Advertisement

ನಮ್ಮದು ಅಮೃತ ಕಾಲ; ನಿಮ್ಮದು ರಾಹು ಕಾಲ

12:58 AM Feb 12, 2022 | Team Udayavani |

ಹೊಸದಿಲ್ಲಿ: ದೇಶದ ಅರ್ಥವ್ಯವಸ್ಥೆ ಅತೀ ದೊಡ್ಡ ಹಿನ್ನಡೆ ಕಂಡಿದ್ದರೂ, ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ.6.2ರಲ್ಲಿಯೇ ನಿಯಂತ್ರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಸಂಸತ್‌ನಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, 2022-23ನೇ ಸಾಲಿನ ಬಜೆಟ್‌ ದೇಶದ ಅರ್ಥ ವ್ಯವಸ್ಥೆ ಹೊಂದಿರುವ ಸ್ಥಿರತೆಯನ್ನು ಪ್ರತಿ ಬಿಂಬಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಿದೆ ಎಂದಿದ್ದಾರೆ.

ಬಜೆಟ್‌ನಲ್ಲಿ ಬಡವರನ್ನು ಹೊರಗಿಡಲಾಗಿದೆ ಎಂಬ ಮಾಜಿ ಸಚಿವ ಪಿ.ಚಿದಂಬರಂ ಮತ್ತು ರಾಹುಲ್‌ ಗಾಂಧಿ ಹೇಳಿಕೆ ವಿರುದ್ಧ ಮಾತಿನ ಬಾಣಗಳನ್ನೆಸೆದ ನಿರ್ಮಲಾ, “ಬಡತನ ಎಂದರೆ ಆಹಾರ, ಹಣ ಅಥವಾ ಇನ್ನಿತರ ಯಾವುದೇ ಸೊತ್ತಿನ ಕೊರತೆ ಅಲ್ಲ. ಅದೊಂದು ಮನಃಸ್ಥಿತಿ ಅಷ್ಟೆ ಎಂದು ನಿಮ್ಮ ಪಕ್ಷದ ಮಾಜಿ ಅಧ್ಯಕ್ಷರು ಈ ಹಿಂದೆಯೇ ಹೇಳಿದ್ದರು. ಆತ್ಮವಿಶ್ವಾಸ ಇದ್ದರೆ ಬಡತನದ ಪರಿಸ್ಥಿತಿಯಿಂದ ಹೊರಬರಬಹುದು ಎಂದಿದ್ದರು. ಹೀಗಾಗಿ ನಾನು ಬಡತನ ಎಂಬ ಮನಃಸ್ಥಿತಿ ಬಗ್ಗೆ ಗಮನಹರಿಸಬೇಕೋ’ ಎಂದು ಪ್ರಶ್ನೆ ಮಾಡಿದರು.

ಕೊರೊನಾದಿಂದಾಗಿ ದೇಶದ ಅರ್ಥವ್ಯವಸ್ಥೆಗೆ 9.57 ಲಕ್ಷ ಕೋಟಿ ರೂ. ನಷ್ಟವಾಗಿದೆ. 2008-2009ನೇ ಸಾಲಿನ ಆರ್ಥಿಕ ಹಿಂಜರಿತ ವೇಳೆ ದೇಶಕ್ಕೆ 2.12 ಲಕ್ಷ ಕೋಟಿ ರೂ. ನಷ್ಟವಾಗಿತ್ತು ಎಂದಿದ್ದಾರೆ. ಮಾಜಿ ಸಚಿವ ಕಪಿಲ್‌ ಸಿಬಲ್‌, “ದೇಶಕ್ಕೆ ಅಮೃತ ಕಾಲ ಅಲ್ಲ ರಾಹು ಕಾಲ ಬಂದಿದೆ’ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ನಿರ್ಮಲಾ, “ನಮ್ಮದು ಅಮೃತ ಕಾಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಸ್ವಾತಂತ್ರ್ಯ ಸಿಕ್ಕಿ 100 ವರ್ಷ ಪೂರ್ತಿಯಾಗುವವರೆಗೆ ದೂರದೃಷ್ಟಿ ಹೊಂದಿರಬೇಕು ಎನ್ನುವುದು ನಮ್ಮ ವಾದ. 65 ವರ್ಷಗಳ ಕಾಲ ದೇಶ ಒಂದೇ ಕುಟುಂಬಕ್ಕೆ ನಿಷ್ಠವಾಗಿ ನಿರ್ದಿಷ್ಟ ಗುರಿಯಿಲ್ಲದೆ ಆಡಳಿತ ನಡೆಸಿದ್ದ ಕಾಲವೇ ರಾಹು ಕಾಲ’ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಪಿಎಲ್‌ಐ ಯೋಜನೆಗೆ 20 ವಾಹನ ತಯಾರಿಕಾ ಕಂಪನಿಗಳು ಆಯ್ಕೆ

Advertisement

ಅದೇ ರೀತಿ, ಬಜೆಟ್‌ ಅಧಿವೇಶನದ ಮೊದಲಾರ್ಧದ ಕೊನೆಯ ದಿನವಾದ ಶುಕ್ರವಾರ ಲೋಕಸಭೆಯಲ್ಲೂ ಮಾತನಾಡಿದ ಸಚಿವೆ ನಿರ್ಮಲಾ, “ಕಾಂಗ್ರೆಸ್‌ನ ಯುಗ ಅಂಧಕಾಲ, ಬಿಜೆಪಿಯದ್ದು ಅಮೃತಕಾಲ’ ಎಂದಿದ್ದಾರೆ.

ವಿಪಕ್ಷಗಳ ಸಭಾತ್ಯಾಗ
ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮತ ಹಾಕದಿದ್ದರೆ, ರಾಜ್ಯವು ಕೇರಳ, ಪಶ್ಚಿಮ ಬಂಗಾಲ ಅಥವಾ ಜಮ್ಮು ಕಾಶ್ಮೀರದಂತಾಗುತ್ತದೆ ಎಂಬ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿಕೆ ಖಂಡಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸಿವೆ. ಜತೆಗೆ ಕಾಂಗ್ರೆಸ್‌, ಟಿಎಂಸಿ, ಎನ್‌ಸಿ, ಡಿಎಂಕೆ, ಎಸ್‌ಪಿ, ಕೇರಳ ಕಾಂಗ್ರೆಸ್‌ ಸಭಾತ್ಯಾಗವನ್ನೂ ಮಾಡಿವೆ. ಆಟಿಕೆ ಕೈಗಾರಿಕೆಯನ್ನು ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆಗೆ ಸೇರ್ಪಡೆ ಮಾಡುವ ಪ್ರಸ್ತಾವ‌ ಸದ್ಯಕ್ಕೆ ಸರಕಾರದ ಮುಂದಿಲ್ಲ ಎಂದು ವಾಣಿಜ್ಯ ಖಾತೆ ಸಹಾಯಕ ಸಚಿವ ಸೋಮ್‌ ಪ್ರಕಾಶ್‌ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.

ಕ್ರಿಪ್ಟೋ ಕಾನೂನುಬದ್ಧವಲ್ಲ
ಕ್ರಿಪ್ಟೋ ಕರೆನ್ಸಿಗೆ ವಹಿವಾಟಿನಿಂದ ಬರುವ ಲಾಭಕ್ಕೆ ಶೇ.30 ತೆರಿಗೆ ವಿಧಿಸಲಾಗಿದೆ ನಿಜ. ಹಾಗೆಂದ ಮಾತ್ರಕ್ಕೆ ದೇಶದಲ್ಲಿ ಅದನ್ನು ಕಾನೂನುಬದ್ಧಗೊಳಿಸಲಾಗಿಲ್ಲ ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ದೇಶದಲ್ಲಿ ಕ್ರಿಪ್ಟೋ ಕರೆನ್ಸಿಯ ವಹಿವಾಟಿಗೆ ಮಾನ್ಯತೆ ನೀಡುವ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಇನ್ನೂ ಸಮಾಲೋಚನೆ ನಡೆಯುತ್ತಿದೆ. ಅದು ಮುಕ್ತಾಯವಾದ ಅನಂತರವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು. ನಿರ್ಮಲಾ ಮಾತು ಮುಕ್ತಾಯವಾಗುತ್ತಿದ್ದಂತೆಯೇ ರಾಜ್ಯಸಭೆ ಕಲಾಪವನ್ನು ಮಾ.14ರ ವರೆಗೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next