ಸೈದಾಪುರ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಉತ್ತಮಫಲಿತಾಂಶಕ್ಕೆ ಜಿಲ್ಲಾಡಳಿತ ಮತ್ತು ಶಿಕ್ಷಣಇಲಾಖೆ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ.ಆದರೆ ಸೈದಾಪುರ ಪ್ರೌಢಶಾಲೆಗೆ ಶೈಕ್ಷಣಿಕ ವರ್ಷ ಪ್ರಾರಂಭವಾದರೂ ಪುಸ್ತಕ ವಿತರಣೆಯಾಗದಿರುವುದು ಕಂಡುಬಂದಿದೆ.
ಸೈದಾಪುರ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಸಮಸ್ಯೆ ಹಾಗೂ ಶಿಕ್ಷಕರ ಕೊರತೆ ಇರುವುದರಿಂದಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಗಗನ ಕುಸುಮವಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ 8ರಿಂದ10ನೇ ತರಗತಿವರೆಗೆ 330 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಮಕ್ಕಳ ಸಂಖ್ಯೆಗನುಗುಣವಾಗಿ ಒಟ್ಟು 14 ಶಿಕ್ಷಕ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 8 ಜನಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.ಎಸ್ಸೆಸ್ಸೆಲ್ಸಿ 125 ವಿದ್ಯಾರ್ಥಿಗಳಲ್ಲಿ ಶೇ.100 ಮಕ್ಕಳಿಗೆ ಗಣಿತ ಮತ್ತು ವಿಷಯಗಳ ಭಾಗ-2ರ ಪುಸ್ತಕ ನೀಡಿಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿಐದು ತಿಂಗಳಾದರೂ ಬಾಲಕಿಯರಿಗೆ ಸಮವಸ್ತ್ರ ವಿತರಣೆ ಮಾಡಿಲ್ಲ. ಅತ್ತ ವಿಷಯ ಶಿಕ್ಷಕರ ಕೊರತೆ; ಇತ್ತ ಮೂಲಭೂತ ಸೌಕರ್ಯಗಳಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಪ್ರಗತಿ ಕಾಣಲು ಹೇಗೆ ಸಾಧ್ಯ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.
ಇಲ್ಲಿ ಬಯಲೇ ಶೌಚಾಲಯ!: ಸೈದಾಪುರ ಸರಕಾರಿ ಪ್ರೌಢಶಾಲೆಗೆ ಶೌಚಾಲಯವಿದ್ದರೂ ಅಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ. ಇದರಿಂದ ವಿದ್ಯಾರ್ಥಿನಿಯರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಶೌಚಾಲಯ ನಿರ್ಮಿಸಿದ್ದಾರೆ. ನೀರಿನ ಸರಬರಾಜು ಮಾಡದೇ ಕೀಲಿ ಹಾಕಿದರೆ ವಿದ್ಯಾರ್ಥಿನಿಯರುಎಲ್ಲಿಗೆ ಹೋಗಬೇಕು? ಎಂದು ಪೋಷಕರು ಸರಕಾರ ಮತ್ತು ಶಿಕ್ಷಣ ಇಲಾಖೆಗೆ ಖಾರವಾಗಿ ಪ್ರಶ್ನಿಸಿದ್ದಾರೆ. ಶೌಚಾಲಯ ನಾಮ ಮಾತ್ರಕ್ಕೆ ಕಟ್ಟುವುದಲ್ಲ. ಅದನ್ನು ಬಳಕೆಗೆ ಮುಕ್ತಗೊಳಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಶಾಲೆ ಆವರಣ ಹಂದಿಗಳವಾಸಸ್ಥಾನವಾಗಿದೆ. ಶಾಲೆ ಎದುರು ಚರಂಡಿ ನೀರು ಹರಿಯುತ್ತದೆ. ಅಭ್ಯಾಸಮಾಡುವುದಕ್ಕೆ ಪುಸ್ತಕಗಳೇ ಇಲ್ಲ. ಇನ್ನು ಮೂರು ಕಳೆದರೆ ಪರೀಕ್ಷೆ ಬರುತ್ತೆ. ಹೀಗಾದರೆ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು?.
–ನಿರಂಜನ, 10ನೇ ತರಗತಿ ವಿದ್ಯಾರ್ಥಿ
-ಭೀಮಣ್ಣ ಬಿ. ವಡವಟ್