Advertisement

ಸಾಹಿತಿ ಸಂಕಮ್ಮ ಸಾಧನೆ ಅಜರಾಮರ

02:23 PM Apr 15, 2022 | Team Udayavani |

ಬ್ಯಾಡಗಿ: ಸರ್ಕಾರ, ದೇಶ, ಭೂಪಟವೇ ಬದಲಾದರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ, ಕನ್ನಡ ಸಾಹಿತ್ಯ, ಸಂಸ್ಕೃತಿ ಸಾಹಿತಿ ಕನ್ನಡ ನಾಡಿನ ಚಿರಾಸ್ತಿ, ವ್ಯಾಪಾರಿ ಕೇಂದ್ರವೊಂದರಲ್ಲಿ ಅಕ್ಷರ ಕ್ರಾಂತಿ ಹುಟ್ಟುಹಾಕಿದ ಮಹಿಳಾ ಸಾಹಿತಿ ಸಂಕಮ್ಮ ಸಾಧನೆ ಅಜರಾಮರ ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಂಜನೇಯ ಯುವಕ ಮಂಡಳ, ವಿಶ್ವಾಸ ಫೌಂಡೇಶನ್‌, ಸುವರ್ಣ ಸ್ತ್ರೀ ಸೇವಾ ಸಂಸ್ಥೆ ಬ್ಯಾಡಗಿ, ರಾಣಿಬೆನ್ನೂರಿನ ಸ್ಪಂದನಾ ಸೇವಾ ಸಂಸ್ಥೆ, ಗದುಗಿನ ತ್ವರಿತ ಮುದ್ರಣದ ಸಂಯುಕ್ತಾಶ್ರಯದಲ್ಲಿ ಸಂಕಮ್ಮ ರಚಿಸಿದ “ಬ್ಯಾಡಗಿ ಬಾಗಿನ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಾಚೀನ ಭಾರತದಲ್ಲಿ ಜಾನಪದ, ಪುರಾಣ ಪ್ರವಚನ ಮತ್ತು ಧರ್ಮಗ್ರಂಥಗಳು ಮೌಖೀಕ ಸಾಹಿತ್ಯದ ಪ್ರಕಾರಗಳು ಜನರಲ್ಲಿನ ವಿಸ್ತಾರವಾದ ಜ್ಞಾಪಕ ಶಕ್ತಿಯೊಂದಿಗೆ ಪ್ರಚಲಿತದಲ್ಲಿದ್ದವು. ಆದರೆ, ಲಿಖೀತ ಸಾಹಿತ್ಯ ಸಮಕಾಲೀನ ವಾಸ್ತವ, ಭೂತ ಕಾಲದ ಐತಿಹಾಸಿಕ ಸತ್ಯ ಮತ್ತು ಭವಿಷ್ಯತ್ತಿನ ಜ್ಞಾನ ನೀಡುವ ಶಕ್ತಿ ಹೊಂದಿವೆ. ಹೀಗಾಗಿ, ಸಾಹಿತ್ಯ ಅತ್ಯಂತ ಪ್ರಬಲವಾದ ಸಂವಹನ ಶಕ್ತಿಯಾಗಿದೆ ಎಂದರು.

ಸೌಂದರ್ಯ ಬಿಟ್ಟು ಎದೆಗಾರಿಕೆ ತೋರಿಸಿ: ಲೌಕಿಕ ಜಗತ್ತಿನ ಮಾಯದಲ್ಲಿ ಸಿಲುಕಿರುವ ಇಂದಿನ ಮಹಿಳೆಯರು ಬಾಹ್ಯ ಸೌಂದರ್ಯ ಪ್ರದರ್ಶನದಲ್ಲೇ ಮಗ್ನರಾಗಿದ್ದಾರೆ. ವಿಶ್ವಸುಂದರಿ ಸ್ಪರ್ಧೆ ವಿಜೇತರ ನೆನಪು ಅವರಲ್ಲಿ ಸೌಂದರ್ಯ ಇರುವವರೆಗೂ. ಆದರೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ವೀರರಾಣಿ ಕಿತ್ತೂರ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಶೌರ್ಯ ಪ್ರದರ್ಶಿಸಿದ ಒನಕೆ ಓಬವ್ವ ಮೌಡ್ಯವನ್ನು ಮೆಟ್ಟಿ ನಿಂತು ಶಿಕ್ಷಣ ಪಡೆದ ಸಾವಿತ್ರಿಬಾಯಿ ಪುಲೆ ಇತಿಹಾಸದ ಪುಟ ಸೇರಿದ್ದಾರೆ. ಇನ್ನಾದರೂ ಮಹಿಳೆಯರು ತಮ್ಮ ಪ್ರವೃತ್ತಿ ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದರು.

ಎರಡನೇ ದರ್ಜೆ ನಾಗರಿಕಳಲ್ಲ: ಲೋಕಸೇವಾ ಆಯೋಗದ ಸದಸ್ಯ ಡಾ|ಎಚ್‌.ಎಸ್‌.ನರೇಂದ್ರ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳಾ ಸ್ವಾತಂತ್ರ್ಯದ ಬಗ್ಗೆ ಧ್ವನಿಯೆತ್ತಿದ ಬಸವೇಶ್ವರರ ವಿಚಾರಗಳು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದ ಕಾನೂನಾಗಲಿಲ್ಲ. ಸಾಧಕಿಯರನ್ನು ಕೀಳಾಗಿ ಕಾಣುತ್ತಿರುವ ಸಮಾಜದಲ್ಲಿ ಬ್ಯಾಡಗಿಯಲ್ಲಿ ಮಹಿಳೆಗೆ ಸಿಗುತ್ತಿರುವ ಪ್ರೀತಿ, ವಿಶ್ವಾಸ, ಬೆಂಬಲ ನೋಡಿ ಖುಷಿಯಾಗಿದೆ. ಮಹಿಳೆ ಎಂದಿಗೂ ಎರಡನೇ ದರ್ಜೆ ನಾಗರಿಕಳಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

Advertisement

ಅಕ್ಷರದಲ್ಲೇ ಚಾಟಿ ಏಟು: ಇದಕ್ಕೂ ಮುನ್ನ “ಬ್ಯಾಡಗಿ ಬಾಗಿನ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಬೆಳಗಾವಿಯ ಸಾಹಿತಿ ಡಾ|ಸರಜೂ ಕಾಟ್ಕರ್‌ ಮಾತನಾಡಿ, ಸಂಕಮ್ಮ ಅವರ ಬರಹಗಳು ಸಂಸ್ಕೃತಿ ಮತ್ತು ನಾಯಕರ ಜೀವನ ಚರಿತ್ರೆ ಉದ್ದೇಶಿಸಿದೆ. ಸಮಾಜದ ಅಂಕುಡೊಂಕುಗಳಿಗೆ ಅಕ್ಷರದಲ್ಲೇ ನೇರ ಚಾಟಿ ಏಟು ನೀಡಿದ ಹೆಮ್ಮೆ ಅವರದು. ಅದರಲ್ಲೂ ವಿಶೇಷವಾಗಿ ಸಾಹಿತ್ಯ ಲೋಕದ ದಿಗ್ಗಜರ ಒಡನಾಟ, ಪಾಟೀಲ ಪುಟ್ಟಪ್ಪನವರಂಥ ಆದರ್ಶ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಬಳಿಕ ಸಂಕಮ್ಮನವರ ವಿಚಾರಧಾರೆ ಮತ್ತು ಲಹರಿ ಬದಲಾವಣೆಗೊಂಡಿದೆ. “ಬ್ಯಾಡಗಿ ಬಾಗಿನ’ ಅಭಿನಂದನಾ ಗ್ರಂಥ ಸ್ವರ್ಯಾರ್ಜಿತ ಆಸ್ತಿ. ಅವರಲ್ಲಿನ ಅಧ್ಯಯನಶೀಲತೆ ಪ್ರತಿಬಿಂಬ ಕೂಡ ಹೌದು ಎಂದರು.

ನಿವೃತ್ತ ಪ್ರಾಚಾರ್ಯ ಎಸ್‌.ಬಿ.ತವರದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಾಹಿತಿ ಸತೀಶ್‌ ಕುಲ್ಕರ್ಣಿ, ಹಿರಿಯ ಲೇಖಕಿ ಲೀಲಾ ಕಲಕೋಟಿ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ, ಗದಗ ತ್ವರಿತ ಮುದ್ರಣ ಮುಖ್ಯಸ್ಥ ಅಶೋಕ ಖಟವಟೆ ಉಪಸ್ಥಿತರಿದ್ದರು. ಜೀವರಾಜ ಛತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು, ಪುಷ್ಪಾ ಶಲವಡಿಮಠ ಸ್ವಾಗತಿಸಿ, ಜಮೀರ ರಿತ್ತಿ ನಿರೂಪಿಸಿ, ಶಂಭು ಮಠದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next