ಮಂಗಳೂರು: ಪ್ರಸ್ತುತ ಡಿಜಿಟಲ್ ಕಾಲಘಟ್ಟದಲ್ಲಿ ವಿಪುಲ ಅವಕಾಶಗಳಿದ್ದು ತಾಂತ್ರಿಕ ಪದವೀಧರರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಟಿಸಿಎಸ್ – ಹೈಟೆಕ್ ಉದ್ಯಮ ಘಟಕದ ಜಾಗತಿಕ ಮಖ್ಯಸ್ಥ ನಾಗರಾಜ್ ಇಜಾರಿ ಹೇಳಿದರು.
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಶನಿವಾರ ಜರಗಿದ ಪದವಿ ಪ್ರದಾನ ಸಮಾರಂಭದಲ್ಲಿ ಎಂಜಿನಿಯರಿಂಗ್ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿಪುಲ ಅವಕಾಶ
ಪ್ರಸ್ತುತ ದೇಶ ಡಿಜಿಟಲ್ ಕ್ರಾಂತಿಯ ಹಾದಿಯಲ್ಲಿ ಸಾಗುತ್ತಿದೆ. ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಉತ್ಪಾದಕ, ಬ್ಯಾಂಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳು ತೆರೆದುಕೊಂಡಿವೆ. ಈ ಅವಕಾಶಗಳನ್ನು ಜಾಣ್ಮೆಯಿಂದ ಆಯ್ಕೆ ಮಾಡಿಕೊಂಡು ಅದರಲ್ಲಿ ಉನ್ನತ ಸಾಧನೆಯ ಗುರಿಯೊಂದಿಗೆ ಸಾಗಬೇಕು. ಧನಾತ್ಮಕ ಮನೋಭೂಮಿಕೆ, ನಾವೀನ್ಯತೆ, ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂದು ನಾಗರಾಜ್ ಇಜಾರಿ ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ, ಟಿಸಿಎಸ್ ಬೆಂಗಳೂರು ಉಪಾಧ್ಯಕ್ಷ ಇ.ಎಸ್. ಚಕ್ರವರ್ತಿ ಅವರು ಛಲ, ಪರಿಶ್ರಮ ಹಾಗೂ ಉತ್ಕೃಷ್ಟತೆಯ ಗುರಿಯಿಂದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಂಡಾರಿ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ ಅವರು ಪದವಿ ಪ್ರಾಪ್ತಿ ಯೊಂದಿಗೆ ಹೆತ್ತವರ ಹೊಣೆಗಾರಿಕೆ ಮುಗಿದಿದೆ. ಪದವೀಧರರ ಹೊಣೆಗಾರಿಕೆ ಪ್ರಾರಂಭವಾಗಿದೆ. ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸಿನೆಡೆಗೆ ಸಾಗಬೇಕು ಎಂದು ಕರೆ ನೀಡಿದರು.
ಪದವಿ ಪಡೆದ ಪೂಜಾ ಹಾಗೂ ಚಿನ್ಮಯಭರಣ್ ವ್ಯಾಸಂಗ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಉಪಪ್ರಾಂಶುಪಾಲ ಪ್ರೊ| ಎಸ್.ಎಸ್. ಬಾಲಕೃಷ್ಣ ಸ್ವಾಗತಿಸಿದರು. ಪ್ರಾಂಶುಪಾಲ ಡಾ| ಯು.ಎಂ. ಭೂಶಿ ವಂದಿಸಿದರು. ಶೈಕ್ಷಣಿಕ ಡೀನ್ ಡಾ| ಜೆ.ವಿ. ಗೋರಬಾಲ್ ಪ್ರತಿಜ್ಞಾ ವಿಧಿ ಬೋಧಿಸಿದರು.