಯ ಕೆ.ಶ್ರೀಕಾಂತ್ ಹಾಗೂ ಸೈನಾ ನೆಹ್ವಾಲ್ ಸತತವಾಗಿ ಕಳಪೆ ಲಯ ತೋರಿದ್ದಾರೆ. ಥಾಯ್ಲೆಂಡ್ ಕೂಟದಲ್ಲಿ ಇಬ್ಬರ ಹಣೆಬರೆಹ ಬದಲಾದರೆ ಅದು ಪವಾಡ ಮಾತ್ರ. ಈ ಕೂಟದಲ್ಲಿ ಸೈನಾ, ಡೆನ್ಮಾರ್ಕ್‌ನ ಲೈನ್ ಎಚ್ ಜೆಮಾರ್ಕ್ ಜಾರ್‌ಫೆಲ್ಡ್‌ರನ್ನು, ಶೆಸಾರ್ ರುಸ್ಟಾವಿಟೊರನ್ನು ಶ್ರೀಕಾಂತ್ ಮೊದಲ ಪಂದ್ಯದಲ್ಲಿ ಎದುರಿಸಲಿದ್ದಾರೆ.